ಧನ್‌ಬಾದ್, ಜಾರ್ಖಂಡ್ : ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಲು ವಿರೋಧ ಪಕ್ಷಗಳಿಗೆ ವಿಷಯಗಳಿಲ್ಲ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ತ್ವರಿತ ಅಭಿವೃದ್ಧಿಗಾಗಿ ಬಿಜೆಪಿಗೆ ಬಹುಮತ ನೀಡುವಂತೆ ಜಾರ್ಖಂಡ್ ಜನತೆಯಲ್ಲಿ ಮನವಿ ಮಂಗಳವಾರ ಮಾಡಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ‘ದಲ್ಲಾಳಿಗಳ’ ಕೈಗಳಿಗೆ ಅಧಿಕಾರ ವಹಿಸದಂತೆ ಜನರಲ್ಲಿ ಕೋರಿದರು.
‘ವಿರೋಧ ಪಕ್ಷಗಳ ಮುಖಂಡರು ಈದಿನಗಳಲ್ಲಿ ತುಂಬಾ ಕ್ಷೋಭೆಗೊಂಡಿದ್ದಾರೆ.ಅವರು ತಮ್ಮ ಉಳಿವಿಗಾಗಿ ಪ್ರಚಾರ ನಡೆಸಬೇಕಿದೆ. ಅದಕ್ಕಾಗಿ ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಆದರೆ ಮೋದಿ ಸರ್ಕಾರದ ವಿರುದ್ಧ ಎತ್ತಲು ಯಾವುದೇ ಸಮಸ್ಯೆಗಳು ಅವರಲ್ಲಿಲ್ಲ. ಅವರು ಲೋಕಸಭೆ ಚುನಾವಣೆ ವೇಳೆ ಮಾಡಿದ ಭಾಷಣವನ್ನೇ ಇದೀಗ ಪುನರುಚ್ಚರಿಸುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಸಮಸ್ಯೆಗಳ ಕೊರತೆ ಎದುರಾಗಿದೆ’ ಎಂದು ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.
ತಮ್ಮ ಸರ್ಕಾರದ ನೀತಿಗಳು ಸಂಪನ್ಮೂಲ ಭರಿತ ಜಾರ್ಖಂಡ್ ರಾಜ್ಯ ಅಭಿವೃದ್ಧಿಯ ವೇಗಕ್ಕೆ ಸಹಾಯವಾಗಲಿದೆ. ಕಲ್ಲಿದ್ದಲು ನಿಕ್ಷೇಪಗಳ ಪ್ರಯೋಜನ ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ ಪ್ರಧಾನಿ, ‘ನೀವು ರಾಷ್ಟ್ರದ ಒಳತಿಗೆ ಮತಹಾಕಿದ್ದೀರಿ. ಅದನ್ನೇ ಜಾರ್ಖಂಡ್ ಹಿತದೃಷ್ಟಿಗಾಗಿ ನೀವು ಮಾಡುವುದಿಲ್ಲವೇ? ದೇಶದಲ್ಲಿ ಸಮಿಶ್ರ ಸರ್ಕಾರಗಳು ಅಧಿಕಾರವನ್ನು ‘ದಲ್ಲಾಳಿಗಳ’ ಕೈಗೆ ನೀಡಿವೆ. ಇಷ್ಟು ವರ್ಷಗಳ ಕಾಲ ಅವು ದೇಶಕ್ಕೆ ಹಾಗೂ ರಾಜ್ಯಗಳಿಗೆ ಏನು ಮಾಡಿವೆ ಎಂಬುದು ನಿಮಗೆ ತಿಳಿದಿದೆ’ ಎಂದು ನುಡಿದರು.
ರಾಜ್ಯದ ಕಲ್ಲಿದ್ದಲು ನಿಕ್ಷೇಪಗಳ ವಿಷಯ ಪ್ರಸ್ತಾಪಿಸಿದ ಮೋದಿ ಅವರು, ‘ನೀವು ಕಪ್ಪು ವಜ್ರದ ಮೇಲೆ ಕುಳಿತಿದ್ದೀರಿ. ಇಡೀ ದೇಶವನ್ನು ಬೆಳಗಿಸುವಂಥ ಸಾಮರ್ಥ್ಯ ಜಾರ್ಖಂಡಿನ ಕಪ್ಪುವಜ್ರಕ್ಕಿದೆ. ಇದರ ಪ್ರಯೋಜನಗಳನ್ನು ಪಡೆಯಲು ನಮ್ಮ ಸರ್ಕಾರ ನೀತಿಗಳು ರಾಜ್ಯಕ್ಕೆ ಸಹಾಯವಾಗಲಿವೆ’ ಎಂದರು.