ಕನ್ನಡ ವಾರ್ತೆಗಳು

ಬದಲಾದ ಕೆಲಸವೇ ವಿಶ್ರಾಂತಿ

Pinterest LinkedIn Tumblr

bhec07pg02Raje137078970

ಉದ್ಯೋಗಸ್ಥ ಮಹಿಳೆಯರಾದ ನಮಗೆ ಅನಾರೋಗ್ಯವನ್ನು ಹೊರತುಪಡಿಸಿ, ದೇವಸ್ಥಾನ, ಹಬ್ಬಗಳು, ಮದುವೆ, ಮುಂಜಿ, ಹೋಮ- ಹವನ ಇಂತಹ ನೂರಾರು ಕಾರಣಗಳಿಗಾಗಿ ರಜೆ ಬೇಕಾಗಬಹುದು. ಇವುಗಳನ್ನು ಕಡ್ಡಾಯವಾಗಿ ಹೀಗೆ ಮಾಡಬೇಕು ಎಂಬ ಕಟ್ಟುಪಾಡು, ನಮಗೆ ರಜೆಗಳ ಕೊರತೆಗೆ ಕಾರಣವಾಗಬಹುದು.

ಇತರ ಮಹಿಳೆಯರೊಡನೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು, ಅವರಂತೆ ಜೀವನ ಶೈಲಿ ಇದ್ದಲ್ಲಿ, ನಮ್ಮದು ಆದರ್ಶ ಕುಟುಂಬವಾಗುವುದು ಎಂಬ ಚಿಂತನೆ ಎರಡು ದೋಣಿಯ ಪ್ರಯಾಣದಂತೆ. ನಮ್ಮಲ್ಲಿ ಅತೃಪ್ತಿಯ ಹುಳಿಗೆ ಕಾರಣವಾಗಿ, ಕುಟುಂಬ ಹಾಗೂ ವೃತ್ತಿ ಜೀವನ ಎರಡರಲ್ಲೂ ವಿಫಲರಾಗುತ್ತಾ ಅಸಹಕಾರ, ಅಸೂಯೆ, ಚಾಡಿ ಹೇಳುವುದು ಇಂತಹ ದುರ್ಗುಣಗಳ ಗೂಡಾಗುತ್ತಾ, ನಿವೃತ್ತಿಯೊಂದಿಗೆ ಒಂದಷ್ಟು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೂ ತುತ್ತಾಗಬಹುದು.

ಶಿಕ್ಷಕಿಯಾದ ನಾನು ‘ಬದಲಾದ ಕೆಲಸವೇ ವಿಶ್ರಾಂತಿ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟು, ಪ್ರಾಯೋಗಿಕವಾಗಿ ವೃತ್ತಿ ಜೀವನ ಪೂರ್ಣ ಅತ್ಯಂತ ಕಡಿಮೆ ರಜೆಯಲ್ಲಿಯೇ ಕಳೆದೆನು. ಬಹುಶಃ ವೃತ್ತಿ ಪ್ರಾರಂಭದಲ್ಲಿಯ ಉತ್ಸಾಹ ಕೊನೆಯ ದಿನದವರೆಗೆ ಉಳಿಯಲು ಇದೂ ಒಂದು ಕಾರಣ. ಸಂಬಳಕ್ಕಾಗಿ ನಮ್ಮ ಕೆಲಸ ಮಾಡಿದರೆ ಸಾಲದು, ಅದು ಉತ್ತಮ ಪ್ರತಿಫಲ ನೀಡಬೇಕಾದರೆ ಜವಾಬ್ದಾರಿಯುತವಾಗಿ ಮಾಡುವುದು ಅವಶ್ಯ.

ಶಿಕ್ಷಕರಿಗೆ ಕರ್ತವ್ಯ ಪ್ರಜ್ಞೆಯೊಂದೇ ಸಾಲದು, ಕರ್ತವ್ಯ ಬದ್ಧತೆಯೂ ಅವಶ್ಯಕ ಎಂಬ ಅರಿವು ನನ್ನ ಅನುಭವ ಕಲಿಸಿತು. ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ, ಪಠ್ಯೇತರ ಅಥವಾ ಜೀವನದ ಸಾಧನೆಯ ಯಶೋಗಾಥೆಯ ಸಂತೋಷ ಯಾವ ರಜೆಯಿಂದಲೂ ಸಿಗುವುದಿಲ್ಲ.

ಶಿಕ್ಷಕ ವೃತ್ತಿಯಲ್ಲಿ ಕಲಿಸುವ, ಕಲಿಯುತ್ತಾ ಕಲಿಸುವ, ಕಲಿಸುತ್ತಾ ಕಲಿಯುವ ಅವಕಾಶಗಳು ವಿಪುಲವಾಗಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ, ವಿಶೇಷ ತಯಾರಿಗಾಗಿ ರಜೆ ಕಳೆಯುವುದು ಆರೋಗ್ಯದಾಯಕವೇ. ಜೊತೆಗೆ ಆತ್ಮೀಯರನ್ನು ಭೇಟಿಯಾಗುವುದು, ಒಂದೊಳ್ಳೆ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಯಂತಹ ಹವ್ಯಾಸದಲ್ಲಿ ತೃಪ್ತಿಕರವಾಗಿ ಮೂವ್ವತ್ತೈದು ವರ್ಷ ಕಳೆದೇ ಹೋಯಿತು.

ಪ್ರತಿ ವರ್ಷ ಹೊಸ ಮಕ್ಕಳ ದಾಖಲಾತಿ, ಹೊಸ ಪ್ರತಿಭೆಗಳು, ಹೊಸ ಕುತೂಹಲ, ಹೊಸ ಉತ್ಸಾಹ, ಹೊಸಹೊಸ ಯೋಜನೆಗಳು, ಹೊಸ ಸಂಕಲ್ಪಗಳು ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳ ಹೊಸ ದಾಖಲೆಗಳು ಆ ಪ್ರಪಂಚದಲ್ಲಿಯ ಸಂಭ್ರಮ, ಸಂತೋಷಕ್ಕೆ ಕೊನೆಯೇ ಇಲ್ಲ. ಅನುಭವಿಸುವ ಒಂದು ಒಳ್ಳೆಯ ಹೃದಯ ನಮ್ಮದಾಗಿದ್ದಲ್ಲಿ ನಮ್ಮ ದೇಹಕ್ಕೆ ವಯಸ್ಸಾಗುತ್ತಿರುವುದರ ಅರಿವೇ ಉಂಟಾಗದಂತಹ ಚಿರಯೌವ್ವನ ಮನಸ್ಸು ನಮ್ಮದಾಗುವುದು ಎಂಬುದಕ್ಕೆ ನಾನೇ ಸಾಕ್ಷಿ.

ಉದ್ಯೋಗಸ್ಥ ಮಹಿಳೆಯರು ಕೇವಲ ವಿದ್ಯಾವಂತ ಮಹಿಳೆಯಷ್ಟೇ ಅಲ್ಲ, ವಿದ್ಯೆಯನ್ನು eಎನ್‌ಕ್ಯಾಷ್‌ ಮಾಡಿಕೊಳ್ಳುವ ಮಹಿಳೆಯೂ ಹೌದು. ಹಾಗಾಗಿ ತಾನು ಪಡೆಯುವ ಸಂಬಳಕ್ಕೆ ನ್ಯಾಯ ಒದಗಿಸಿದಲ್ಲಿ ಮಾತ್ರ ಆ ವೃತ್ತಿಗೌರವ ಹೆಚ್ಚುವುದು. ಇದು ಮಾನಸಿಕ ನೆಮ್ಮದಿ ಕೊಡುವುದರೊಂದಿಗೆ ನಮ್ಮ ಆತ್ಮಸಾಕ್ಷಿ ನಮ್ಮನ್ನು ಮೆಚ್ಚುವಂತ ಮನೋಸ್ಥಿತಿ, ನಿವೃತ್ತ ಜೀವನದಲ್ಲಿ ಮೆಲುಕು ಹಾಕಲು ಒಂದಷ್ಟು ಸಿಹಿನೆನಪುಗಳು, ಹಿರಿಯರಿಗೆ ಹೆಮ್ಮೆಯ ಮಕ್ಕಳು, ಕಿರಿಯರಿಗೆ ಆದರ್ಶ ವ್ಯಕ್ತಿಗಳಾಗಬಹುದು.
–ವಾಗ್ದೇವಿ.ಆರ್, ದಾವಣಗೆರೆ

ಮುಗಿದೇ ಹೋಯಿತಲ್ಲ ರಜೆ!
ಕಚೇರಿ ಮನೆ ಎರಡೂ ಕಡೆ ದುಡಿಯುವ ಉದ್ಯೋಗಸ್ಥ ಮಹಿಳೆಯರಿಗೆ ವಾರದ ರಜಾದಿನಗಳಲ್ಲಾದರೂ ಕಚೇರಿ ಕೆಲಸದಿಂದ ಬಿಡುವು. ಆದರೆ ನನ್ನಂತಹ ಗೃಹಿಣಿಯರಿಗೆ ರಜಾದಿನಗಳೂ ಒಂದೇ, ವಾರದ ಉಳಿದ ದಿನಗಳೂ ಒಂದೇ ಎಂಬ ಮುನಿಸು ಸಹಜ. ಆದರೂ ಮುಂಜಾನೆಯೇ ಎದ್ದು ತಿಂಡಿ, ಊಟದ ಡಬ್ಬದ ತಯಾರಿ ಎಂಬ ಮಕ್ಕಳ ಶಾಲೆಯ ತರಾತುರಿಯಾಗಲಿ, ಪತಿಯ ಆಫೀಸಿನ ಗಡಿಬಿಡಿಯಾಗಲಿ ಇರದೆ ಆರಾಮಾಗಿ ನನ್ನಿಷ್ಟ ಬಂದಷ್ಟು ಹೊತ್ತು ಮಲಗಿ, ಬೆಳಗಿನ ಚಹಾ ಹೀರುತ್ತ ನ್ಯೂಸ್ ಪೇಪರ್ ಓದುವ ಸುಖದ ಕ್ಷಣಗಳಿಗಾಗಿ ನಾನು ಕಾಯುತ್ತೇನೆ.

ರಜಾದಿನಗಳಲ್ಲಿ ಊಟ,ತಿಂಡಿ ಸ್ನಾನದಂತಹ ದಿನಚರಿಗಳಿಗೆ ವೇಳೆಯ ನಿರ್ಭಂದ ಇರುವುದಿಲ್ಲ. ಭಾನುವಾರದ ಸ್ಪೆಷಲ್ ತಿಂಡಿ, ಊಟದ  ತಯಾರಿ ಇದ್ದರೂ ಸಂಜೆಯ ಶಾಪಿಂಗ್  ಅಪರೂಪಕ್ಕೆ ಸಿನಿಮಾ, ಹೋಟೆಲ್ ಸುತ್ತಾಟದ ಗುಂಗಿನಲ್ಲಿ ಅದೇನೂ ಹೊರೆ ಅನಿಸುವುದಿಲ್ಲ. ಒಮ್ಮೊಮ್ಮೆ ಮಕ್ಕಳನ್ನು ಪಾರ್ಕ್‌ಗೆ ಕರೆದೊಯ್ದು ಅವರ ಖುಷಿಯಲ್ಲಿ ನಾನೂ ಭಾಗಿಯಾಗುತ್ತೇನೆ.

ಒಂದೆರಡು ದಿನ ಜಾಸ್ತಿ ರಜಾ ಇದ್ದರೆ ಹತ್ತಿರದ ಪ್ರವಾಸಿ ಸ್ಥಳಗಳಿಗೆ ಹೋಗುವುದು ಉಂಟು. ಎಷ್ಟು ಬೇಗ ಭಾನುವಾರ ಮುಗಿದೇ ಹೋಯಿತಲ್ಲ ಎನ್ನುವ ನಿರಾಸೆ ಬದಿಗೊತ್ತಿ, ಮುಂದಿನ ವಾರಕ್ಕೆ ಬೇಕಾಗುವಷ್ಟು ಉತ್ಸಾಹ, ಚೈತನ್ಯ, ತುಂಬಿಕೊಳ್ಳುತ್ತೇನೆ.
–ಮೇಧಾ ಭಟ್

ಕೌಟುಂಬಿಕ ಸುಖವೇ ಸತ್ಯ
ಸೋಮವಾರ ಶುರುವಾದಂದಿನಿಂದಲೇ ಮತ್ತೆ ಭಾನುವಾರ ಹಾಗೂ ಎರಡನೇ ಶನಿವಾರ ಯಾವಾಗ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತೇನೆ. ಏಕೆಂದರೆ ನಾನು ಬೆಳಗ್ಗೆ ೮ಕ್ಕೆ ಮನೆ ಬಿಟ್ಟರೆ ಮನೆ ಸೇರುವುದು ರಾತ್ರಿ 8ಕ್ಕೆ ಹಾಗಾಗಿ ಭಾನುವಾರ ವಿಶ್ರಾಂತಿಗಿಂತ ಹೆಚ್ಚಾಗಿ ಮನೆಯಲ್ಲಿ ಮಕ್ಕಳ ಜೊತೆ ಇರಬಹುದಲ್ಲ ಎಂಬ ಸಂತೋಷ So ಭಾನುವಾರ ನಿಧಾನವಾಗಿ ಎದ್ದು ಮಕ್ಕಳ ಜೊತೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತೇನೆ ಮನೆಯ ಸ್ವಚ್ಚತೆ ವಾರದಿಂದ ಉಳಿಸಿಟ್ಟುಕೊಂಡ ಕೆಲಸ ಇದರಲ್ಲೇ ಭಾನುವಾರ ಕಳೆದು ಹೋಗುತ್ತದೆ. ಆಧುನಿಕ ಮಹಿಳೆ ಎಷ್ಟೇ ಉನ್ನತ ಹುದ್ದೆಯಲ್ಲಿದ್ದು ಕರ್ತವ್ಯ ನಿರ್ವಹಿಸಿದರೂ ಕುಟುಂಬ ನಿರ್ವಹಣೆ ಪತಿ ಮಕ್ಕಳ ಸುಖದಲ್ಲೇ ಸುಖವನ್ನು ಕಾಣುತ್ತಾಳೆ ಎನ್ನುವುದು ಸತ್ಯ.
-ಮೀರಾ ಎ.ವಿ

Write A Comment