ಮನೋರಂಜನೆ

ರಣಜಿ ಟ್ರೋಫಿ: ರೈಲ್ವೇಸ್‌ಗೆ ಕರ್ನಾಟಕ ಬ್ರೇಕ್; ಯುವರಾಜ್ ಸತತ ಎರಡನೆ ಶತಕ

Pinterest LinkedIn Tumblr

benny

ಹೊಸದಿಲ್ಲಿ, ಡಿ.22: ಸ್ಟುವರ್ಟ್ ಬಿನ್ನಿ (2-18) ಹಾಗೂ ಅಭಿಮನ್ಯು ಮಿಥುನ್ (1-35) ಅವರ ಶಿಸ್ತುಬದ್ಧ ಬೌಲಿಂಗ್‌ಗೆ ಹಳಿ ತಪ್ಪಿದ ರೈಲ್ವೇಸ್ ತಂಡ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಮೊದಲ ಇನಿಂಗ್ಸ್‌ನಲ್ಲಿ ಅಗ್ರ ಸರದಿ ಕುಸಿತ ಕಂಡಿದೆ.

ಸೋಮವಾರ ಇಲ್ಲಿ ನಡೆದ ಎರಡನೆ ದಿನದಾಟದಂತ್ಯಕ್ಕೆ ರೈಲ್ವೇಸ್ 36.5 ಓವರ್‌ಗಳಲ್ಲಿ 105 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮಜುಂದಾರ್(ಅಜೇಯ 25) ಹಾಗೂ ಅವಿನಾಶ್ ಯಾದವ್(ಅಜೇಯ 1) ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಕೌಶಿಕ್ (59 ರನ್) ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 207 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ರವಿವಾರದ ಮೊತ್ತಕ್ಕೆ 40 ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಜೇಯ 31 ರನ್‌ನಿಂದ ಆಟ ಮುಂದುವರಿಸಿದ ವಿಕೆಟ್‌ಕೀಪರ್ ಬ್ಯಾಟ್ಸ್ ಮನ್ ಸಿ.ಎಂ. ಗೌತಮ್ ಕರ್ನಾಟಕದ ಪರ ಅಗ್ರ ಸ್ಕೋರರ್ (64 ರನ್, 109 ಎಸೆತ, 12 ಬೌಂಡರಿ) ಎನಿಸಿಕೊಂಡರು.

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಬಾಲಂಗೋಚಿ ಶ್ರೇಯಸ್ ಗೋಪಾಲ್ 18 ರನ್‌ಗೆ ವಿಕೆಟ್ ಒಪ್ಪಿಸಿದರು. ರೈಲ್ವೇಸ್ ತಂಡದ ಪರವಾಗಿ ಮಧ್ಯಮ ವೇಗದ ಬೌಲರ್ ಕೆ. ಉಪಾಧ್ಯಾಯ 98 ರನ್‌ಗೆ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್82.3 ಓವರ್‌ಗಳಲ್ಲಿ 247 ರನ್‌ಗೆ ಆಲೌಟ್
(ಸಿ.ಎಂ. ಗೌತಮ್ 64, ಕುನಾಲ್ ಕಪೂರ್ 53, ರಾಬಿನ್ ಉತ್ತಪ್ಪ 40, ಕೆ. ಉಪಾಧ್ಯಾಯ 7-98, ರಂಜಿತ್ ಮಾಲಿ 2-43)
ರೈಲ್ವೇಸ್ ಪ್ರಥಮ ಇನಿಂಗ್ಸ್36.5 ಓವರ್‌ಗಳಲ್ಲಿ 105/4
(ಕೌಶಿಕ್ 59, ಮಜುಂದಾರ್ ಅಜೇಯ 25, ಬಿನ್ನಿ 2-18).

ಯುವರಾಜ್ ಸತತ ಎರಡನೆ ಶತಕ
ಪುಣೆ, ಡಿ.22: ಬಿಸಿಸಿಐ ಆಯ್ಕೆ ಸಮಿತಿ ಮುಂಬರುವ ವಿಶ್ವಕಪ್‌ಗೆ ಪ್ರಕಟಿಸಿದ್ದ 30 ಸದಸ್ಯರ ಸಂಭಾವ್ಯ ತಂಡದಿಂದ ಕಡೆಗಣಿಸಲ್ಪಟ್ಟಿದ್ದ ಯುವರಾಜ್ ಸಿಂಗ್ ರಣಜಿ ಟ್ರೋಫಿ ಟೂರ್ನಿಯಲ್ಲಿ ಸತತ ಎರಡನೆ ಶತಕವನ್ನು ಸಿಡಿಸಿ ತನಗಿನ್ನೂ ದೊಡ್ಡ ಸ್ಕೋರ್ ಗಳಿಸುವ ತಾಕತ್ತಿಗೆ ಎಂದು ತೋರಿಸಿಕೊಟ್ಟಿದ್ದಾರೆ.

ಡಿ.9 ರಂದು ಹರ್ಯಾಣ ವಿರುದ್ಧದ ಎರಡನೆ ಇನಿಂಗ್ಸ್‌ನಲ್ಲಿ 130 ರನ್ ಗಳಿಸಿದ್ದ ಯುವಿ ಸೋಮವಾರ ಇಲ್ಲಿ ನಡೆದ ಮಹಾರಾಷ್ಟ್ರದ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 136 ರನ್ ಗಳಿಸಿದ್ದಾರೆ. ಏಕದಿನ ಶೈಲಿಯಲ್ಲಿ ಆಡಿದ್ದ ಯುವಿ 160 ಎಸೆತಗಳಲ್ಲಿ 25 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದರು. ಯುವಿ ಶತಕದ ನೆರವಿನಿಂದ ಪಂಜಾಬ್ ಮೊದಲ ಇನಿಂಗ್ಸ್ ಮುನ್ನಡೆಯನ್ನು ಸಾಧಿಸಿದೆ.

ಮಹಾರಾಷ್ಟ್ರ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 210 ರನ್‌ಗೆ ಆಲೌಟ್ ಮಾಡಿದ್ದ ಪಂಜಾಬ್ ಎರಡನೆ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 370 ರನ್ ಗಳಿಸಿ 160 ರನ್ ಮುನ್ನಡೆಯಲ್ಲಿದೆ. ಯುವಿ ಡಿ.11, 2013ರ ನಂತರ ಟೀಮ್ ಇಂಡಿಯಾದಲ್ಲಿ ಆಡಿಲ್ಲ. ಈ ವರ್ಷದ ಎಪ್ರಿಲ್‌ನಲ್ಲಿ ಶ್ರೀಲಂಕಾದ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.

Write A Comment