ಪ್ರಮುಖ ವರದಿಗಳು

ಜೊತೆಯಾದ ಜನತಾ ಪರಿವಾರ: ಮೋದಿ ಸರಕಾರದ ವಿರುದ್ಧ ಮಹಾ ಧರಣಿ ಪಕ್ಷ ವಿಲೀನದೆಡೆಗೆ ಮೊದಲ ಹೆಜ್ಜೆ

Pinterest LinkedIn Tumblr

000141B___ಹೊಸದಿಲ್ಲಿ, ಡಿ.22: ಈ ಹಿಂದಿನ ಜನತಾ ಪರಿವಾರದ ಆರು ರಾಜಕೀಯ ಪಕ್ಷಗಳ ಧುರೀಣರು ಸೋಮವಾರ ‘ಮಹಾ ಧರಣಿ’ಯ ವೇದಿಕೆಯನ್ನು ಹಂಚಿಕೊಂಡಿದ್ದು, ಬಿಜೆಪಿಯ ವಿಭಜನಾ ರಾಜಕಾರಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ವಾಗ್ದಾನಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಜೆಡಿಯುನ ನಿತೀಶ್‌ಕುಮಾರ್ ಸೇರಿದಂತೆ ಬೇರೆಬೇರೆ ರಾಜಕೀಯ ಪಕ್ಷಗಳ ಧುರೀಣರು ತಮ್ಮ ‘ಪೂರ್ವಾಗ್ರಹ’ಗಳನ್ನು ಮರೆತುಬಿಡುವಂತೆ ಕರೆ ನೀಡಿದರು. ಬಿಜೆಪಿಯನ್ನು ಉಚ್ಚಾಟನೆ ಮಾಡುವ ಮೂಲಕ ದೇಶದ ರಾಜಕೀಯದಲ್ಲಿ ’ಹೊಸದೊಂದು ಕಥೆ’ ಬರೆಯುವ ಆಶ್ವಾಸನೆಯನ್ನು ಅವರು ನೀಡಿದ್ದಾರೆ.

ಎನ್‌ಸಿಪಿಯ ತಾರೀಖ್ ಅನ್ವರ್ ಮತ್ತು ಡಿ.ಪಿ.ತ್ರಿಪಾಠಿ ವೇದಿಕೆಯನ್ನು ಹಂಚಿಕೊಂಡಿದ್ದರೆ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿ ಪತ್ರ ರವಾನಿಸಿದ್ದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ, ಇಂಡಿಯನ್ ನ್ಯಾಷನಲ್ ಲೋಕದಳದ ದುಷ್ಯಂತ ಚೌತಾಲಾ ಮತ್ತು ಎಸ್‌ಜೆಪಿಯ ಕಮಲ್ ಮೋರಾರ್ಕ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನತಾ ಪರಿವಾರದ ಎಲ್ಲ ಪಕ್ಷಗಳ ವಿಲೀನದ ದಿಸೆಯಲ್ಲಿ ರಾಜಕೀಯ ಧುರೀಣರ ಮೊದಲ ಗಟ್ಟಿ ಹೆಜ್ಜೆ ಇದಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಹಿಂದೆ ಜನತಾ ಪರಿವಾರದ ಪಕ್ಷಗಳು ಮೂರು ಮೈತ್ರಿಕೂಟ ಸರಕಾರಗಳನ್ನು ರಚಿಸಿದ್ದವು ಎಂಬುದನ್ನು ಧುರೀಣರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಈ (ಮೋದಿ) ಸರಕಾರವು ಕೇವಲ ಶೇ.31ರಷ್ಟು ಮಾತ್ರ ಮತ ಪಡೆದುಕೊಂಡಿದೆ ಎಂಬುದನ್ನು ಅವರು ಮೋದಿಗೆ ನೆನಪಿಸಿಕೊಟ್ಟರು. ಅಲ್ಲದೆ, ಸರಕಾರ ತಾನು ನೀಡಿರುವ ಆಶ್ವಾಸನೆಗಳನ್ನು ಈಡೇರಿಸದೇ ಇದ್ದಲ್ಲಿ ಮತ್ತೆ ಜನರ ಮುಂದೆ ಹೋಗ ಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದರು.

‘ಪ್ರತ್ಯೇಕ ಪಕ್ಷಗಳ ಗುರುತಿನಿಂದ ನಾವು ಏಕೈಕ ಪಕ್ಷವಾಗಿ ವಿಲೀನಗೊಳ್ಳಬೇಕು. ಈ ವಿಚಾರದಲ್ಲಿ ಒಂದು ಒಪ್ಪಂದಕ್ಕೆ ಬರಲಾಗಿದೆ. ಮುಲಾಯಂ ಸಿಂಗ್ ಯಾದವ್ ಈ ಸಂಬಂಧವಾಗಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಈ ದಿಸೆಯಲ್ಲಿ ನಾವೆಲ್ಲ ಪಣ ತೊಡೋಣ’ ಎಂದು ನಿತೀಶ್‌ಕುಮಾರ್ ಹೇಳಿದರು.

‘ನಾವು ಇತರ ರಾಜಕೀಯ ಪಕ್ಷಗಳನ್ನೂ ಸಂಪರ್ಕಿಸಬೇಕು. ನಾವೆಲ್ಲ ಸೇರಿ ಸಮಗ್ರ ಪ್ರತಿಪಕ್ಷ ಕಟ್ಟೋಣ. ನಾವೆಲ್ಲರೂ ಒಗ್ಗೂಡಬೇಕು. ನಮ್ಮೆಲ್ಲ ಪೂರ್ವಾಗ್ರಹಗಳನ್ನು ಬಿಟ್ಟು ಪ್ರಬಲ ಪ್ರತಿಪಕ್ಷವನ್ನು ನಾವು ಕಟ್ಟಬೇಕು’ ಎಂದು ಅವರು ನುಡಿದರು.

ಹಲವಾರು ವಿಷಯಗಳಲ್ಲಿ ಕೇಂದ್ರ ಸರಕಾರವನ್ನು ದೂಷಿಸಿದ ಲಾಲು ಪ್ರಸಾದ್ ಯಾದವ್, ‘ಮಮತಾ ಬ್ಯಾನರ್ಜಿ ಅವರ ಮೇಲೆ ಪದೇಪದೇ ದಾಳಿ ಮಾಡುವ ಪ್ರಯತ್ನ ನಡೆದಿದೆ’ ಎಂದರು. ನನ್ನ ಮತ್ತು ನಿತೀಶ್‌ಕುಮಾರ್ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಜನರು ಮಾತನಾಡುತ್ತಾರೆ. ‘ನಾವು ಈಗ ಒಂದಾಗಿದ್ದೇವೆ’ ಎಂದರು. ಹಳೆಯದೆಲ್ಲವನ್ನು ಮರೆತು ಬಿಡಲು ಕಾಲ ಕೂಡಿ ಬಂದಿದೆ. ನಾವೀಗ ಹೊಸ ಅಧ್ಯಾಯವನ್ನು ಬರೆಯಲಿದ್ದೇವೆ ಎಂದು ಅವರು ನುಡಿದರು.

ನರೇಂದ್ರ ಮೋದಿ, ರಾಜ್‌ನಾಥ್ ಸಿಂಗ್ ಮತ್ತು ಬಾಬಾ ರಾಮ್‌ದೇವ್ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಡಿರುವ ಭಾಷಣದ ಧ್ವನಿಮುದ್ರಿಕೆಯನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಲಾಯಿತು. ‘ಕಪ್ಪು ಹಣ ವಾಪಸ್ ತಂದ ನಂತರ ಪ್ರತಿಯೊಬ್ಬ ಬಡವನ ಕಿಸೆಗೆ 15 ಲಕ್ಷ ರೂಪಾಯಿ ಬಂದು ತಲುಪುವುದು ಎಂದು ಹೇಳಲಾಗಿತ್ತು. ಈ ಆಶ್ವಾಸನೆ ಈಗ ಎಲ್ಲಿ ಹೋಯಿತು’ ಎಂದು ಅವರು ಪ್ರಶ್ನಿಸಿದರು.

‘ಈ ಹಣವನ್ನು ನಗದು ಇಲ್ಲವೇ ಚೆಕ್ ಮುಖಾಂತರ ಕೊಡುವಿರಾ ಎಂದು ಬಿಜೆಪಿಯ ಪ್ರತಿಯೊಬ್ಬ ನಾಯಕನನ್ನು ಯಾಕೆ ಕೇಳಬೇಕು. ದೇಶದ ಪ್ರಧಾನಿಯಾಗಿರುವವರು ಸುಳ್ಳು ಹೇಳುತ್ತಿರುವುದು ದುರದೃಷ್ಟಕರ’ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಲಾಗಿರುವ ಆಶ್ವಾಸನೆ ಗಳನ್ನು ಈಡೇರಿಸುವಂತೆ ಅವರು ಮೋದಿ ಅವರನ್ನು ಒತ್ತಾಯಿಸಿದರು. ‘ಇಲ್ಲದೆ ಹೋದರೆ ನೀವು ನಿಮ್ಮ ಕುರ್ಚಿ ಖಾಲಿ ಮಾಡಿ ವಾಪಸ್ ಹೋಗಬೇಕು’ ಎಂದರು.

Write A Comment