ಅಡಿಲೇಡ್, ಡಿ.9: ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅಬ್ಬರದ ಬ್ಯಾಟಿಂಗ್‌ನ ನೆರವಿನಿಂದ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ ಮಂಗಳವಾರ ಇಲ್ಲಿ ಆರಂಭವಾದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನ 6 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿದೆ.
ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಪಿಚ್‌ನ ಲಾಭವೆತ್ತಿದ ಆತಿಥೇಯರು ವಾರ್ನರ್ ಶತಕ(145 ರನ್, 163 ಎಸೆತ, 19 ಬೌಂಡರಿ), ಆಲ್‌ರೌಂಡರ್ ಸ್ಟೀವನ್ ಸ್ಮಿತ್(ಅಜೇಯ 72 ರನ್) ಹಾಗೂ ನಾಯಕ ಮೈಕಲ್ ಕ್ಲಾರ್ಕ್(60 ಗಾಯಾಳು ನಿವೃತ್ತಿ) ಸಹಾಯದಿಂದ 89.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿದರು. ಆರಂಭದಲ್ಲಿ ದುಬಾರಿಯಾದ ವೇಗಿಗಳಾದ ವರುಣ್ ಆ್ಯರೊನ್(2-95) ಹಾಗೂ ಮುಹಮ್ಮದ್ ಶಮಿ(2-83) ತಲಾ ಎರಡು ವಿಕೆಟನ್ನು ಪಡೆದರು. ಇಶಾಂತ್ ಶರ್ಮ(1-56) ಹಾಗೂ ಚೊಚ್ಚಲ ಪಂದ್ಯ ಆಡಿದ್ದ ಸ್ಪಿನ್ನರ್ ಕರಣ್ ಶರ್ಮ(1-89) ಮಿತವ್ಯಯಿಗಳೆನಿಸಿದರು. ಶಮಿ ಕೊನೆಯ ಕ್ಷಣದಲ್ಲಿ ಆಸೀಸ್‌ನ ಎರಡು ವಿಕೆಟನ್ನು ಕಬಳಿಸಿ ಭಾರತ ಮರು ಹೋರಾಡಲು ನೆರವಾದರು.
ಫಿಲಿಪ್ ಹ್ಯೂಸ್ ದಾರುಣ ಸಾವಿನಿಂದಾಗಿ ಭಾವಪೂರ್ಣ ಪಂದ್ಯವಾಗಿದ್ದ ಮೊದಲ ಟೆಸ್ಟ್‌ನಲ್ಲಿ ನಾಯಕ ಕ್ಲಾರ್ಕ್ ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಸಾದರು. ಆದರೆ, ಬ್ಯಾಟಿಂಗ್‌ನ ವೇಳೆ ಬೆನ್ನುನೋವು ಕಾಣಿಸಿಕೊಂಡ ಕಾರಣ ಗಾಯಾಳು ನಿವೃತ್ತಿಯಾದರು. ಪಂದ್ಯ ಆರಂಭಕ್ಕೆ ಮೊದಲು ಉಭಯ ತಂಡಗಳು 63 ಸೆಕೆಂಡ್‌ಗಳ ಕಾಲ ವೌನ ಪ್ರಾರ್ಥನೆ ನಡೆಸಿ ಅಗಲಿದ ಫಿಲಿಪ್ ಹ್ಯೂಸ್‌ಗೆ ಶ್ರದ್ಧಾಂಜಲಿ ಅರ್ಪಿಸಿದವು. ಹ್ಯೂಸ್ ಸಿಡ್ನಿಯಲ್ಲಿ ನ.25 ರಂದು ಬೌನ್ಸರ್‌ಗೆ ಬಲಿಯಾಗುವ ಮೊದಲು ಅಜೇಯ 63 ರನ್ ಗಳಿಸಿದ್ದರು. ಈ ಸವಿ ನೆನಪಿನಲ್ಲಿ 63 ಸೆಕೆಂಡ್ ವೌನ ಪ್ರಾರ್ಥನೆ ಸಲ್ಲಿಸಲಾಯಿತು.
ಹ್ಯೂಸ್ ಗೌರವಾರ್ಥ ಎರಡೂ ತಂಡಗಳ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿದ್ದರು. ಆಸ್ಟ್ರೇಲಿಯನ್ ಆಟಗಾರರು ತಮ್ಮ ಧಿರಿಸಿನಲ್ಲಿ ಹ್ಯೂಸ್‌ರ ಟೆಸ್ಟ್ ಕ್ಯಾಪ್ ನಂಬರ್ 408 ಧರಿಸಿದ್ದರು. ಮೊದಲ ದಿನದಾಟ ಹಲವು ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾಯಿತು. ಹ್ಯೂಸ್ ಸಾವಿನಿಂದಾಗಿ ಮೊದಲ ಟೆಸ್ಟ್ ಪಂದ್ಯ ಐದು ದಿನ ತಡವಾಗಿ ಮಂಗಳವಾರ ನಡೆದಿದ್ದು, ಮೊದಲ ಟೆಸ್ಟ್ ಪಂದ್ಯದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವಾರ್ನರ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 106 ಎಸೆತಗಳಲ್ಲಿ 10ನೆ ಟೆಸ್ಟ್ ಶತಕವನ್ನು ಸಿಡಿಸಿದರು. ಸಿಡ್ನಿಯಲ್ಲಿ ಹ್ಯೂಸ್ ಬೌನ್ಸರ್ ಎಸೆತಕ್ಕೆ ಗಂಭೀರ ಗಾಯಗೊಂಡು ಮೈದಾನದಲ್ಲಿ ಬಿದ್ದ ತಕ್ಷಣ ಅವರ ರಕ್ಷಣೆ ಮೊದಲಿಗೆ ಧಾವಿಸಿದ್ದ ವಾರ್ನರ್ ಇಂದು 63 ರನ್ ಗಳಿಸುತ್ತಲೇ ಆಕಾಶದತ್ತ ನೋಡಿ ಸ್ನೇಹಿತನನ್ನು ನೆನಪಿಸಿಕೊಂಡು ಭಾವುಕರಾದರು.
ನೆರೆದಿದ್ದ ಪ್ರೇಕ್ಷಕರಿಂದಲೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು.ಆಲ್‌ರೌಂಡರ್ ಸ್ಮಿತ್ 63 ರನ್ ಗಳಿಸಿದಾಗ ಹ್ಯೂಸ್‌ರನ್ನು ನೆನಪಿಸಿಕೊಂಡರು. ಆರಂಭಿಕ ಬ್ಯಾಟ್ಸ್‌ಮನ್ ರೋಜರ್ಸ್ ಹಾಗೂ ವಾರ್ನರ್ ಮೊದಲ ವಿಕೆಟ್‌ಗೆ 50 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಆದರೆ, ರೋಜರ್ಸ್ 9 ರನ್‌ಗೆ ಇಶಾಂತ್ ಶರ್ಮಗೆ ಔಟಾದರು. ರೋಜರ್ಸ್ ಔಟಾದಾಗ ಕ್ರೀಸ್‌ಗೆ ಆಗಮಿಸಿದ ಕ್ಲಾರ್ಕ್‌ರನ್ನು ಪ್ರೇಕ್ಷಕರು ಎದ್ದು ನಿಂತು ಸ್ವಾಗತಿಸಿದರು. ವಾರ್ನರ್ ಹಾಗೂ ಕ್ಲಾರ್ಕ್ ಮೂರನೆ ವಿಕೆಟ್‌ಗೆ 118 ರನ್ ಸೇರಿಸಿದರು. 84 ಎಸೆತಗಳಲ್ಲಿ 60 ರನ್ ಗಳಿಸಿದ್ದಾಗ ಕ್ಲಾರ್ಕ್‌ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು ಬ್ಯಾಟಿಂಗ್ ಮುಂದುವರಿಸಲಾಗದೆ ಪೆವಿಲಿಯನ್‌ಗೆ ಮರಳಿದರು.
19 ಬೌಂಡರಿಗಳಿದ್ದ 145 ರನ್ ಗಳಿಸಿದ್ದ ವಾರ್ನರ್ 57ನೆ ಓವರ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಕರಣ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಈ ವರ್ಷ ಐದನೆ ಶತಕವನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡ ವಾರ್ನರ್ ಈ ವರ್ಷ ಆಡಿದ್ದ ಏಳು ಪಂದ್ಯಗಳಲ್ಲಿ 959 ರನ್ ಗಳಿಸಿದ್ದಾರೆ. ವಾರ್ನರ್ ಔಟಾದ ನಂತರ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ 4ನೆ ವಿಕೆಟ್‌ಗೆ 87 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. 41 ರನ್ ಗಳಿಸಿದ್ದ ಮಾರ್ಷ್‌ಗೆ ವರುಣ್ ಆ್ಯರೊನ್ ಪೆವಿಲಿಯನ್ ಹಾದಿ ತೋರಿಸಿದರು. ನೈಟ್ ವಾಚ್‌ಮನ್ ನಥನ್ ಲಿನ್ ಹಾಗೂ ವಿಕೆಟ್ ಕೀಪರ್ ಬ್ರಾಡ್ ಹಡ್ಡಿನ್(0) ವಿಕೆಟ್ ಕಬಳಿಸಿದ ಮುಹಮ್ಮದ್ ಶಮಿ ಇನಿಂಗ್ಸ್ ಅಂತ್ಯದಲ್ಲಿ ಭಾರತ ತಿರುಗೇಟು ನೀಡಲು ನೆರವಾದರು. ಅಜೇಯ 72 ರನ್ ಗಳಿಸಿರುವ ಸ್ಮಿತ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್ ವಿವರ
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್89.2 ಓವರ್‌ಗಳಲ್ಲಿ 354/6
ರೋಜರ್ಸ್ ಸಿ ಧವನ್ ಬಿ ಇಶಾಂತ್ ಶರ್ಮ 9, ಡೇವಿಡ್ ವಾರ್ನರ್ ಸಿ ಇಶಾಂತ್ ಶರ್ಮ ಬಿ ಕರಣ್ ಶರ್ಮ 145, ಶೇನ್ ವ್ಯಾಟ್ಸನ್ ಸಿ ಧವನ್ ಬಿ ವರುಣ್ ಆ್ಯರೊನ್ 14, ಮೈಕಲ್ ಕ್ಲಾರ್ಕ್ ಗಾಯಾಳು ನಿವೃತ್ತಿ 60, ಸ್ಟೀವನ್ ಸ್ಮಿತ್ ಅಜೇಯ 72, ಮಿಚೆಲ್ ಮಾರ್ಷ್ ಸಿ ಕೊಹ್ಲಿ ಬಿ ಆ್ಯರೊನ್ 41, ನಥನ್ ಲಿನ್ ಬಿ ಮುಹಮ್ಮದ್ ಶಮಿ 3, ಹಡ್ಡಿನ್ ಸಿ ಸಹಾ ಬಿ ಮುಹಮ್ಮದ್ ಶಮಿ 0, ಇತರ 10
ವಿಕೆಟ್ ಪತನ: 1-50, 2-88, 2-206, 3-258, 4-345, 5-352, 6-354,
ಬೌಲಿಂಗ್: ಮುಹಮ್ಮದ್ ಶಮಿ 17.2-1-83-2, ವರುಣ್ ಆರೊನ್ 17-1-95-2, ಇಶಾಂತ್ ಶರ್ಮ 20-4-56-1, ಕರಣ್ ಶರ್ಮ 23-1-89-1, ಮುರಳಿ ವಿಜಯ್ 12-3-27-0.