ಮನೋರಂಜನೆ

ರಣಜಿ ಟ್ರೋಫಿ: ಕರ್ನಾಟಕ ಬಿಗಿ ಹಿಡಿತ; ಉತ್ತಪ್ಪ, ಅಗರವಾಲ್ ಅರ್ಧಶತಕ

Pinterest LinkedIn Tumblr

agarwalಬೆಂಗಳೂರು, ಡಿ.9: ಆರಂಭಿಕ ದಾಂಡಿಗರಾದ ರಾಬಿನ್ ಉತ್ತಪ್ಪ ಹಾಗೂ ಮಯಾಂಕ್ ಅಗರವಾಲ್ ಸಿಡಿಸಿದ ಅರ್ಧಶತಕದ ಸಹಾಯದಿಂದ ಕರ್ನಾಟಕ ತಂಡ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದ ಮೂರನೆ ದಿನದಾಟದಂತ್ಯಕ್ಕೆ ಕರ್ನಾಟಕ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 247 ರನ್ ಗಳಿಸಿದ್ದು 263 ರನ್ ಮುನ್ನಡೆಯಲ್ಲಿದೆ. ಮನೀಷ್ ಪಾಂಡೆ (ಅಜೇಯ 33) ಹಾಗೂ ಸ್ಟುವರ್ಟ್ ಬಿನ್ನಿ (ಅಜೇಯ 5) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೊದಲ ವಿಕೆಟ್‌ಗೆ 163 ರನ್ ಸೇರಿಸಿದ ಉತ್ತಪ್ಪ (76 ರನ್, 117 ಎ., 11 ಬೌಂ.) ಹಾಗೂ ಅಗರವಾಲ್(80 ರನ್, 113 ಎ, 13 ಬೌಂ, 1 ಸಿ.) ತಮಿಳುನಾಡು ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದರು. ಇದಕ್ಕೂ ಮೊದಲು ತಮಿಳುನಾಡು ತಂಡ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ 290 ರನ್‌ಗೆ ಉತ್ತರವಾಗಿ 274 ರನ್ ಗಳಿಸಲಷ್ಟೇ ಶಕ್ತವಾಯಿತು. ರಾಮಸ್ವಾಮಿ ಪ್ರಸನ್ನ (59) ರನೌಟಾದ ನಂತರ ಕುಸಿತ ಕಂಡ ತಮಿಳುನಾಡು 120.4 ಓವರ್‌ಗಳಲ್ಲಿ ಆಲೌಟಾಯಿತು.

ಅರವಿಂದ್ ಶ್ರೀನಾಥ್ (4-52) ತಮಿಳುನಾಡು ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ನಾಯಕ ವಿನಯಕುಮಾರ್(2-87) ಹಾಗೂ ಎಚ್‌ಎಸ್ ಶರತ್(2-22) ತಲಾ ಎರಡು ವಿಕೆಟ್ ಪಡೆದರು. ಕರ್ನಾಟಕದ ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಪ್ಪ ಔಟಾದ ನಂತರ ಕರ್ನಾಟಕ ಕ್ಷಿಪ್ರವಾಗಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಗರವಾಲ್ ಅವರು ವಿಜಯ ಶಂಕರ್ ಅವರ ನೇರ ಎಸೆತಕ್ಕೆ ರನೌಟಾದರು. ಮೊದಲ ಇನಿಂಗ್ಸ್‌ನಲ್ಲಿ 87 ರನ್ ಗಳಿಸಿದ್ದ ಕುನಾಲ್ ಕಪೂರ್(7) ಕೌಶಿಕ್‌ಗೆ ಔಟಾದರು. 7 ಬೌಂಡರಿಗಳಿದ್ದ 35 ರನ್ ಗಳಿಸಿದ್ದ ಕರುಣ್ ನಾಯರ್ ವೇಗದ ಬೌಲರ್ ಮುಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು ನಾಯರ್ ಅವರು ಮನೀಷ್ ಪಾಂಡೆ ಅವರೊಂದಿಗೆ ನಾಲ್ಕನೆ ವಿಕೆಟ್‌ಗೆ 59 ರನ್ ಸೇರಿಸಿದ್ದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್74.2 ಓವರ್‌ಗಳಲ್ಲಿ 290 ರನ್
ತಮಿಳುನಾಡು ಪ್ರಥಮ ಇನಿಂಗ್ಸ್120.4 ಓವರ್‌ಗಳಲ್ಲಿ 274 ರನ್
ಕರ್ನಾಟಕ ದ್ವಿತೀಯ ಇನಿಂಗ್ಸ್62 ಓವರ್‌ಗಳಲ್ಲಿ 247/4
(ರಾಬಿನ್ ಉತ್ತಪ್ಪ 76, ಮಯಾಂಕ ಅಗರವಾಲ್ 80, ಕರಣ್ ನಾಯರ್ 35, ಮನೀಷ್ ಪಾಂಡೆ ಅಜೇಯ 33, ಮುಹಮ್ಮದ್ 1-34).

Write A Comment