ಮನೋರಂಜನೆ

ಫೆಡರೇಶನ್ ಕಪ್ ಫುಟ್ಬಾಲ್ ಟೂರ್ನಿ: ಬೆಂಗಳೂರು ಎಫ್‌ಸಿಗೆ ಚೊಚ್ಚಲ ಪ್ರಶಸ್ತಿ

Pinterest LinkedIn Tumblr

bengaluru-fed-cup-

ಮಾರ್ಗೋವಾ, ಜ.11: ಡೆಂಪೊ ಎಫ್‌ಸಿ ತಂಡವನ್ನು ಮಣಿಸಿದ ಬೆಂಗಳೂರು ಎಫ್‌ಸಿ ತಂಡ ಇದೇ ಮೊದಲ ಬಾರಿ ಫೆಡರೇಶನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ರವಿವಾರ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ನಾಯಕ ಸುನೀಲ್ ಚೆಟ್ರಿ (10ನೆ ನಿಮಿಷ) ಹಾಗೂ ಬದಲಿ ಆಟಗಾರ ರಾಬಿನ್ ಸಿಂಗ್ (65ನೆ ನಿ.) ದಾಖಲಿಸಿದ ತಲಾ ಒಂದು ಗೋಲು ನೆರವಿನಿಂದ ಆತಿಥೇಯ ಡೆಂಪೊ ತಂಡವನ್ನು 2-1 ಅಂತರದಿಂದ ಮಣಿಸಿತು. ಡೆಂಪೊ ಪರ ಟಾಲ್ಗೆ ಓಝ್ಬೆ(45+4) ಏಕೈಕ ಗೋಲು ಬಾರಿಸಿದರು.

ಎರಡು ವರ್ಷಗಳ ಹಿಂದೆ ಆರಂಭವಾದ ಬೆಂಗಳೂರು ಎಫ್‌ಸಿ ತಂಡ ಎರಡನೆ ಬಾರಿ ಪ್ರಮುಖ ಪ್ರಶಸ್ತಿಯನ್ನು ಜಯಿಸಿದೆ. ಬಿಎಫ್‌ಸಿ ಕಳೆದ ಋತುವಿನಲ್ಲಿ ಐ-ಲೀಗ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

2004ರಲ್ಲಿ ಫೆಡರೇಶನ್ ಕಪನ್ನು ಜಯಿಸಿದ್ದ ಡೆಂಪೊ ಎಫ್‌ಸಿ ಐದನೆ ಬಾರಿ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಬೆಂಗಳೂರು ತಂಡದ ಡಿಫೆಂಡರ್ ಕರ್ಟಿಸ್ ಒಸಾನೊ ‘ಪಂದ್ಯದ ಹೀರೋ’ ಆಗಿ ಆಯ್ಕೆಯಾಗಿ 10,000 ರೂ. ಬಹುಮಾನ ಪಡೆದರು. ಡೆಂಪೊದ ರೊಮಿಯೊ ಫೆರ್ನಾಂಡಿಸ್ ‘ಟೂರ್ನಮೆಂಟ್‌ನ ಹೀರೋ’ ಪ್ರಶಸ್ತಿಗೆ ಆಯ್ಕೆಯಾಗಿ 1 ಲಕ್ಷ ರೂ. ಬಹುಮಾವನ್ನು ಪಡೆದುಕೊಂಡರು.

ಉಭಯ ತಂಡಗಳು ಅಜೇಯವಾಗಿ ಫೈನಲ್‌ಗೆ ತಲುಪಿದ್ದವು. ರವಿವಾರ ನಡೆದ ಫೈನಲ್‌ನಲ್ಲಿ ಎರಡೂ ತಂಡಗಳು ಪೈಪೋಟಿ ನೀಡಿದವು. ಬೆಂಗಳೂರು 10ನೆ ನಿಮಿಷದಲ್ಲಿ ಸುನೀಲ್ ಚೆಟ್ರಿ ನೆರವಿನಿಂದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿ ಮುನ್ನಡೆ ಪಡೆಯಿತು.

ಆದರೆ, 45+4ನೆ ನಿಮಿಷದಲ್ಲಿ ಗೋಲು ಬಾರಿಸಿದ ಡೆಂಪೊ ತಂಡ ಬೆಂಗಳೂರಿಗೆ ತಿರುಗೇಟು ನೀಡಿತು. ರಾಬಿನ್ ಸಿಂಗ್ 65ನೆ ನಿಮಿಷದಲ್ಲಿ ಹೆಡರ್‌ನ ಮೂಲಕ ಗೋಲು ಬಾರಿಸಿ ಪಂದ್ಯದ ಗತಿ ಬದಲಿಸಿ ಬೆಂಗಳೂರಿಗೆ ರೋಚಕ ಗೆಲುವು ತಂದುಕೊಟ್ಟರು. 68ನೆ ನಿಮಿಷದಲ್ಲಿ ರೊವಿಲ್‌ಸನ್ ರೊಡ್ರಿಗಜ್‌ಗೆ ರೆಫರಿ ಪ್ರತಾಪ್ ಸಿಂಗ್ ರೆಡ್‌ಕಾರ್ಡ್ ನೀಡಿದ ಕಾರಣ ಡೆಂಪೊ 10 ಆಟಗಾರರೊಂದಿಗೆ ಆಡಬೇಕಾಯಿತು. ಡೆಂಪೊ ಅಂತಿಮ 10 ನಿಮಿಷದಲ್ಲಿ ಒತ್ತಡ ನಿಭಾಯಿಸಲು ವಿಫಲವಾಗಿ ಸೋಲೊಪ್ಪಿಕೊಂಡಿತು.

Write A Comment