ಪ್ರಮುಖ ವರದಿಗಳು

ಮಹೇಂದ್ರ ಸಿಂಗ್‌ ದೋನಿ ವಿದಾಯದ ಅಚ್ಚರಿ

Pinterest LinkedIn Tumblr

doni

ಆದರೆ ದೋನಿ ನಿವೃತ್ತಿ ನಿರ್ಧಾರ ಇಷ್ಟೊಂದು ಅಚ್ಚರಿಯಿಂದ ಕೂಡಿರಲಿದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಇತರ ಕ್ರಿಕೆಟ್‌ ಆಟಗಾರರಿಗಿಂತ ಸದಾ ಭಿನ್ನವಾಗಿ ನಿಲ್ಲುವ ದೋನಿ, ವಿದಾಯ ಹೇಳುವ ವಿಷಯದಲ್ಲೂ ಭಿನ್ನವಾಗಿ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಡುವೆಯೇ ಮಹಿ ಟೆಸ್ಟ್‌ ಕ್ರಿಕೆಟ್‌ಗೆ ‘ಗುಡ್‌ ಬೈ’ ಹೇಳಿದ್ದಾರೆ. ದೋನಿ ಅನಿರೀಕ್ಷಿತ ನಿರ್ಧಾರಕ್ಕೆ ಕ್ರಿಕೆಟ್‌ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಅವರು ಸರಿಯಾದ ತೀರ್ಮಾನವನ್ನೇ ಕೈಗೊಂಡಿದ್ದಾರೆ’ ಎಂದು ಕೆಲವು ಮಾಜಿ ಆಟಗಾರರು ಹೇಳಿದ್ದಾರೆ.

‘ಸರಣಿ ಕೊನೆಗೊಂಡ ಬಳಿಕ ವಿದಾಯ ಹೇಳಬಹುದಿತ್ತು’ ಎಂಬುದು ಮತ್ತೆ ಕೆಲವರ ಅನಿಸಿಕೆ. ‘ನಾಯಕತ್ವದಿಂದ ಕೆಳಗಿಳಿದು, ಇನ್ನೂ ನಾಲ್ಕೈದು ವರ್ಷಗಳ ಕಾಲ ಟೆಸ್ಟ್‌ ಆಡಬಹುದಿತ್ತು’ ಎಂಬುದು ಇನ್ನು ಕೆಲವರ ಅಭಿಪ್ರಾಯ. ಹೀಗೆ ವಿವಿಧ ಅಭಿಪ್ರಾಯಗಳನ್ನು ತಿಳಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಭಾರತ ಕಂಡಂತಹ ಶ್ರೇಷ್ಠ ನಾಯಕ ತೆಗೆದುಕೊಂಡ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕಿದೆ.
ಕಾರಣವೇನು?

ದೋನಿ ನಿವೃತ್ತಿಯ ಹಿಂದಿನ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಮಾಧ್ಯಮಗಳು ಹಲವು ಕಾರಣಗಳನ್ನು ಪಟ್ಟಿಮಾಡಿವೆ. ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ (ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20) ನಾಯಕತ್ವ, ವಿಕೆಟ್‌ ಕೀಪಿಂಗ್‌ ಹಾಗೂ  ಬ್ಯಾಟ್ಸ್‌ಮನ್‌ನ ಜವಾಬ್ದಾರಿ ನಿಭಾಯಿಸುವುದು ಅಷ್ಟು ಸುಲಭವಲ್ಲ. ದೋನಿ ಹಲವು ವರ್ಷಗಳ ಕಾಲ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆದರೆ ಇನ್ನಷ್ಟು ದಿನ ಈ ಒತ್ತಡವನ್ನು ತಾಳುವುದು ಕಷ್ಟ ಎಂಬುದು 33ರ ಹರೆಯದ ‘ಮಹಿ’ಗೆ ಮನವರಿಕೆಯಾಗಿದೆ.
ದೋನಿ ನಾಯಕತ್ವದಲ್ಲಿ ಭಾರತ 2009 ರಲ್ಲಿ ಟೆಸ್ಟ್‌ ಕ್ರಿಕೆಟ್‌ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ ಆ ಬಳಿಕ ತಂಡ ಹಿನ್ನಡೆ ಅನುಭವಿಸಿತು. ಅದರಲ್ಲೂ ವಿದೇಶಿ ನೆಲದಲ್ಲಿ ಸಾಲು ಸಾಲು ಸೋಲು ಎದುರಾಗಿವೆ. ಅಷ್ಟು ಮಾತ್ರವಲ್ಲದೆ, ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲೂ ಅವರಿಗೆ ಹೇಳಿಕೊಳ್ಳುವಂತಹ ಸಾಧನೆ ಮಾಡಲು ಆಗಿಲ್ಲ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ನಡೆದ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣ ಕೂಡಾ ದೋನಿ ಕ್ರಿಕೆಟ್‌ ಜೀವನಕ್ಕೆ ಹಿನ್ನಡೆ ಉಂಟುಮಾಡಿತು. ಭಾರತ ತಂಡದ ನಾಯಕ ‘ಹಿತಾಸಕ್ತಿ ಸಂಘರ್ಷ’ದಲ್ಲಿ ಸಿಲುಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ವಿರಾಟ್‌ ಕೊಹ್ಲಿ ಅವರಿಂದ ಪೈಪೋಟಿ ಎದುರಾಗುತ್ತಿರುವುದು ದೋನಿ ನಿವೃತ್ತಿಯ ಹಿಂದಿನ ಮತ್ತೊಂದು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ದೋನಿ ಇಲ್ಲದಿದ್ದಾಗ ಕೊಹ್ಲಿ ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ಅವರು ತಂಡದ ನೇತೃತ್ವ ವಹಿಸಿದ್ದರು.

ವಿದೇಶಿ ನೆಲದಲ್ಲಿ ಭಾರತ ತಂಡ ಸತತ ವೈಫಲ್ಯ ಅನುಭವಿಸಿದಾಗ ‘ದೋನಿ ನಾಯಕತ್ವ ತ್ಯಜಿಸಲಿ’ ಎಂಬ ಕೂಗು ಬಲವಾಗಿ ಕೇಳಿಬಂದಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ತಂಡಕ್ಕೆ ಸೋಲು ಎದುರಾಗಿದೆ. ತವರಿಗೆ ಮರಳಿದ ಬಳಿಕ ಇನ್ನಷ್ಟು ಟೀಕೆ ಕೇಳಿಬರಬಹುದು ಎಂಬುದು ಅವರಿಗೆ ತಿಳಿದಿದೆ. ನಾಯಕಸ್ಥಾನ ಕಳೆದುಕೊಂಡು ಇತರರ ಕೈಕೆಳಗೆ ಆಡುವುದಕ್ಕಿಂತ ನಿವೃತ್ತಿಯಾಗುವುದೇ ಲೇಸು ಎಂಬ ಭಾವನೆ ದೋನಿ ಮನಸ್ಸಿನಲ್ಲಿ ಮೂಡಿತೇ? ಅಂತಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿ ಆ ಬಳಿಕ ಎಲ್ಲ ಮಾದರಿಗಳಿಂದ ಅವರು ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

‘ಬ್ರಾಂಡ್‌ ಮೌಲ್ಯ‘ ಕಡಿಮೆಯಾಗದು
ಪ್ರಸಕ್ತ ಭಾರತದಲ್ಲಿ ಜಾಹೀರಾತಿನ ಮೂಲಕ ಅತಿಹೆಚ್ಚು ಹಣ ಸಂಪಾದಿಸುವ ಆಟಗಾರ ದೋನಿ. ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾದ ಕಾರಣ ಅವರ ಬ್ರಾಂಡ್‌ ಮೌಲ್ಯ ಕಡಿಮೆಯಾಗದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ದೋನಿ ಇನ್ನೂ ಆಡುವರು. ದೋನಿ ಅವರ ಬ್ರಾಂಡ್‌ ಮೌಲ್ಯ ಹೆಚ್ಚಲು ಟೆಸ್ಟ್‌ಗಿಂತ ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳೇ ಕಾರಣ ಎಂಬುದು ಸ್ಪಷ್ಟ. ಭಾರತದ ಕ್ರಿಕೆಟ್‌ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಯಾವುದೇ ‘ವಿದಾಯ ಪಂದ್ಯ’ ಇಲ್ಲದೆ ನಿವೃತ್ತಿಯಾಗಿದ್ದಾರೆ. ವಿದಾಯ ಭಾಷಣ ಅಥವಾ ವಿದಾಯ ಸುದ್ದಿಗೋಷ್ಠಿಯನ್ನೂ ಅವರು ನಡೆಸಲಿಲ್ಲ.

‘ಮಹಿ’ಗೆ 100 ಟೆಸ್ಟ್‌ ಪಂದ್ಯಗಳನ್ನು ಆಡಿದ ಸಾಧನೆ ಮಾಡಬಹುದಿತ್ತು. ಆದರೆ ಅದಕ್ಕಾಗಿ ಕಾಯಲಿಲ್ಲ. ದಿಢೀರ್‌ ನಿವೃತ್ತಿಯಾದರೆ ಜನರು ಏನೆಲ್ಲಾ ಮಾತನಾಡುವರು ಎಂಬುದು ಕೂಡಾ ತಿಳಿದಿತ್ತು. ಅದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ‘ನಿವೃತ್ತಿಗೆ ಇದೇ ಸೂಕ್ತ ಸಮಯ’ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮೂಡಿದೆ. ಆ ಬಳಿಕ ಎರಡು ಸಲ ಯೋಚಿಸಲಿಲ್ಲ. ತಮ್ಮ ನಿರ್ಧಾರವನ್ನು ಪ್ರಕಟಿಸಿಯೇ ಬಿಟ್ಟಿದ್ದಾರೆ.
ಹಲವು ಪ್ರಶ್ನೆಗಳನ್ನು ಬಿಟ್ಟುಕೊಂಡು ದೋನಿ ಟೆಸ್ಟ್‌ ಕ್ರಿಕೆಟ್‌ನಿಂದ ತೆರೆಮರೆಗೆ ಸರಿದಿದ್ದಾರೆ. ಅವರ ಈ ದಿಢೀರ್‌ ನಿರ್ಧಾರದ ಹಿಂದಿನ ನಿಜವಾದ ಕಾರಣ ಏನೆಂಬುದು ಯಾರಿಗೂ ತಿಳಿದಿಲ್ಲ. ಒಂದು ದಿನ ಅದು ಬಹಿರಂಗಗೊಳ್ಳಬಹುದು. ದೋನಿ ತಮ್ಮ ಬಾಯಿಂದಲೇ ಅದನ್ನು ಹೊರಜಗತ್ತಿಗೆ ತಿಳಿಸುವರೇ ಅಥವಾ ಆತ್ಮಕಥೆಯ ಮೂಲಕ ಬಹಿರಂಗಪಡಿಸುವರೇ ಎಂಬುದು ಈಗ ಉಳಿದಿರುವ ಕುತೂಹಲ. ಅಲ್ಲಿಯವರೆಗೆ ಅವರ  ಟೆಸ್ಟ್‌ ನಿವೃತ್ತಿ ಒಂದು ಒಗಟಾಗಿಯೇ ಉಳಿಯಲಿದೆ.

ಮೂರು ಸ್ಮರಣೀಯ ಇನಿಂಗ್ಸ್‌
* 148: ಪಾಕ್‌ ವಿರುದ್ಧ, ಫೈಸಲಾಬಾದ್‌ನಲ್ಲಿ, 2006
ಪಾಕಿಸ್ತಾನ ವಿರುದ್ಧ ಫೈಸಲಾಬಾದ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ದೋನಿ 148 ರನ್‌ ಗಳಿಸಿದ್ದರು. ಮೊದಲು ಬ್ಯಾಟ್‌ ಮಾಡಿದ ಪಾಕ್‌ ಮೊದಲ ಇನಿಂಗ್ಸ್‌ನಲ್ಲಿ 588 ರನ್‌ ಪೇರಿಸಿತ್ತು. ಭಾರತ ಐದು ವಿಕೆಟ್‌ಗೆ 281 ರನ್‌ ಗಳಿಸಿ ಪರದಾಡುತ್ತಿದ್ದ ಸಂದರ್ಭ ದೋನಿ ಕ್ರೀಸ್‌ಗೆ ಬಂದಿದ್ದರು. ಶೋಯಬ್‌ ಅಖ್ತರ್‌ ಅವರನ್ನೊಳಗೊಂಡ ಪಾಕ್‌ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟಿ 153 ಎಸೆತಳಿಂದ 148 ರನ್‌ ಗಳಿಸಿದ್ದರು. ಟೆಸ್ಟ್‌ನಲ್ಲಿ ದೋನಿ ಗಳಿಸಿದ ಮೊದಲ ಶತಕ ಅದಾಗಿತ್ತು. ಅದೇ ರೀತಿ ವಿದೇಶಿ ನೆಲದಲ್ಲಿ ಅವರಿಂದ ಮೂಡಿಬಂದ ಏಕೈಕ ಶತಕವೂ ಹೌದು.

* 92 ಮತ್ತು 68: ಆಸ್ಟ್ರೇಲಿಯಾ ಎದುರು, ಮೊಹಾಲಿಯಲ್ಲಿ, 2008
ಅನಿಲ್‌ ಕುಂಬ್ಳೆ ಗಾಯಗೊಂಡಿದ್ದ ಕಾರಣ ಈ ಪಂದ್ಯದಲ್ಲಿ ದೋನಿ ಭಾರತ ತಂಡವನ್ನು ಮುನ್ನಡೆಸಿದ್ದರು. ಮೊಹಾಲಿಯಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 124 ಎಸೆತಗಳಲ್ಲಿ 92 ರನ್‌ ಗಳಿಸಿದ್ದ ‘ಮಹಿ’ ಎರಡನೇ ಇನಿಂಗ್ಸ್‌ನಲ್ಲಿ 84 ಎಸೆತಗಳಲ್ಲಿ 68 ರನ್‌ ಪೇರಿಸಿದ್ದರು. ಈ ಪಂದ್ಯದಲ್ಲಿ ಭಾರತ 320 ರನ್‌ಗಳ ಜಯ ಸಾಧಿಸಿತ್ತು.

* 224: ಆಸ್ಟ್ರೇಲಿಯಾ ಎದುರು, ಚೆನ್ನೈನಲ್ಲಿ, 2013
ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದೋನಿ ಅಮೋಘ ಇನಿಂಗ್ಸ್‌ ಕಟ್ಟಿದ್ದರು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 380 ರನ್‌ ಪೇರಿಸಿತ್ತು. ಇದಕ್ಕೆ ಉತ್ತರ ನೀಡತೊಡಗಿದ ಭಾರತ 196 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಈ ವೇಳೆ ಕ್ರೀಸ್‌ಗೆ ಬಂದ ದೋನಿ ಛಲದ ಆಟ ತೋರಿದ್ದರು. 24 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ 224 ರನ್‌ ಕಲೆಹಾಕಿದ್ದರು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 192 ರನ್‌ಗಳ ಮುನ್ನಡೆ ತಂದುಕೊಟ್ಟಿದ್ದರು. ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯ ಸಾಧಿಸಿತ್ತು.

60 ಪಂದ್ಯಗಳಲ್ಲಿ 27 ಗೆಲುವು…
ಟೆಸ್ಟ್‌ನಲ್ಲಿ ಅತಿಹೆಚ್ಚು ಗೆಲುವು ತಂದುಕೊಟ್ಟ ನಾಯಕ ಎಂಬ ಗೌರವ ದೋನಿ ಹೊಂದಿದ್ದಾರೆ. ಇವರ ನಾಯಕತ್ವದಡಿ ಭಾರತ 60 ಟೆಸ್ಟ್‌ಗಳನ್ನು ಆಡಿದ್ದು, 27 ರಲ್ಲಿ ಜಯ ಪಡೆದಿದೆ. 18ರಲ್ಲಿ ಸೋಲು ಅನುಭವಿಸಿದೆ. 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.ಆದರೆ ವಿದೇಶಿ ನೆಲದಲ್ಲಿ ಆಡಿದ 30 ಪಂದ್ಯಗಳಲ್ಲಿ 15 ಸೋಲು ಎದುರಾಗಿದೆ. ಕೇವಲ ಐದು ಗೆಲುವು ಮಾತ್ರ ದೊರೆತಿದೆ.

spo-box-patttoihjhj

Write A Comment