ಮೈಸೂರು: ತಮ್ಮನ್ನು ಚುಡಾಯಿಸಿದ ಯುವಕರನ್ನು ಹರಿಯಾಣದ ಸಹೋದರಿಯರಿಬ್ಬರು ಥಳಿಸಿರುವುದು ಹಸಿರಾಗಿರುವಾಗಲೇ ಮೈಸೂರಿನಲ್ಲೊಂದು ಇದೇ ಮಾದರಿಯ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಚೈತ್ರಾ ಎಂಬ ಯುವತಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿ ಸಾಹಸ ಮೆರೆದಿದ್ದಾರೆ.
ಆರೋಪಿ ರಾಜೀವ್ ನಗರದ ಮೊಹಮ್ಮದ್ ಸಮೀರ್‌ನನ್ನು (33) ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಆರೋಪಿಯ ಬೆನ್ನು, ಮುಖಕ್ಕೆ ಗಾಯಗಳಾಗಿವೆ. ಯುವತಿಗೂ ತರಚಿದ ಗಾಯಗಳಾಗಿದ್ದು, ಚಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಮಯೋಚಿತವಾಗಿ ವರ್ತಿಸಿ ಧೈರ್ಯ ತೋರಿದ ಯುವತಿಯನ್ನು ನಗರ ಪೊಲೀಸ್ ಕಮಿಷನರ್ ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದ್ದಾರೆ.
ನಡೆದಿದ್ದು ಏನು?: ನಗರದ ಚಾಮುಂಡಿಪುರಂನ ಹೊಸಬಂಡಿಕೆರೆಯ ನಿವೃತ್ತ ರೈಲ್ವೆ ಉದ್ಯೋಗಿ ಲೋಕನಾಥ್ ಅವರ ಪುತ್ರಿ ಚೈತ್ರಾ (25) ಎಂಬಿಎ ಪದವೀಧರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದ್ದು, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ರಜೆಯ ಮೇಲೆ ಮೈಸೂರಿಗೆ ಬಂದಿದ್ದ ಇವರು, ಗುಂಡ್ಲುಪೇಟೆಯ ಸ್ನೇಹಿತೆಯನ್ನು ಸೋಮವಾರ ಭೇಟಿಯಾಗಿದ್ದರು. ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸ್ನೇಹಿತೆಯನ್ನು ಬಸ್ ಹತ್ತಿಸಿ, ನಗರ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದರು. ಮಾರ್ಗಮಧ್ಯೆ ಪಾನಿಪೂರಿ ತಿನ್ನಲು ತೆರಳಿದಾಗ ಯುವಕರಿಬ್ಬರು ಹಿಂಬಾಲಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ.
ಪೈಪಿನಿಂದ ಥಳಿತ: ಇದನ್ನು ಲೆಕ್ಕಿಸದ ಚೈತ್ರಾ ಹಣ ಪಡೆಯಲು ದೊಡ್ಡಗಡಿಯಾರದ ಬಳಿ ಇರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ತೆರಳಿದ್ದಾರೆ. ಹಣ ಪಡೆದು ಮರಳುತ್ತಿದ್ದಾಗ ಸಮೀರ್ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ. ಇದಕ್ಕೆ ತಲೆಕೆಡಿಸಿಕೊಳ್ಳದೆ ಪುರಭವನದ ಆವರಣ ಪ್ರವೇಶಿಸಿದ್ದಾರೆ. ಆಗಲೂ ಬೆಂಬಿಡದ ಕಾಮುಕ ಕೈ ಹಿಡಿದು ಎಳೆದಾಡಿದ್ದಾನೆ. ಇದರಿಂದ ಕುಪಿತಗೊಂಡ ಚೈತ್ರಾ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಆಗ ಪರಾರಿಯಾದ ಸಮೀರ್, ನೂರು ಮೀಟರ್ ಮುಂದೆ ಸಾಗುತ್ತಿದ್ದಂತೆ ಮತ್ತೆ ಯುವತಿಯನ್ನು ಅಡ್ಡ ಹಾಕಿದ್ದಾನೆ.
ಹೊಡೆದಿದ್ದಕ್ಕೆ ಕಾರಣ ಕೇಳಿ ಗಲಾಟೆ ಶುರು ಮಾಡಿದ್ದಾನೆ. ಇದು ಚೈತ್ರಾಳನ್ನು ಮತ್ತಷ್ಟು ಕೆರಳಿಸಿದೆ. ತಕ್ಷಣ ಆತನ ಕೊರಳಿನ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ‘ಪೊಲೀಸ್’, ‘ಹೆಲ್ಪ್…’ ಎಂದು ಕೂಗುತ್ತಲೇ ಕೈಗೆ ಸಿಕ್ಕ ಕಬ್ಬಿಣದ ಪೈಪಿನಿಂದ ಥಳಿಸಿದ್ದಾರೆ. ಈ ರೌದ್ರಾವತಾರವನ್ನು ಕಂಡ ಮತ್ತೊಬ್ಬ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಸನ್ಮಾನ: ಬೀದಿ ಕಾಮಣ್ಣನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವತಿಯ ಧೈರ್ಯವನ್ನು ಶ್ಲಾಘಿಸಿದ ನಗರ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ, ಪ್ರಶಂಸನಾ ಪತ್ರ, ರೂ. 1 ಸಾವಿರ ನಗದು ನೀಡಿ ಗೌರವಿಸಿದರು. ‘ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೈತ್ರಾ ಮಾದರಿಯ ವರ್ತನೆ ತೋರಿದ್ದಾರೆ. ಮಹಿಳೆಯರು ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಮುಕ್ತವಾಗಿ ಪ್ರತಿಭಟಿಸಬೇಕು’ ಎಂದು ಹೇಳಿದರು.
ಮೂಕ ಪ್ರೇಕ್ಷಕರು: ಚೈತ್ರಾ ಮತ್ತು ಸಮೀರ್ ನಡುವೆ ಸುಮಾರು 15 ನಿಮಿಷ ಈ ರಂಪಾಟ ನಡೆದಿದೆ. ಸುತ್ತ ನೆರೆದ ಸಾರ್ವಜನಿಕರು ಯುವತಿಯ ನೆರವಿಗೆ ಧಾವಿಸಲು ಹಿಂದೇಟು ಹಾಕಿದ್ದಾರೆ. ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ದೌಡಾಯಿಸಿದ ‘ಗರುಡಾ’ ಸಂಚಾರ ವಾಹನ ಯುವಕನನ್ನು ವಶಕ್ಕೆ ಪಡೆದು ದೇವರಾಜ ಪೊಲೀಸ್ ಠಾಣೆಗೆ ಕರೆತಂದಿದೆ. ಈ ಸಂಬಂಧ ಐಪಿಸಿ ಕಲಂ 354 (ಎ) (ಲೈಂಗಿಕ ಪ್ರಚೋದನೆ) ಅನ್ವಯ ಪ್ರಕರಣ ದಾಖಲಾಗಿದೆ.
ಸದೆ ಬಡಿಯಬೇಕು
ಬೀದಿ ಕಾಮಣ್ಣರ ಕಿರುಕುಳವನ್ನು ಮಹಿಳೆಯರು ಸಹಿಸಿಕೊಳ್ಳಬಾರದು. ಕಾನೂನು, ಪೊಲೀಸ್ ವ್ಯವಸ್ಥೆ ಮಹಿಳೆಯರ ಒಳಿತನ್ನು ಬಯಸುತ್ತವೆ. ನಮ್ಮ ಶೀಲವನ್ನು ನಾವೇ ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವ, ಹಗುರವಾಗಿ ಮಾತನಾಡುವ ಕಾಮುಕರನ್ನು ಸದೆಬಡಿಯಬೇಕು
– ಚೈತ್ರಾ
1 Comment
Hats off….Chithra…..well done………..