ಬ್ರಿಸ್ಬೇನ್, ಜ.11: ವಿಶ್ವದ ನಂ.2ನೆ ಟೆನಿಸ್ ತಾರೆ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ವೃತ್ತಿ ಬದುಕಿನಲ್ಲಿ 1,000ನೆ ಗೆಲುವು ದಾಖಲಿಸಿದ್ದಾರೆ.
ಪ್ಯಾಟ್ ರಾಫ್ಟೆರ್ ಅರೆನಾದಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಫೆಡರರ್ ಕೆನೆಡಾದ ಮಿಲೋಸ್ ರಾವೊನಿಕ್ ವಿರುದ್ಧ 6-4, 6-7(2/7),6-4 ಅಂತರದಿಂದ ಜಯ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಈ ಪ್ರಶಸ್ತಿಯೊಂದಿಗೆ 33ರ ಹರೆಯದ ಫೆಡರರ್ ವೃತ್ತಿ ಬದುಕಿನಲ್ಲಿ ಜಯಿಸಿದ ಸಿಂಗಲ್ಸ್ ಪ್ರಶಸ್ತಿಗಳ ಸಂಖ್ಯೆಯನ್ನು 83ಕ್ಕೆ ಏರಿಸಿದ್ದಾರೆ. ಇದರಲ್ಲಿ 17 ಗ್ರಾನ್ ಸ್ಲಾಮ್ ಪ್ರಶಸ್ತಿಗಳು ಒಳಗೊಂಡಿವೆೆ. ಫೆಡರರ್ 1,000 ಪಂದ್ಯಗಳಲ್ಲಿ ಜಯ ಗಳಿಸಿದ ವಿಶ್ವದ ಮೂರನೆ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ. ಅಮೆರಿಕದ ಜಿಮ್ಮಿ ಕಾರ್ನರ್ಸ್(1,253 ಜಯ) ಮತ್ತು ಝೆಕ್‌ನ ಇವಾನ್ ಲಿಂಡ್ಲ್(1,071ಜಯ) ಬಳಿಕದ ಸ್ಥಾನವನ್ನು ಫೆಡರರ್ ತನ್ನದಾಗಿಸಿಕೊಂಡಿದ್ದಾರೆ.
ರಾವೊನಿಕ್ ಅವರಿಗೆ ಫೆಡರರ್ ಬ್ರಿಸ್ಬೇನ್ ಓಪನ್‌ನಲ್ಲಿ ಕಠಿಣ ಸವಾಲನ್ನೊಡ್ಡಿದ್ದರು. 2 ಗಂಟೆ ಮತ್ತು 13 ನಿಮಿಷಗಳ ಕಾಲ ಹೋರಾಟ ನಡೆಸಿ ಫೆಡರರ್ ಗೆಲುವಿನ ನಗೆ ಬೀರಿದರು.
ಎರಡನೆ ಮತ್ತು ಮೂರನೆ ಸೆಟ್‌ನಲ್ಲಿ ಹೋರಾಟ ನಡೆಸಿ ಫೆಡರರ್‌ನ್ನು ಮಣಿಸಲು ರಾವೊನಿಕ್ ಪ್ರಯತ್ನ ನಡೆಸಿದ್ದರು. ಆದರೆ ತನ್ನ ಸ್ಮರಣೀಯ 1,000ನೆ ಗೆಲುವನ್ನು ಇದೇ ಪಂದ್ಯದಲ್ಲಿ ದಾಖಲಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದ ಫೆಡರರ್ ಅವರು ರಾವೊನಿಕ್‌ಗೆ ಗೆಲುವು ನಿರಾಕರಿಸಿದರು.
ಫೆಡರರ್ ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋತಿದ್ದರೆ ಈ ಮಹತ್ವದ ಮೈಲುಗಲ್ಲನ್ನು ಮುಟ್ಟಲು ಮುಂದಿನ ವಾರ ಪ್ರಾರಂಭಗೊಳ್ಳಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಮೆಂಟ್‌ನ ತನಕ ಕಾಯಬೇಕಿತ್ತು.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳುವ ಖ್ಯಾತ ಟೆನಿಸ್ ಆಟಗಾರರು ಬ್ರಿಸ್ಬೇನ್ ಓಪನ್‌ನ್ನು ಅಭ್ಯಾಸದ ಟೂರ್ನಿಯಾಗಿ ಬಳಸಿಕೊಳ್ಳುತ್ತಾರೆ. ಶನಿವಾರ ಫೆಡರರ್ ಬ್ರಿಸ್ಬೇನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲ್ಗೇರಿಯಾದ ಗ್ರಿಗೋರ್ ದಿಮಿಟ್ರೋವ್ ವಿರುದ್ಧ 6-2,6-2 ಸೆಟ್‌ಗಳಿಂದ ಜಯ ಗಳಿಸಿ ವೃತ್ತಿಬದುಕಿನಲ್ಲಿ ದಾಖಲಿಸಿದ್ದ ಗೆಲುವಿನ ಸಂಖ್ಯೆಯನ್ನು 999ಕ್ಕೆ ಏರಿಸಿದ್ದರು.
ಕಳೆದ ಸಾಲಿನಲ್ಲಿ ಬ್ರಿಸ್ಬೇನ್ ಟೂರ್ನಿಯ ಫೈನಲ್‌ನಲ್ಲಿ ಫೆಡರರ್ ಅವರು ಲೈಟನ್ ಹೆವಿಟ್ ವಿರುದ್ಧ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿದ್ದರು. ಆದರೆ ಈ ಬಾರಿ ಪ್ರಶಸ್ತಿ ಎತ್ತುವಲ್ಲಿ ಯಶಸ್ವಿಯಾದರು.
ಫೆಡರರ್ ಮಹತ್ವದ ಗೆಲುವಿನೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಐದನೆ ಬಾರಿ ಪ್ರಶಸ್ತಿ ಬಾಚಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದಾರೆ. ಆಸ್ಟ್ರೇಲಿಯನ್ ಓಪನ್ ಜನವರಿ 19ರಂದು ಆರಂಭಗೊಳ್ಳಲಿದೆ.
