ಮನೋರಂಜನೆ

ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿಸಿದ ಕತ್ರಿನಾ

Pinterest LinkedIn Tumblr

psmec05Katrina-kaif

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ ‘ಫಿತೂರ್‌’ ಸಿನಿಮಾ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಇತ್ತೀಚಿಗೆ ಪೂರ್ಣಗೊಳಿಸಿದರು.
ಚಿತ್ರದಲ್ಲಿ ಆದಿತ್ಯ ರಾಯ್‌ ಕಪೂರ್‌ ಕೂಡ ನಟಿಸಿದ್ದು, ಅವರ ಜೊತೆಗಿನ ರೊಮ್ಯಾಂಟಿಕ್‌ ದೃಶ್ಯದ ಚಿತ್ರೀಕರಣ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ದಾಲ್‌ ಸರೋವರದ ಬಳಿ ನಡೆಯಿತು. ಕಾಶ್ಮೀರದ ವಿವಿಧೆಡೆ ಆರು ದಿನ ಚಿತ್ರೀಕರಣ ನಡೆಸಲಾಯಿತು.

ಈಗಾಗಲೇ ಚಿತ್ರದ ಕೆಲ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಆದಿತ್ಯ ಮತ್ತು ಕತ್ರಿನಾ ನಡುವಿನ ಚುಂಬನ ದೃಶ್ಯದ ಫೋಟೋಗಳು ಭಾರಿ ಸದ್ದು ಮಾಡಿವೆ. ಕಾಶ್ಮೀರದಲ್ಲಿ ಆರು ದಿನವೂ ಕತ್ರಿನಾ ಅವರಿಗೆ ಮೂರು ಹಂತಗಳ ಭಾರಿ ಭದ್ರತೆ ಒದಗಿಸಲಾಗಿತ್ತು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿತ್ರೀಕರಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ನಿಶಾತ್‌ ಬಾಗ್‌ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿತ್ತು. ಲೇಖಕ ಚಾರ್ಲ್ಸ್‌ ಡಿಕೆನ್ಸ್‌ ಅವರ ಕಾದಂಬರಿ ‘ಗ್ರೇಟ್‌ ಎಕ್ಸ್‌ಪೆಕ್‌ಟೇಶನ್ಸ್‌’ ಆಧರಿಸಿದ ಚಿತ್ರ ‘ಫಿತೂರ್‌’. ಚಿತ್ರದ ಕಥೆಯು ಅನಾಥ ಪಿಪ್‌, ಶ್ರೀಮಂತ ಮನೆತನದ ಮಿಸ್‌ ಹ್ಯಾವಿಶಂ ಮತ್ತು ಅವರ ದತ್ತು ಪುತ್ರಿ ಎಸ್ಟೀಲಾ ಸುತ್ತ ಸುತ್ತುತ್ತದೆ.

ಕತ್ರಿನಾ ಅವರು ಎಸ್ಟೀಲಾ ಪಾತ್ರವನ್ನು ನಿರ್ವಹಿಸಿದ್ದರೆ, ಆದಿತ್ಯ ಪಿಪ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ರೇಖಾ ಅವರು ಮಿಸ್‌ ಹ್ಯಾವಿಶಂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಬಾಲಿವುಡ್ ಚಿತ್ರಗಳ ಚಿತ್ರೀಕರಣ ಹೆಚ್ಚಾಗಿದೆ. ಹಲವು ನಿರ್ಮಾಪಕರು ಕಣಿವೆ ರಾಜ್ಯದಲ್ಲಿ  ಚಿತ್ರೀಕರಣ ಮಾಡುತ್ತಿದ್ದಾರೆ.

ಶಾಹೀದ್‌ ಕಪೂರ್‌ ನಟನೆಯ ‘ಹೈದರ್‌’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕೆಲವರು ಅಡ್ಡಿಪಡಿಸಿದ್ದು ಬಿಟ್ಟರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ಇದಕ್ಕೂ ಮುನ್ನ ‘ಹೈವೇ’, ‘ಯೇ ಜವಾನಿ ಹೈ ದಿವಾನಿ’, ‘ಜಬ್‌ ತಕ್‌ ಹೈ ಜಾನ್‌’ ಮತ್ತು ‘ರಾಕ್‌ಸ್ಟಾರ್‌’ ಸಿನಿಮಾಗಳ ಚಿತ್ರೀಕರಣ ಅಲ್ಲಿ ನಡೆದಿತ್ತು.

Write A Comment