ಪ್ರಮುಖ ವರದಿಗಳು

ಜಮ್ಮು-ಕಾಶ್ಮೀರ ಅತಂತ್ರ ಜಾರ್ಖಂಡ್‌ನಲ್ಲಿ ಬಿಜೆಪಿ; ಜಮ್ಮು-ಕಾಶ್ಮೀರ: ಪಿಡಿಪಿ ಅತಿ ದೊಡ್ಡ ಪಕ್ಷ, ಬಿಜೆಪಿಯಿಂದ ಭಾರೀ ಸಾಧನೆ ಜಾರ್ಖಂಡ್: ಬಿಜೆಪಿಗೆ ಸರಳ ಬಹುಮತ

Pinterest LinkedIn Tumblr

000180B

ಶ್ರೀನಗರ/ರಾಂಚಿ, ಡಿ.23: ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಾಶ್ಮೀರದಲ್ಲಿ ಪೀಪಲ್ಸ್ ಡೆಮಾಕ್ರಾಟಿಕ್ ಫ್ರಂಟ್ (ಪಿಡಿಪಿ) ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಸರಳ ಬಹುಮತ ಪಡೆದಿದೆ.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದರೂ ಕಾಂಗ್ರೆಸ್ ಜೊತೆಗೆ ಸೇರಿಕೊಂಡು ಪಿಡಿಪಿ ಸರಕಾರ ರಚಿಸುವ ಸಾಧ್ಯತೆಯಿದೆ. ಹೊಸ ಸರಕಾರ ರಚನೆಯಲ್ಲಿ ಪಿಡಿಪಿಗೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳೆರಡೂ ಮಂಗಳವಾರ ಬೆಂಬಲ ವ್ಯಕ್ತಪಡಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆ ಎನಿಸಿದೆ.

87 ಸದಸ್ಯರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 28 ಸ್ಥಾನಗಳೊಂದಿಗೆ ಪಿಡಿಪಿ ಏಕೈಕ ಅತಿ ದೊಡ್ಡ ಪಕ್ಷವೆನಿಸಿದೆ. ಬಿಜೆಪಿ (25), ನ್ಯಾಷನಲ್ ಕಾನ್ಫರೆನ್ಸ್ (15), ಕಾಂಗ್ರೆಸ್ (12) ಸ್ಥಾನಗಳನ್ನು ಗೆದ್ದುಕೊಂಡಿವೆ. ಪಕ್ಷೇತರರು ಒಟ್ಟು ಏಳು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಇನ್ನು ಜಾರ್ಖಂಡ್‌ನಲ್ಲಿ ಬಿಜೆಪಿ ಮತ್ತು ಎಜೆಎಸ್‌ಯು ಪಕ್ಷಗಳು ರಾಜ್ಯ ವಿಧಾನಸಭೆಯ ಅರ್ಧದಷ್ಟು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡು ಅಲ್ಪ ಬಹುಮತವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ (37) ಹಾಗೂ ಎಜೆಎಸ್‌ಯು (5) ಮೈತ್ರಿಕೂಟಕ್ಕೆ ಒಟ್ಟು 42 ಸ್ಥಾನಗಳು ಲಭಿಸಿದ್ದು, ಸರಕಾರ ರಚನೆಗೆ ಅವಶ್ಯವಿರುವ ಅಲ್ಪ ಬಹುಮತ ದೊರಕಿದೆ. ಇಲ್ಲಿ ಕಾಂಗ್ರೆಸ್ (6), ಜೆಎಂಎಂ (19), ಜಾರ್ಖಂಡ್ ವಿಕಾಸ್ ಮೋರ್ಚಾ (8), ಬಿಎಸ್‌ಪಿ (1) ಸ್ಥಾನಗಳನ್ನು ಪಡೆದುಕೊಂಡಿವೆ. ಪಕ್ಷೇತರರು ಒಟ್ಟು ಐದು ಸ್ಥಾನಗಳನ್ನು ಗಳಿಸಿದ್ದಾರೆ.

ಬಿಜೆಪಿ ಮಹತ್ವದ ಸಾಧನೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯೊಂದೇ 25 ಸ್ಥಾನಗಳನ್ನು ಗಳಿಸಿರುವುದು ರಾಜ್ಯದಲ್ಲಿ ಪಕ್ಷದ ಈವರೆಗಿನ ದೊಡ್ಡ ಸಾಧನೆ ಎನಿಸಿದೆ. ಪ್ರಮುಖವಾಗಿ ಜಮ್ಮು ಪ್ರದೇಶದಲ್ಲಿ ಬಿಜೆಪಿಗೆ ಸಾಕಷ್ಟು ಸ್ಥಾನಗಳು ಲಭಿಸಿವೆ. ಕಾಶ್ಮೀರ ಕಣಿವೆಯಲ್ಲಿ ಒಂದೇ ಒಂದು ಸ್ಥಾನವನ್ನು ಗಳಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ.

ಕಾಶ್ಮೀರ ಕಣಿವೆಯಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್‌ಗಳು ಸ್ಥಾನಗಳನ್ನು ಹಂಚಿಕೊಂಡಿವೆ. ಸಜ್ಜದ್ ಲೋನ್ ನೇತೃತ್ವದ ಜೆಕೆಪಿಸಿ ಪಕ್ಷ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ.

ಹಾಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಬೀರ್ವಾ ವಿಧಾನಸಭಾ ಕ್ಷೇತ್ರದಿಂದ ಸಾವಿರಕ್ಕೂ ಮಿಕ್ಕಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಸೋನಾವರ್ ಕ್ಷೇತ್ರದಲ್ಲಿ ಅವರು ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಜಾರ್ಖಂಡ್‌ನಲ್ಲಿ ಬಿಜೆಪಿ: ಜಾರ್ಖಂಡ್‌ನಲ್ಲಿ ಭಾರತೀಯ ಜನತಾ ಪಕ್ಷವು ಎಜೆಎಸ್‌ಯು ಬೆಂಬಲದೊಂದಿಗೆ ಸರಕಾರ ರಚನೆ ಮಾಡಲಿದೆ. ಸರಕಾರ ರಚನೆಗೆ ಅವಶ್ಯವಿರುವ 42 ಸ್ಥಾನಗಳನ್ನು ಈ ಮೈತ್ರಿಕೂಟವು ಗಳಿಸಿದೆ.

ಜಾರ್ಖಂಡ್‌ನಲ್ಲಿ ಹೊಸ (ಯುವ) ಮತದಾರರು ಸ್ಥಳೀಯ ಪಕ್ಷಗಳಿಗಿಂತ ಬಿಜೆಪಿಯತ್ತ ಒಲವು ತೋರಿಸಿರುವುದು ಪಕ್ಷಕ್ಕೆ ಲಾಭ ತಂದು ಕೊಟ್ಟಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ‘ಮ್ಯಾಜಿಕ್’ ಇಲ್ಲಿ ಕೆಲಸ ಮಾಡಿದೆ.
ಜೆಎಂಎಂನ ಪ್ರಬಲ ನೆಲೆ ಎನಿಸಿರುವ ಸಂತಾಲ್ ಪರಗಣ ಪ್ರದೇಶದಲ್ಲಿ ಬಿಜೆಪಿಯು ಮತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಹಲವು ಮಾಜಿ ಮುಖ್ಯಮಂತ್ರಿಗಳು ಸೋಲು ಕಂಡಿದ್ದಾರೆ, ಇಲ್ಲವೇ ಒಂದು ಕ್ಷೇತ್ರದಲ್ಲಿ ಸೋತು ಇನ್ನೊಂದರಲ್ಲಿ ಗೆಲುವು ಕಂಡಿದ್ದಾರೆ.

ಈ ಮಧ್ಯೆ ಬಿಜೆಪಿ ಸಂಸದೀಯ ಪಕ್ಷ ಸಮಿತಿಯು ಬುಧವಾರ ದಿಲ್ಲಿಯಲ್ಲಿ ಸಭೆ ಸೇರಿ ಜಾರ್ಖಂಡ್‌ನ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ.

Write A Comment