ಮನೋರಂಜನೆ

ಮೊದಲ ಏಕದಿನ; ಸುಹೈಲ್, ಅಫ್ರಿದಿ ಸಾಹಸ: ಪಾಕ್‌ಗೆ ರೋಚಕ ಜಯ

Pinterest LinkedIn Tumblr

afrideiದುಬೈ, ಡಿ.9: ಹಾರಿಸ್ ಸುಹೈಲ್ ಹಾಗೂ ಶಾಹಿದ್ ಅಫ್ರಿದಿ ದಾಖಲಿಸಿದ ಅರ್ಧಶತಕದ ಸಹಾಯದಿಂದ ಪಾಕಿಸ್ತಾನ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 3 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಸೋಮವಾರ ಇಲ್ಲಿನ ದುಬೈ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗೆಲ್ಲಲು 247 ರನ್ ಗುರಿ ಪಡೆದಿದ್ದ ಪಾಕ್ ಒಂದು ಹಂತದಲ್ಲಿ 127 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಆಗ ಏಳನೆ ವಿಕೆಟ್‌ಗೆ 110 ರನ್ ಜೊತೆಯಾಟ ನಡೆಸಿದ ಸುಹೈಲ್ (ಅಜೇಯ 85, 109 ಎಸೆತ, 5 ಬೌಂಡರಿ, 1 ಸಿ.) ಹಾಗೂ ಅಫ್ರಿದಿ (61 ರನ್, 51 ಎಸೆತ, 7 ಬೌಂ. 1 ಸಿ.) ಪಾಕ್ 49.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಲು ನೆರವಾದರು.

ಈ ಗೆಲುವಿನೊಂದಿಗೆ ಪಾಕ್ ತಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ. ಮಾತ್ರವಲ್ಲ ಸತತ ಐದು ಏಕದಿನ ಪಂದ್ಯಗಳ ಸೋಲಿನಿಂದ ಹೊರ ಬಂದಿದೆ. ಪಾಕ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್‌ಗಳಾದ ಮುಹಮ್ಮದ್ ಹಫೀಝ್(6) ಹಾಗೂ ಅಸದ್ ಶಫೀಖ್(5) ಅಲ್ಪ ಮೊತ್ತಕ್ಕೆ ಔಟಾದರು. ಅಹ್ಮದ್ ಶೆಹಝಾದ್(21 ರನ್), ಯೂನಿಸ್ ಖಾನ್, ಮಿಸ್ಬಾವುಲ್ ಹಕ್(13) ಹಾಗೂ ಸರ್ಫ್ರಾಝ್ ಅಹ್ಮದ್(26) ಹೆಚ್ಚು ಹೊತ್ತು ನಿಲ್ಲದೇ ಬೌಲರ್‌ಗಳ ಶ್ರಮವನ್ನು ವ್ಯರ್ಥಗೊಳಿಸಿದ್ದರು. ಏಳನೆ ವಿಕೆಟ್‌ಗೆ ಅಮೂಲ್ಯ ಜೊತೆಯಾಟವನ್ನು ನಡೆಸಿದ ಅಫ್ರಿದಿ ಹಾಗೂ ಸುಹೈಲ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಇದಕ್ಕೂ ಮೊದಲು ಟಾಸ್ ಜಯಿಸಿದ್ದ ಪಾಕ್ ತಂಡ ನ್ಯೂಝಿಲೆಂಡನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮುಹಮದ್ ಇರ್ಫಾನ್, ಉಮರ್ ಗುಲ್ ಹಾಗೂ ವಹಾಬ್ ರಿಯಾಝ್ ಮೊದಲ 5 ಓವರ್‌ಗಳಲ್ಲಿ 19 ರನ್ ನೀಡಿದರು. ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಒತ್ತಡ ಹೇರಿದರು. ಕಿವೀಸ್ 29ನೆ ಓವರ್‌ನಲ್ಲಿ 111 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

ಆಗ ಕಿವೀಸನ್ನು ಆಧರಿಸಿದ ರಾಸ್ ಟೇಲರ್, ಲೂಕ್ ರಾಂಚಿಯೊಂದಿಗೆ 6ನೆ ವಿಕೆಟ್‌ಗೆ 44 ರನ್ ಹಾಗೂ ಹಿರಿಯ ಆಟಗಾರ ಡೇನಿಯಲ್ ವೆಟೋರಿ ಅವರೊಂದಿಗೆ 7ನೆ ವಿಕೆಟ್‌ಗೆ 58 ರನ್ ಸೇರಿಸಿ ತಂಡವನ್ನು 200ರ ಗಡಿ ದಾಟಿಸಿದರು. ಅಂತಿಮ ಓವರ್‌ನಲ್ಲಿ ಒಂಟಿ ರನ್ ಗಳಿಸಿದ ಟೇಲರ್ 11ನೆ ಏಕದಿನ ಶತಕ ದಾಖಲಿಸಿದರು. ಕಿವೀಸ್ 5 ಓವರ್‌ಗಳಲ್ಲಿ 41 ಸೇರಿಸಿ ಸ್ಪರ್ಧಾತ್ಮಕ ಮೊತ್ತ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 250/7
(ಸುಹೈಲ್ ಅಜೇಯ 85, ಅಫ್ರಿದಿ 61, ವೆಟೋರಿ 2-40)
ನ್ಯೂಝಿಲೆಂಡ್: 246/7
(ಟೇಲರ್ 105, ಇರ್ಫಾನ್ 3-57).

Write A Comment