ಬೆಂಗಳೂರು, ಡಿ.22: ಟಿಪ್ಪು ಸುಲ್ತಾನ್ ಜಯಂತಿಯಂದು ಸರಕಾರಿ ರಜೆ ನೀಡಬೇಕು ಎಂದು ಕೆಲವರ ಒತ್ತಾಯವಿದೆ. ಟಿಪ್ಪು ಸುಲ್ತಾನ್ ಅತ್ಯಂತ ಒಳ್ಳೆಯ ಆಡಳಿತ ನೀಡಿದವರಾಗಿದ್ದಾರೆ. ಆದುದರಿಂದ ಸರಕಾರಿ ರಜೆ ಘೋಷಣೆ ಮಾಡುವುದು ಸರಿಯಾಗುವುದಿಲ್ಲ. ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗಝೆಟಿಯರ್ ಇಲಾಖೆಯಿಂದ ಹೊರ ತಂದಿರುವ ಇತಿಹಾಸ ತಜ್ಞ ಪ್ರೊ.ಬಿ.ಶೇಖ್ ಅಲಿ ಅವರು ರಚಿಸಿರುವ ‘ಟಿಪ್ಪು ಸುಲ್ತಾನ್- ಎ ಕ್ರೂಸೇಡರ್ ಫಾರ್ ಚೇಂಜ್’ ಎಂಬ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಮೈಸೂರು ಹುಲಿ ಟಿಪ್ಪುಸುಲ್ತಾನ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದ ಪೂರ್ವಗ್ರಹ ಪೀಡಿತರು ಅವರನ್ನು ಹಿಂದುಗಳ ವಿರೋಧಿ ಎಂದು ಹೇಳುತ್ತಿದ್ದಾರೆ.
ಆದರೆ, ಟಿಪ್ಪು ಜಾತ್ಯತೀತ ನಾಯಕರಾಗಿ ಎಲ್ಲ ವರ್ಗದ ಜನರನ್ನು ಸಮಾನರಾಗಿ ಕಾಣುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಟಿಪ್ಪು ಸುಲ್ತಾನ್ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದವರು ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಅವರು ಆಡಳಿತದಲ್ಲಿ ಎಷ್ಟು ಪ್ರಮಾಣದ ಮಸೀದಿಗಳನ್ನು ನಿರ್ಮಿಸಿದ್ದರೋ ಅಷ್ಟ್ಟೇ ಪ್ರಮಾಣದಲ್ಲಿ ಹಿಂದೂ ದೇವಾಲಯ ಗಳನ್ನೂ ನಿರ್ಮಿಸಿದ್ದರು. ಪ್ರಸಕ್ತ ಲೋಕಾರ್ಪಣೆಯಾಗಿರುವ ಈ ಕೃತಿ ಟಿಪ್ಪು ಸುಲ್ತಾನ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡಿದ್ದು, ಸಾರ್ವಜನಿಕರಿಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನದ ಮಾದರಿ ಆಡಳಿತ ನೀಡಿದ್ದರು. ಇವರ ಆಡಳಿತದ ಸಂದರ್ಭದಲ್ಲಿ ದೇಶದ ಇತರೆ ಸಂಸ್ಥಾನಗಳಿಗೆ ಮಾದರಿಯಾಗಿತ್ತು ಎಂಬ ಅಂಶ ಇತಿಹಾಸದಿಂದ ತಿಳಿಯುತ್ತದೆ ಎಂದು ಸಿದ್ದರಾಮಯ್ಯ ನುಡಿದರು.
ಸ್ಯಾತಂತ್ರ ಸಂಗ್ರಾಮ ಪ್ರಾರಂಭ: 1850ನ್ನು ದೇಶದಲ್ಲಿ ಸ್ವಾತಂತ್ರ ಸಂಗ್ರಾಮ ಎಂದು ಹೇಳಲಾಗುತ್ತದೆ. ಆದರೆ, ಟಿಪ್ಪು ಸುಲ್ತಾನ್ ತನ್ನ ಅವಧಿಯಲ್ಲಿ ನಾಲ್ಕು ಆಂಗ್ಲೋ ಮೈಸೂರು ಯುದ್ಧಗಳನ್ನು ಮಾಡುವ ಮೂಲಕ ಸ್ವಾತಂತ್ರ ಹೋರಾಟಕ್ಕೆ ಅಡಿಪಾಯ ಹಾಕಿದ್ದರು. ಎರಡು ಯುದ್ಧಗಳಲ್ಲಿ ಗೆದ್ದರು, ಮೂರನೆ ಯುದ್ಧದಲ್ಲಿ ಸೋತರು. ಕೊನೆಯ ಯುದ್ಧದಲ್ಲಿ ತನ್ನ ಮಕ್ಕಳನ್ನು ಒತ್ತೆಯಿಟ್ಟು ಹೋರಾಟ ನಡೆಸಿದರಾದರು ವೀರಮರಣವನ್ನಪ್ಪಿದರು ಎಂದು ಮುಖ್ಯಮಂತ್ರಿ ತಿಳಿಸಿದರು.
ಟಿಪ್ಪು ಸುಲ್ತಾನ್ ಕುರಿತ ಈ ಕೃತಿಯನ್ನು ಹೊರತಂದಿರುವ ತೊಂಭತ್ತರ ಇಳಿ ವಯಸ್ಸಿನಲ್ಲಿ ಲೇಖಕ ಪ್ರೊ.ಶೇಖ್ ಅಲಿ ಅವರು ನಮ್ಮ ಸಮಾಜದ ಸಂಪತ್ತು ಇದ್ದಹಾಗೆ ಎಂದು ಬಣ್ಣಿಸಿ, ಅವರು ಶತಾಯುಷಿಯಾಗಿ ನಮ್ಮಿಂದಿಗೆ ಬಾಳಲಿ ಎಂದು ಮುಖ್ಯಮಂತ್ರಿ ಹಾರೈಸಿದರು.
ಪ್ರೊ. ಶೇಖ್ ಅಲಿ ಮಾತನಾಡಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನವೇ ಫ್ರಾನ್ಸ್ ನ ಕ್ರಾಂತಿಕಾರಿ ನಾಯಕ ನೆಪೋಲಿಯನ್ ಬೋನಾಪಾರ್ಟ್ ಅವರಿಗೆ ಬರೆದ ಪತ್ರದಲ್ಲಿ ತನ್ನನ್ನು ಸ್ವತಂತ್ರ ಭಾರತದ ಪ್ರಥಮ ಪ್ರಜೆ ಎಂದು ಟಿಪ್ಪು ಸುಲ್ತಾನ್ ಉಲ್ಲೇಖಿಸಿಕೊಂಡಿದ್ದರು, ಇದು ಆತನಲ್ಲಿದ್ದ ರಾಷ್ಟ್ರ ಪ್ರೇಮದ ಸಂಕೇತ. ಅಲ್ಲದೆ, ಟಿಪ್ಪು ಜಾತ್ಯತೀತವಾದಿ ಎಂಬುದಕ್ಕೆ ಆತನ ಅವಧಿಯಲ್ಲಿ ಆತ 156 ದೇವಾಲಯಗಳಿಗೆ ಅನುದಾನ ನೀಡಿದ್ದೇ ಸಾಕ್ಷಿಯಿದೆ ಎಂದು ಅವರು ಹೇಳಿದರು.
ನರಿಯಂತೆ ನೂರು ವರ್ಷ ಬದುಕುವುದಕ್ಕಿಂತಲೂ, ಸಿಂಹದಂತೆ ಒಂದು ದಿನ ಬದುಕುವುದೇ ಲೇಸು ಎಂಬ ತರ್ಕವನ್ನು ಟಿಪ್ಪು ಪಾಲಿಸುತ್ತಿದ್ದರು. ನುಡಿದಂತೆಯೇ ಭಾರತ ಸ್ವಾತಂತ್ರ್ಯಕ್ಕೆ ಮೊದಲು ರಕ್ತ ಸುರಿಸಿ ಟಿಪ್ಪು ಅಮರರಾದರು ಎಂದರು.
ಈ ಸಂದರ್ಭದಲ್ಲಿ ವಾರ್ತಾ ಸಚಿವ ಆರ್. ರೋಷನ್ ಬೇಗ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಕೆ. ರಹ್ಮಾನ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಜರಿದ್ದರು.
ಕನ್ನಡಕ್ಕೆ ಟಿಪ್ಪು ಸುಲ್ತಾನ್
ಪ್ರೊ. ಬಿ.ಶೇಖ್ ಅಲಿ ಅವರು ರಚಿಸಿರುವ ‘ಟಿಪ್ಪು ಸುಲ್ತಾನ್- ಎ ಕ್ರುಸೇಡರ್ ಫಾರ್ ಚೇಂಜ್’ 440 ಪುಟಗಳಿದ್ದು, ಆಂಗ್ಲ ಭಾಷೆಯ ಕೃತಿಯ ಬೆಲೆ ರೂ.650. ಈ ಕೃತಿಯ ಸಂಪೂರ್ಣ ಭಾಗವನ್ನು ಗಝೆಟಿಯರ್ ಇಲಾಖೆಯ ಜಾಲತಾಣದಲ್ಲಿ ಉಚಿತವಾಗಿ ಸಿಗಲಿದೆ. ಅಲ್ಲದೆ, ಮುಖ್ಯಮಂತ್ರಿಯವರ ಆಶಯದಂತೆ ಈ ಕೃತಿಯ ಕನ್ನಡ ಆವೃತ್ತಿಯನ್ನು ಆದಷ್ಟು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ.
ಮಠಗಳ ಆಡಳಿತದಲ್ಲಿ ಮಧ್ಯಪ್ರವೇಶವಿಲ್ಲ: ಸಿದ್ದರಾಮಯ್ಯ
ರಾಜ್ಯದಲ್ಲಿನ ಧಾರ್ಮಿಕ ಮಠಗಳ ಆಡಳಿತದಲ್ಲಿ ಕೈಹಾಕುವ ಇಚ್ಛೆ ಸರಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಮಠಗಳಲ್ಲಿ ಭ್ರಷ್ಟಾಚಾರಕ್ಕೆ ಇತರೆ ಕಾನೂನುಬಾಹಿರ ಚಟುವಟಿಕೆಗಳನ್ನು ಕೈಗೊಂಡಲ್ಲಿ ಸರಕಾರ ಮಧ್ಯ ಪ್ರವೇಶಿಸಬಹುದು ಎಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ವಿಧೇಯಕವನ್ನು ಮಂಡಿಸಲಾಗಿದೆ ವಿನಾ ಯಾವುದೇ ಕಾರಣಕ್ಕೂ ಮಠಗಳ ಆಡಳಿತದಲ್ಲಿ ಸರಕಾರ ಮಧ್ಯ ಪ್ರವೇಶಿಸುವ ಇಲ್ಲವೆ ನಿಯಂತ್ರಣ ಮಾಡುವ ಪ್ರಕ್ರಿಯೆಯೇ ಇಲ್ಲ ಎಂದು ಅವರು ಹೇಳಿದರು.