ಮನೋರಂಜನೆ

ಜಡೇಜಗೆ ಗಾಯ, ಅಕ್ಷರ್ ಪಟೇಲ್ ಆಸ್ಟ್ರೇಲಿಯಕ್ಕೆ

Pinterest LinkedIn Tumblr

Akshar-Patel-Kings-XI-Punjab-IPL-2014-Player

ಹೊಸದಿಲ್ಲಿ, ಡಿ.22: ಗಾಯಗೊಂಡಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಬದಲಿಗನಾಗಿ ಗುಜರಾತ್‌ನ ಸವ್ಯಸಾಚಿ ಅಕ್ಷರ್ ಪಟೇಲ್ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಲ್ಲಿ ಆಡಲು ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

ಅಕ್ಷರ್ ಇದೇ ಮೊದಲ ಬಾರಿ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಭುಜನೋವಿನಿಂದ ಬಳಲುತ್ತಿರುವ ಜಡೇಜ ಭಾರತಕ್ಕೆ ಮರಳಲಿದ್ದು, ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರ್ಷಾರಂಭದಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದಿರುವ ಅಕ್ಷರ್ ಪಟೇಲ್ ಇದೀಗ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಪ್ರಸ್ತುತ ಗುಜರಾತ್ ಪರವಾಗಿ ಆಡುತ್ತಿರುವ ಅಕ್ಷರ್ ರವಿವಾರ ನಡೆದ ರಣಜಿ ಟ್ರೋಫಿಯ 3ನೆ ಸುತ್ತಿನ ಪಂದ್ಯದಲ್ಲಿ ಸೌರಾಷ್ಟ್ರದ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.

20ರ ಹರೆಯದ ಅಕ್ಷರ್ ಪಟೇಲ್ ಈಗಾಗಲೇ 9 ಏಕದಿನ ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದು, ಶ್ರೀಲಂಕಾದ ವಿರುದ್ಧ 40 ರನ್‌ಗೆ 3 ವಿಕೆಟ್ ಪಡೆದಿದ್ದರು. ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿರುವ ಅಕ್ಷರ್ ಪಟೇಲ್ ಮುಂಬರುವ ಆಸ್ಟ್ರೇಲಿಯದಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದ್ದರು. ಆದರೆ, ಅದಕ್ಕೂ ಮೊದಲೆ ಪಟೇಲ್ ಕಾಂಗರೂ ನಾಡಿಗೆ ತೆರಳುವ ಅವಕಾಶ ಪಡೆದಿದ್ದಾರೆ.

ಆಸ್ಟ್ರೇಲಿಯದಲ್ಲಿ ನೆಟ್ ಪ್ರಾಕ್ಟೀಸ್‌ನ ವೇಳೆ ಗಾಯಗೊಂಡಿರುವ ಜಡೇಜ ಅಡಿಲೇಡ್ ಹಾಗೂ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಇದೀಗ ಅವರು ಚಿಕಿತ್ಸೆ ಪಡೆಯಲು ಭಾರತಕ್ಕೆ ಆಗಮಿಸಲಿದ್ದಾರೆ. ವಿಶ್ವಕಪ್‌ಗೆ ಪೂರ್ವತಯಾರಿ ಸರಣಿ ಎನಿಸಿರುವ ಜನವರಿಯಲ್ಲಿ ನಡೆಯಲಿರುವ ತ್ರಿಕೋನ ಸರಣಿಗಿಂತ ಮೊದಲು ಜಡೇಜ ಚೇತರಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಉದ್ಬವಿಸಿದೆ.

Write A Comment