ಮನೋರಂಜನೆ

ಚಾಂಪಿಯನ್ಸ್ ಟ್ರೋಫಿ: ಭಾರತ ಕ್ವಾರ್ಟರ್‌ಗೆ

Pinterest LinkedIn Tumblr

india-netherlands-champions-trophy-hockeyಭುವನೇಶ್ವರ, ಡಿ.9: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನಲ್ಲಿ ಆತಿಥೇಯ ಭಾರತ ತಂಡ ಹಾಲೆಂಡ್ ತಂಡವನ್ನು 3-2 ಅಂತರದಿಂದ ಮಣಿಸಿದೆ. ಟೂರ್ನಿಯಲ್ಲಿ ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಮಂಗಳವಾರ ಇಲ್ಲಿನ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ನಡೆದ ‘ಬಿ’ ಗುಂಪಿನ 3ನೆ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಹಾಲೆಂಡ್ ತಂಡವನ್ನು 18 ವರ್ಷಗಳ ನಂತರ ಮಣಿಸಿ ಮೂರಂಕವನ್ನು ಪಡೆಯಲು ಸಮರ್ಥವಾಯಿತು.

ಭಾರತ 1996ರಲ್ಲಿ ಬಾರ್ಸಿಲೋನದಲ್ಲಿ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಡಚ್ಚರನ್ನು ಕೊನೆಯ ಬಾರಿ ಮಣಿಸಿತ್ತು. 1986ರ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲೆಂಡನ್ನು ಮೊದಲ ಬಾರಿ ಸೋಲಿಸಿದೆ. ‘ಬಿ’ ಗುಂಪಿನಲ್ಲಿ ಮೂರನೆ ಸ್ಥಾನವನ್ನು ಪಡೆದಿರುವ ಭಾರತ ಗುರುವಾರದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಹಾಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಭಾರತದ ಪರ ಎಸ್.ವಿ. ಸುನೀಲ್(33ನೆ ನಿ.), ಮನ್‌ಪ್ರೀತ್ ಸಿಂಗ್(47ನೆ ನಿ.) ಹಾಗೂ ರೂಪಿಂದರ್ ಪಾಲ್ ಸಿಂಗ್(49ನೆ ನಿ.) ಗೋಲು ಬಾರಿಸಿದರು. ಹಾಲೆಂಡ್ ಪರ ಮಿಂಕ್ ವ್ಯಾನ್‌ಡೆರ್ ವೀಡೆನ್ (36ನೆ, 58ನೆ ನಿ.) ಎರಡು ಗೋಲು ಬಾರಿಸಿದರು. ಭಾರತದ ಪರ 32ನೆ ನಿಮಿಷದಲ್ಲಿ ಕನ್ನಡಿಗ ಸುನೀಲ್ ಗೋಲು ಖಾತೆ ತೆರೆದರು. 34ನೆ ನಿಮಿಷದಲ್ಲಿ ಗೋಲು ಬಾರಿಸಿದ ಹಾಲೆಂಡ್‌ನ ವಾಂಡರ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

47ನೆ ನಿಮಿಷದಲ್ಲಿ ಗೋಲು ಬಾರಿಸಿದ ಮನ್‌ಪ್ರೀತ್ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. 48ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ರೂಪಿಂದರ್ ಆತಿಥೇಯರಿಗೆ 3-1 ಮುನ್ನಡೆ ಒದಗಿಸಿಕೊಟ್ಟರು. ಹಾಲೆಂಡ್ 57ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಸ್ಕೋರನ್ನು 3-2ಕ್ಕೆ ತಲುಪಿಸಿತ್ತು. ಕೊನೆಯ ಕ್ಷಣದಲ್ಲಿ ಹಾಲೆಂಡ್‌ಗೆ ಗೋಲು ಬಾರಿಸಲು ನಿರಾಕರಿಸಿದ ಭಾರತದ ಗೋಲ್‌ಕೀಪರ್ ಹರ್ಜೋತ್ ಸಿಂಗ್ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

Write A Comment