ಮನೋರಂಜನೆ

ವಿಶ್ವಕಪ್: ಕಾಣೆಯಾದ ವಿಶ್ವ ಕ್ರಿಕೆಟ್ ಕಲಿಗಳು

Pinterest LinkedIn Tumblr

yuvraj-wc_1101getty_63013

ಹೊಸದಿಲ್ಲಿ, ಜ.11: ಹನ್ನೊಂದನೆಯ ಆವೃತ್ತಿಯ ಐಸಿಸಿ ವಿಶ್ವಕಪ್ ಆರಂಭವಾಗಲು ಇನ್ನು ಕೇವಲ 33 ದಿನಗಳು ಬಾಕಿ ಉಳಿದಿದ್ದು, ವಿಶ್ವಕಪ್‌ಗೆ ಅರ್ಹತೆ ಪಡೆದಿರುವ 14 ತಂಡಗಳು ಅಂತಿಮ 15 ಆಟಗಾರರ ತಂಡವನ್ನು ಐಸಿಸಿಗೆ ಸಲ್ಲಿಸಿವೆ.

ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ಸ್ಟಾರ್ ಆಟಗಾರರನ್ನು ಕೈಬಿಡುವ ಮೂಲಕ ಅಚ್ಚರಿಗೊಳಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ ಯುವರಾಜ್ ಸಿಂಗ್, ವಿಂಡೀಸ್‌ನ ಆಲ್‌ರೌಂಡರ್‌ಗಳಾದ ಡ್ವೇಯ್ನಾ ಬ್ರಾವೊ ಹಾಗೂ ಕೀರನ್ ಪೊಲಾರ್ಡ್ ಸಹಿತ ಪ್ರಮುಖ 10 ಆಟಗಾರರು ಹೊರಗುಳಿದಿದ್ದಾರೆ.

1.ಯುವರಾಜ್ ಸಿಂಗ್: ವಿಶ್ವಕಪ್‌ಗೆ ಭಾರತ ತಂಡ ಅಂತಿಮ 15ರ ತಂಡ ಪ್ರಕಟಿಸುವ 48 ಗಂಟೆಗಳ ಮೊದಲು ಸಂಭಾವ್ಯಪಟ್ಟಿಯಲ್ಲಿಲ್ಲದ ಯುವರಾಜ್ ಸಿಂಗ್ ತಂಡಕ್ಕೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ರಣಜಿಯಲ್ಲಿ ಪಂಜಾಬ್ ಪರ ಹ್ಯಾಟ್ರಿಕ್ ಶತಕ ಸಿಡಿಸಿದ್ದ ಯುವಿ, ಗಾಯಾಳು ರವೀಂದ್ರ ಜಡೇಜ ಬದಲಿಗೆ ವಿಶ್ವಕಪ್ ವಿಮಾನ ಏರುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಯುವಿಗೆ ವಿಶ್ವಕಪ್ ಟಿಕೆಟ್ ನೀಡದೆ ನಿರಾಸೆಗೊಳಿಸಿತು.

2. ಡ್ವೇಯ್ನ ಬ್ರಾವೊ: ಈ ಹಿಂದೆ ವೆಸ್ಟ್‌ಇಂಡೀಸ್‌ನ ನಾಯಕತ್ವ ಹಾಗೂ ಆಲ್‌ರೌಂಡರ್ ವಿಷಯದಲ್ಲಿ ಮೊದಲ ಆಯ್ಕೆಯಾಗಿದ್ದ ಡ್ವೇಯ್ನೆ ಬ್ರಾವೊ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ. ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವಿನ ವೇತನ ವಿವಾದದಲ್ಲಿ ಬ್ರಾವೊ ನೇತೃತ್ವವಹಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

3. ಕೀರನ್ ಪೊಲಾರ್ಡ್: ವಿಂಡೀಸ್‌ನ ದೈತ್ಯ ಆಟಗಾರ ಪೊಲಾರ್ಡ್ ಕಳೆದ 6 ತಿಂಗಳಿಂದ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ. ಆದರೆ, ಪಂದ್ಯದ ಚಿತ್ರಣವನ್ನು ಬದಲಿಸುವ ಸಾಮರ್ಥ್ಯ ಅವರಲ್ಲಿದೆ. ಭಾರತ ಪ್ರವಾಸವನ್ನು ಮೊಟಕುಗೊಳಿಸಲು ನಾಯಕ ಬ್ರಾವೊಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಪೊಲಾರ್ಡ್‌ರನ್ನು ವಿಂಡೀಸ್ ಕ್ರಿಕೆಟ್ ಮಂಡಳಿ ವಿಶ್ವಕಪ್‌ನಿಂದ ಕೈಬಿಟ್ಟಿದೆ.
4.: ಅಲೆಸ್ಟೈರ್ ಕುಕ್: ಕುಕ್‌ರಿಂದ ಏಕದಿನ ತಂಡದ ನಾಯಕತ್ವವನ್ನು ಕಸಿದುಕೊಂಡಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ವಿಶ್ವಕಪ್ ತಂಡದಿಂದಲೂ ಹೊರಗಿಟ್ಟಿತು. ಕುಕ್ ನಾಯಕತ್ವದಲ್ಲಿ ಇಂಗ್ಲೆಂಡ್, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು 5-2 ಅಂತರದಿಂದ ಸೋತಿತ್ತು. ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಕುಕ್‌ಗೆ ಹಿನ್ನಡೆಯಾಗಿ ಪರಿಣಮಿಸಿತು.

5. ಉಮರ್ ಗುಲ್: ಮಂಡಿ ನೋವಿನಿಂದ ಬಳಲುತ್ತಿದ್ದ ಪಾಕ್‌ನ ವೇಗದ ಬೌಲರ್ ಉಮರ್‌ಗುಲ್ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ ಆಡುವ ಕನಸು ಭಗ್ನಗೊಂಡಿದೆ.

6. ಕಮ್ರಾನ್ ಅಕ್ಮಲ್: ಪಾಕ್‌ನ ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ವಿಶ್ವಕಪ್‌ಗೆ ಕಡೆಗಣಿಸಲ್ಪಟ್ಟಿದ್ದಾರೆ. ಸರ್ಫ್ರಾಝ್ ಅಹ್ಮದ್ ಅವರು ಅಕ್ಮಲ್ ಸ್ಥಾನ ತುಂಬಲು ಸಜ್ಜಾಗಿದ್ದು, ಹಿರಿಯ ಆಟಗಾರ ಅಕ್ಮಲ್ ಸ್ಥಾನಕ್ಕೆ ಸಂಚಕಾರ ತಂದಿತ್ತು.

7. ರಿಯಾನ್ ಹ್ಯಾರಿಸ್: ಮುಂದಿನ ವರ್ಷದ ಆ್ಯಶಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಹ್ಯಾರಿಸ್‌ರನ್ನು ವಿಶ್ವಕಪ್‌ನಿಂದ ಕೈಬಿಟ್ಟಿದೆ. ಹ್ಯಾರಿಸ್ ವಿಶ್ವಕಪ್‌ನಲ್ಲಿ ಆಡಬೇಕೆಂಬ ಕನಸು ಕಂಡಿದ್ದರು.

8. ಅಜಂತ ಮೆಂಡಿಸ್: ಈ ಹಿಂದೆ ಭಾರತ ಸೇರಿದಂತೆ ಎಲ್ಲ ತಂಡಗಳ ಕ್ರಿಕೆಟಿಗರಿಗೆ ಸ್ಪಿನ್ ಬೌಲಿಂಗ್‌ನಿಂದ ಕಾಡಿದ್ದ ಶ್ರೀಲಂಕಾದ ಮೆಂಡಿಸ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಈ ಮೂಲಕ ಅವರ ವೃತ್ತಿಜೀವನ ಕೊನೆಗೊಂಡಂತಾಗಿದೆ.

9. ಜಿಮ್ಮಿ ನೀಶಾಮ್: ನ್ಯೂಝಿಲೆಂಡ್‌ನ ಯುವ ಆಲ್‌ರೌಂಡರ್ ನೀಶಾಮ್ ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿಲ್ಲ. ನೀಶಾಮ್ ಬದಲಿಗೆ ಗ್ರಾಂಟ್ ಎಲಿಯಟ್ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.

10: ರಾಬಿನ್ ಪೀಟರ್ಸನ್: ದಕ್ಷಿಣ ಆಫ್ರಿಕದ ಪೀಟರ್ಸನ್ ಮೂರು ವಿಶ್ವಕಪ್‌ನಲ್ಲಿ ಆಡಿದ್ದರು. ಎಡಗೈ ಸ್ಪಿನ್ನರ್ ಪೀಟರ್ಸನ್ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲರು. ಈ ವರ್ಷದ ವಿಶ್ವಕಪ್‌ನಲ್ಲಿ ಪೀಟರ್ಸನ್‌ಗೆ ಸ್ಥಾನ ನೀಡಲಾಗಿಲ್ಲ.

Write A Comment