ಕರಾವಳಿ

ಉಡುಪಿ; ಆರು ವರ್ಷಗಳಿಂದ ಮೂವರು ಮಹಿಳೆಯರು ಗೃಹ ಬಂಧನದಲ್ಲಿ; ಮಾನಸಿಕ ಅಸ್ವಸ್ಥ ತಾಯಿ ಮಕ್ಕಳು ಕೊನೆಗೂ ಆಸ್ಪತ್ರೆಗೆ

Pinterest LinkedIn Tumblr

UD-D23-SHIRIBEEDU

ಉಡುಪಿ, ಡಿ.23: ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೆ ಕಳೆದ ಐದಾರು ವರ್ಷಗಳಿಂದ ಗೃಹಬಂಧನದಲ್ಲಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇಂದು ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕಲ್ಪಿಸಿದ್ದಾರೆ.

ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದ ಶಿರಿಬೀಡುವಿನ ನಿವಾಸಿ ಸುಲೋಚನಾ ಹಾಗೂ ಅವರ ಮಕ್ಕಳಾದ ಶಶಿರೇಖಾ(38) ಹಾಗೂ ವಿಶಾಲಾ(35) ಎಂಬವರು ಇದೀಗ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದೆ ಅಗತ್ಯ ಬಿದ್ದರೆ ಅವರಿಗೆ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿ, ಪುನರ್ವಸತಿ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಸುಲೋಚನಾರ ಪತಿ ಸೀತಾರಾಮ ಶೆಟ್ಟಿಗಾರ್ 15 ವರ್ಷಗಳ ಹಿಂದೆ ನಿಧನರಾಗಿದ್ದರು. ಉಡುಪಿಯಲ್ಲಿರುವ ಸಂಬಂಧಿಕರ ಬಟ್ಟೆ ಅಂಗಡಿಯೊಂದರಲ್ಲಿ ಅವರು ಕೆಲಸ ಮಾಡಿಕೊಂಡಿದ್ದರು. ಪತಿಯ ನಿಧನದ ಬಳಿಕ ಸುಲೋಚನಾ ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಕಿಶೋರ್ ಎಂಬವನೊಂದಿಗೆ ವಾಸವಾಗಿದ್ದರು. ಕಿಶೋರ್ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದನು. ಸಣ್ಣ ಹಂಚಿನ ಮನೆಯೊಂದರಲ್ಲಿ ಅವರು ವಾಸವಾಗಿದ್ದು, ಶಶಿರೇಖಾ ಪಿಯುಸಿ ಹಾಗೂ ವಿಶಾಲಾ ಎಸೆಸೆಲ್ಸಿ ಶಿಕ್ಷಣ ಪಡೆದಿದ್ದರು. ಅವರಿಬ್ಬರು ಕೂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು. ಶಿಕ್ಷಣ ಅರ್ಧಕ್ಕೆ ಮುಗಿಸಿ ಅವರಿಬ್ಬರು ಕೆಲಸಕ್ಕೆ ಹೋಗುತ್ತಿದ್ದರು. ನಂತರದ ದಿನಗಳಲ್ಲಿ ಸುಲೋಚನಾ ಈ ಇಬ್ಬರು ಹೆಣ್ಣು ಮಕ್ಕಳನ್ನು ಹೊರಗಡೆ ಬಿಡದೆ ಕಳೆದ ಐದಾರು ವರ್ಷಗಳಿಂದ ಗೃಹ ಬಂಧನದಲ್ಲಿ ಇರಿಸಿಕೊಂಡಿದ್ದರು.

ಇದರಿಂದ ಈ ಹೆಣ್ಣು ಮಕ್ಕಳು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ವಿಚಿತ್ರ ವಾಗಿ ವರ್ತಿಸುತಿದ್ದರು. ಶಶಿರೇಖಾ ಸಾಕಷ್ಟು ಮುಂಗೋಪಿಯಂತೆ ವರ್ತಿಸುತ್ತಿದ್ದಾಳೆ. ಅದೇ ರೀತಿ ತಾಯಿ ಸುಲೋಚನಾ ಹಾಗೂ ಮಗ ಕಿಶೋರ್ ಕೂಡ ಮಾನಸಿಕವಾಗಿ ಸರಿಯಾಗಿಲ್ಲ. ಈತ ಕೆಲಸ ಇಲ್ಲದೆ ಅಲೆದಾಡುತ್ತಿದ್ದು, ಅಪರೂಪಕ್ಕೆ ಮನೆಗೆ ಬರುತ್ತಿದ್ದಾನೆ. ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೆ ಮನೆಯೊಳಗೆ ಕೂಡಿ ಹಾಕಿದ್ದ ಈ ಹೆಣ್ಣು ಮಕ್ಕಳು ಅರೆಬರೆ ಬಟ್ಟೆಯಲ್ಲಿ ತೀರಾ ಅಸಹ್ಯವಾಗಿ ಬದುಕು ನಡೆಸುತ್ತಿ ದ್ದರು. ಸರಿಯಾದ ಆಹಾರ ಇಲ್ಲದೆ ಇವರಿಬ್ಬರ ದೇಹ ಕೃಶವಾಗಿವೆ. ನಡೆ ದಾಡಲು ಅಸಾಧ್ಯವಾದ ಸ್ಥಿತಿಯಲ್ಲಿ ಇವರು ಇದ್ದಾರೆ. ಆದರೂ ಇವರಿಗೆ ಚಿಕಿತ್ಸೆ ನೀಡದೆ ಕೂಡಿ ಹಾಕಲಾಗಿತ್ತು. ತಾಯಿ ಯಾರನ್ನು ಕೂಡ ಮನೆ ಒಳಗೆ ಬರಲು ಬಿಡುತ್ತಿರಲಿಲ್ಲ. ಹೊರಗಿನಿಂದಲೇ ಕಿಟಕಿಯಿಂದ ಸಂಪರ್ಕಿಸಿ ಕಳುಹಿಸುತ್ತಿದ್ದರು. ಸಂಬಂಧಿಕರು ಕೂಡ ಸುಲೋಚನಾರ ಈ ರೀತಿಯ ವರ್ತನೆಯಿಂದ ಮನೆಗೆ ಬರುತ್ತಿರಲಿಲ್ಲ.

ಕಾರ್ಯಾಚರಣೆ ಮೂಲಕ ರಕ್ಷಣೆ:
ಸುಲೋಚನಾ ತಮ್ಮ ಮಕ್ಕಳಿಬ್ಬರನ್ನು ಗೃಹ ಬಂಧನದಲ್ಲಿರಿಸಿಕೊಂಡಿರುವ ವಿಚಾರ ಮಹಿಳಾ ಸಂಘಟನೆಗಳಿಗೆ ತಿಳಿದು, ಜ್ಯೋತಿ ಹೆಬ್ಬಾರ್ ನೇತೃತ್ವದಲ್ಲಿ ಕೆಲವು ಮಂದಿ ಇವರ ಮನೆಗೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದರು. ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸುವಂತೆ ವಿನಂತಿಸಿ ಕೊಂಡಿದ್ದರು. ಆದರೆ ಸುಲೋಚನಾ ಇದಕ್ಕೆ ಒಪ್ಪಿರಲಿಲ್ಲ. ಈ ಕುರಿತು ಬಂದ ಮಾಹಿತಿಯಂತೆ ಇಂದು ಬೆಳಗ್ಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಕಲ್ಯಾಣಾಧಿಕಾರಿ ವೀಣಾ ರಾವ್ ಹಾಗೂ ಮಹಿಳಾ ಸಂಘಟನೆಯವರು ಸುಲೋಚನಾರ ಮನೆಗೆ ಬಂದಿದ್ದರು. ಆದರೆ ಮನೆಯ ಎರಡು ಕಡೆ ಬಾಗಿಲು ಹಾಕಿ ಒಳಗಡೆ ಇದ್ದ ಸುಲೋಚನಾ ಯಾವುದೇ ಕಾರಣಕ್ಕೂ ಬಾಗಿಲು ತೆಗೆಯಲಿಲ್ಲ. ಸಂಬಂಧಿಕರು ಬಂದು ಕರೆ ದರೂ ಕೂಡ ಯಾವುದೇ ಸುಳಿವು ಇಲ್ಲದಂತೆ ಒಳಗಡೆ ಇದ್ದರು.

ನಂತರ ಸ್ಥಳಕ್ಕೆ ಪೊಲೀಸರು ಕೂಡ ಆಗಮಿಸಿದರು. ಮನೆಯ ಹೆಂಚು ತೆಗೆದು ಒಳನುಗ್ಗುವ ಪ್ರಯತ್ನ ಕೂಡ ಮಾಡಲಾಯಿತು. ಸುಮಾರು ಎರಡು ಗಂಟೆಗಳ ಪ್ರಯತ್ನದ ಬಳಿಕ ಬಾಗಿಲನ್ನು ಬಲಾತ್ಕಾರವಾಗಿ ಮುರಿದು ಒಳನುಗ್ಗಲಾಯಿತು. ಒಳಗಡೆ ಇದ್ದ ಸುಲೋಚನಾ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡಿ, ನಮಗೆ ಯಾವುದೇ ಚಿಕಿತ್ಸೆ ಬೇಡ. ನೀವೆಲ್ಲ ಯಾಕೆ ಬಂದದ್ದು ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದರು. ಬಳಿಕ ಒಂದು ಕೋಣೆಯಲ್ಲಿದ್ದ ಶಶಿರೇಖಾಳನ್ನು ಮೊದಲು ಮಹಿಳಾ ಪೊಲೀಸರು ರಕ್ಷಿಸಿ ಹೊರಗೆ ಕರೆದು ಕೊಂಡು ಬಂದರು.

ಇನ್ನೊಂದು ಕೋಣೆಯಲ್ಲಿ ಚಿಲಕ ಹಾಕಿ ಕೂತಿದ್ದ ವಿಶಾಲಾ ಯಾವುದೇ ಕಾರಣಕ್ಕೂ ಬಾಗಿಲು ತೆಗೆಯಲು ಒಪ್ಪಲಿಲ್ಲ. ನಂತರ ಹೆಂಚು ತೆಗೆದು ಒಳ ನುಗ್ಗಿ ಆಕೆಯನ್ನು ಹೊರಗೆ ಕರೆದುಕೊಂಡು ಬಂದು 108 ಆ್ಯಂಬುಲೆನ್ಸ್‌ನಲ್ಲಿ ಕೂರಿಸಲಾಯಿತು. ಕೊನೆಗೆ ತಾಯಿಯನ್ನು ಕರೆದುಕೊಂಡು ಬರಲಾಯಿತು. ಆಕೆ ಆ್ಯಂಬ್ಯುಲೆನ್ಸ್ ಹತ್ತಲು ಹಿಂದೇಟು ಹಾಕಿದಾಗ ಬಲಾತ್ಕಾರವಾಗಿ ಎತ್ತಿ ಒಳಗೆ ಹಾಕಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ರಾಜೇಂದ್ರ ಬೇಕಲ್, ಮಹಿಳಾ ಸಂಘಟನೆಯ ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಉಡುಪಿ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಕಾಂತ್, ನಗರ ಠಾಣಾಧಿಕಾರಿ ಮಧು ಮೊದಲಾದವರು ಉಪಸ್ಥಿತರಿದ್ದರು.

ಆಸ್ಪತ್ರೆಗೆ ಶಾಸಕ ಪ್ರಮೋದ್ ಭೇಟಿ
ಶಾಸಕ ಪ್ರಮೋದ್ ಮಧ್ವರಾಜ್ ಮಹಿಳಾ ಇಲಾಖಾ ಅಧಿಕಾರಿಗಳು ಹಾಗೂ ಮಹಿಳಾ ಕಾಂಗ್ರೆಸ್ ನಾಯಕಿಯರಾದ ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ಸಂಧ್ಯಾ ತಿಲಕ್‌ರಾಜ್ ಹಾಗೂ ಇತರೊಂದಿಗೆ ಇಂದು ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೂವರ ಆರೋಗ್ಯ ವಿಚಾರಿಸಿದರು.

ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ರಕ್ಷಣೆಗಾಗಿ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ನಿಯೋಜಿಸುವಂತೆ ಪ್ರಮೋದ್ ಮಧ್ವರಾಜ್ ಜಿಲ್ಲಾ ಎಸ್ಪಿಗೆ ಸೂಚಿಸಿದರು. ಆಸ್ಪತ್ರೆ ಹಾಗೂ ಇಲಾಖೆಯಿಂದ ತುರ್ತು ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ ತಾನು ವೈಯಕ್ತಿಕ ನೆಲೆಯಲ್ಲಿ ಯಾವುದೇ ಸೌಲಭ್ಯ, ಸಹಾಯ ಒದಗಿಸಲು ಸಿದ್ಧವಿರುವುದಾಗಿ ಅವರು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದರು.

*ಇಂದು ಸಂಜೆಯ ವೇಳೆಗೆ ತಾಯಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳನ್ನು ವಿಶೇಷ ಚಿಕಿತ್ಸೆಗಾಗಿ ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುದ್ದಿ ತಿಳಿದು ಜಿಲ್ಲಾಸ್ಪತ್ರೆಗೆ ಧಾವಿಸಿ ಬಂದ ಸುಲೋಚನಾ ಅವರ ಕುಟುಂಬಿಕರು ಅವರನ್ನು ಮತ್ತು ಇಬ್ಬರು ಮಕ್ಕಳನ್ನು ತಮ್ಮ ಜವಾಬ್ದಾರಿಯಲ್ಲಿ ಚಿಕಿತ್ಸೆ ನೀಡುವ ಭರವಸೆಯ ಮೇಲೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಮೂವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ರಾಜೇಂದ್ರ ಬೇಕಲ್ ತಿಳಿಸಿದ್ದಾರೆ. ಇಲಾಖೆ ಮೂವರನ್ನು ಸಂಬಂಧಿಗಳ ಸುಪರ್ದಿಗೆ ನೀಡಿದ್ದರೂ ಇಲಾಖೆ ಅವರ ಮೇಲೆ ನಿಗಾ ವಹಿಸಲಿದೆ ಎಂದವರು ಹೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಿಂದ ಇಬ್ಬರು ಹೆಣ್ಣು ಮಕ್ಕಳು ಸಾಕಷ್ಟು ಚೇತರಿಸಿಕೊಂಡಿದ್ದಾರೆ ಎಂದು ಬೇಕಲ್ ತಿಳಿಸಿದರು.

ಮೂವರನ್ನು ಆಸ್ಪತ್ರೆಯಲ್ಲಿ ಶುಚಿಗೊಳಿಸಿ ಬಟ್ಟೆ ನೀಡಿ, ದೈಹಿಕ ಪರೀಕ್ಷೆ ನಡೆಸಲಾಗಿದೆ. ಮುಂದೆ ಮಾನಸಿಕ ತಜ್ಞರು ಪರಿಶೀಲನೆ ಮಾಡಿ ಸೂಕ್ತ ಚಿಕಿತ್ಸೆ ಕಲ್ಪಿಸಲಿದ್ದಾರೆ. ಇವರು ಹೊರಗಿನ ಪ್ರಪಂಚದ ಜ್ಞಾನ ಇಲ್ಲದೆ ಈ ರೀತಿಯಾಗಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿದರೆ ಮೊದಲಿನ ಸ್ಥಿತಿಗೆ ಬರಬಹುದು. ಇವರ ಈ ಸ್ಥಿತಿಗೆ ಕಾರಣ ಇನ್ನು ತಿಳಿಯಬೇಕಾಗಿದೆ.
– ರಾಜೇಂದ್ರ ಬೇಕಲ್, ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೆ ಮಾನಸಿಕ ಅಸ್ವಸ್ಥರಂತೆ ಬದುಕುತ್ತಿದ್ದ ಹೆಣ್ಣು ಮಕ್ಕಳ ಬಗ್ಗೆ ಸಿಕ್ಕಿದ ಮಾಹಿತಿಯಂತೆ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಮೂರು ದಿನಗಳಿಂದ ಇವರ ಮನೆಗೆ ಭೇಟಿ ನೀಡುತ್ತಿದ್ದೇವೆ. ಆದರೆ ಅವರ ತಾಯಿ ನಮಗೆ ಸರಿಯಾಗಿ ಸಹಕಾರ ನೀಡುತ್ತಿರಲಿಲ್ಲ. ನಾವು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.
– ಜ್ಯೋತಿ ಹೆಬ್ಬಾರ್, ಪದಾಧಿಕಾರಿ, ಮಹಿಳಾ ಸಂಘಟನೆ

Write A Comment