ಬೆಳಗಾವಿ (ಸುವರ್ಣ ವಿಧಾನಸೌಧ), ಡಿ. 9: ರಾಜ್ಯ ಸರಕಾರದ ವಿರುದ್ಧದ ಪ್ರತಿಭಟನೆಗೆ ದೊಣ್ಣೆ ತನ್ನಿರೆಂದು ಕರೆ ನೀಡುವವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಗ್ಗೆ ನಂಬಿಕೆಯಿದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ಬರುವವರಿಗೆ ಬಡಿಗೆ ತನ್ನಿರೆಂದು ಕರೆ ನೀಡಿದ್ದು, ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆಯೇ ಎಂದು ತಿರುಗೇಟು ನೀಡಿದರು.
ನಮ್ಮ ಸರಕಾರ ಯಾವುದೇ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಆದರೆ, ದೊಣ್ಣೆ, ಬಡಿಗೆ ಹಿಡಿದುಕೊಂಡು ಬರುವವರನ್ನು ನಿಯಂತ್ರಣ ಮಾಡುವುದು ಅನಿವಾರ್ಯ. ರಾಜ್ಯ ಸರಕಾರ ಶಾಂತಿಯುತ ಪ್ರತಿಭಟನೆಗೆ ಎಲ್ಲರಿಗೂ ಅವಕಾಶ ಕಲ್ಪಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಹಿರಿಯ ಸದಸ್ಯ ಸುರೇಶ್ ಕುಮಾರ್, ದೊಣ್ಣೆ ತನ್ನಿಯೆಂದು ಮಾಜಿ ಸಿಎಂ ಬಿಎಸ್‌ವೈ ಅವರು ‘ಆಕ್ರೋಶದೊಂದಿಗೆ ಬನ್ನಿ’ ಎಂದು ಹಳ್ಳಿ ಭಾಷೆಯಲ್ಲಿ ಹೇಳಿದ್ದಾರೆ ಎಂದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರೊಬ್ಬರೇ ಹಳ್ಳಿಯಿಂದ ಬಂದಿಲ್ಲ. ನಾವೂ ಹಳ್ಳಿಯಿಂದಲೇ ಬಂದವರು ಎಂದರು.
ಈ ವೇಳೆ ಮಾತು ಮುಂದುವರಿಸಿದ ಸುರೇಶ್ ಕುಮಾರ್, ನೀವು ಹಿಂದೆ ಕಲಾಪದಲ್ಲಿ ತೋಳು ತಟ್ಟಿದ್ದೀರಿ ಎಂದು ನಟನೆಯ ಮೂಲಕ ಕೆಣಕಿದರು. ಇದಕ್ಕೆ ಅಷ್ಟೇ ವೇಗದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಪಕ್ಷದವರು ತೊಡೆ ತಟ್ಟಿದ್ದರಿಂದ ನಾನು ತೋಳು ತಟ್ಟಿದ್ದೇನೆ ಇದರಲ್ಲಿ ತಪ್ಪೇನಿದೆ ಎಂದು ತಿರುಗೇಟು ನೀಡಿದರು.
ಅಲ್ಲದೆ, ಮಾತು ಮುಂದುವರಿಸಿದ ಸಿದ್ದರಾಮಯ್ಯ, ಇಂದು ದೊಣ್ಣೆ-ಬಡಿಗೆ ತನ್ನಿಯೆಂದು ಹೇಳ್ತೀರಿ, ನಾಳೆ ಗನ್ ತನ್ನಿಯೆಂದು ಹೇಳಿದರೆ ಸರಕಾರ ಏನು ಮಾಡಬೇಕು. ರಾಜ್ಯ ಸರಕಾರ ನಿಮ್ಮ ಎಲ್ಲ ಮಾತುಗಳನ್ನು ಕೇಳಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಲಿಲ್ಲ.
ವಿಪಕ್ಷಗಳ ಯಾವುದೇ ರೀತಿಯ ಚರ್ಚೆಗೆ ಉತ್ತರ ನೀಡಲು ರಾಜ್ಯ ಸರಕಾರ ಸನ್ನದ್ಧವಾಗಿದೆ. ಆದರೆ, ಬಿಜೆಪಿಗೆ ಚರ್ಚೆ ಮಾಡುವ ಉದ್ದೇಶವಿಲ್ಲ. ತಮ್ಮ ವೈಯಕ್ತಿಕ ಹಿತಕ್ಕಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ ನೆಪದಲ್ಲಿ ರಾಜಕೀಯ ಮಾಡುತ್ತಿದೆಯೆಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಸುವರ್ಣ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಧರಣಿ
ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.9: ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣಸೌಧದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಿ, ಸುಮಾರು 6 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದರೂ ಕಬ್ಬು ಬೆಳೆಗಾರರು ಸುವರ್ಣ ವಿಧಾನಸೌಧದೊಳಗೆ ಧರಣಿ ನಡೆಸಿದ ಘಟನೆ ಜರಗಿತು.
ಮಂಗಳವಾರ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಮಂದಿ ರೈತರು ಧರಣಿ ನಡೆಸಿದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.
300-350 ಮಂದಿ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣ ವಿಧಾನಸೌಧಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಸುಮಾರು 3 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಸಕ್ಕರೆ ಸಚಿವರ ಆಹ್ವಾನದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತ ರೈತ ಮುಖಂಡರನ್ನು ಸುವರ್ಣಸೌಧಕ್ಕೆ ಕರೆತಂದರು.
ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ಸರಕಾರದ ಪ್ರತಿನಿಧಿಯ ಜೊತೆ ಚರ್ಚೆ ಮಾಡದ ಹೊರತು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಪ್ರತಿಭಟನಾ ನಿರತರ ಪೈಕಿ ಏಳೆಂಟು ಮಂದಿಯ ನಿಯೋಗವನ್ನು ಮುಖ್ಯಮಂತ್ರಿಯವರ ಬಳಿ ಕರೆದುಕೊಂಡು ಹೋಗಲು ಕೆಳ ಹಂತದ ಅಧಿಕಾರಿಗಳು ಮುಂದಾದರು.
ಅದರಂತೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ 8 ಮಂದಿಯನ್ನು ಸುವರ್ಣಸೌಧದ ಒಳಗೆ ಕರೆದುಕೊಂಡು ಹೋದರು. ಅನಗತ್ಯವಾಗಿ ಯಾರನ್ನೂ ಸುವರ್ಣಸೌಧ ಪ್ರವೇಶಕ್ಕೆ ಅವಕಾಶ ನೀಡದೆ ನಿರ್ಬಂಧಿಸಲಾಗಿತ್ತು. ಪೊಲೀಸ್ ಅಧಿಕಾರಿಗಳ ಜೊತೆ ಬಂದ ಕಬ್ಬು ಬೆಳಗಾರರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಉದ್ದೇಶ ಹೊಂದಿತ್ತು. ಸಿದ್ದರಾಮಯ್ಯ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ಪ್ರತಿಪಕ್ಷಗಳ ಜೊತೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.
ಇದರಿಂದ ಅರ್ಧ ಗಂಟೆಯಾದರೂ ಕಬ್ಬು ಬೆಳೆಗಾರರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಸುವರ್ಣ ಸೌಧದ ಒಳಾಂಗಣದ ಪ್ರವೇಶ ದರದಲ್ಲಿ ಮುಖ್ಯಮಂತ್ರಿಗಾಗಿ ನಿರೀಕ್ಷಿಸುತ್ತಿದ್ದ ರೈತರು ಏಕಾಏಕಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಆರಂಭಿಸಿದರು.
ದಿಢೀರ್ ಪ್ರತಿಭಟನೆಯಿಂದ ಪೊಲೀಸರು ತಬ್ಬಿಬ್ಬಾದರೂ ಏಕಾಏಕಿ ರೈತರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏನೇ ಪ್ರಯತ್ನ ಪಟ್ಟರೂ ರೈತರು ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ. ಕೆಲ ಕ್ಷಣಗಳ ಕಾಲ ಸುವರ್ಣಸೌಧದ ಒಳಗೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಒಂದೆಡೆ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು ಶಬ್ದ ಉಂಟು ಮಾಡುವಂತಿರಲಿಲ್ಲ. ಎಷ್ಟೇ ಮನವೊಲಿಸಿದರೂ ರೈತರು ಮೌನವಾಗಲಿಲ್ಲ. ನಾವು ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಬಂದಿದ್ದೇವೆ. ಆದರೆ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಹೊರಗೆ ಪ್ರತಿಭಟನೆ ನಡೆಸಿದರೂ ಕೇಳುವ ವರಿಲ್ಲ, ಒಳಗೆ ಭೇಟಿಗೆಂದು ಬಂದರೂ ಬೆಲೆ ನೀಡುತ್ತಿಲ್ಲ, ಕಾದು ಬೇಸತ್ತು ಪ್ರತಿಭಟನೆ ನಡೆಸಬೇಕಾಗಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು. ಕೊನೆಗೆ ಘೋಷಣೆ ಕೂಗುತ್ತಿದ್ದವರನ್ನು ಮನವೊಲಿಸಿ ಸುಮ್ಮನಿರಿಸಲು ಪೊಲೀಸರು ಹರಸಾಹಸ ನಡೆಸಬೇಕಾಯಿತು.