ಕರ್ನಾಟಕ

ವಿಜಯಪುರ ಮಹಿಳಾ ವಿ.ವಿ: ಹಾಸ್ಟೆಲ್‌ಗೆ ಅಕ್ರಮ ಪ್ರವೇಶ: ಇಬ್ಬರ ಸಿಂಡಿಕೇಟ್ ಸದಸ್ಯತ್ವ ರದ್ದು

Pinterest LinkedIn Tumblr

2323232

ವಿಜಯಪುರ: ಇಲ್ಲಿಯ ರಾಜ್ಯ ಮಹಿಳಾ ವಿಶ್ವ­ವಿದ್ಯಾಲ­­ಯದ ಸಿಂಡಿಕೇಟ್ ಸದಸ್ಯರಾದ ಎಸ್.ಎಲ್. ಚಂದ್ರಶೇಖರ್, ರಾಘವೇಂದ್ರ ಸೊಂಡೂರ ಅವರ ಸದಸ್ಯತ್ವ ರದ್ದುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ರ ಸೆಕ್ಷನ್ 39ರ ಅನ್ವಯ, ಈ ಇಬ್ಬರ ವಿರುದ್ಧ ಅನುಚಿತ ಮತ್ತು ಬೇಜವಾಬ್ದಾರಿ ವರ್ತನೆ ಸಾಬೀತಾಗಿ­ರು­ವು­ದರಿಂದ, ಸಿಂಡಿಕೇಟ್ ಸದಸ್ಯತ್ವ ರದ್ದುಗೊಳಿಸಿ ಅಧಿ­ಸೂಚನೆ ಹೊರಡಿಸುವಂತೆ ಮಹಿಳಾ ವಿ.ವಿ. ಕುಲಪತಿ­ಗಳಿಗೆ ರಾಜಭವನ ನಿರ್ದೇಶನ ನೀಡಿದೆ. ರಾಜ್ಯಪಾಲರ ಆದೇಶದಂತೆ ಕುಲಸಚಿವರು ಸೋಮವಾರವೇ ಅಧಿಸೂಚನೆ ಹೊರಡಿಸಿದ್ದಾರೆ.
ವಿವರ: ಸಿಂಡಿಕೇಟ್ ಸದಸ್ಯರಾಗಿದ್ದ

ಎಸ್.ಎಲ್. ಚಂದ್ರಶೇಖರ್, ರಾಘವೇಂದ್ರ ಸೊಂಡೂರ ಅವರು ಕಳೆದ ಸೆಪ್ಟೆಂಬರ್‌ 19ರಂದು ಕಾಮಗಾರಿ ವೀಕ್ಷಿಸುವ ನೆಪದಲ್ಲಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ  ವಿದ್ಯಾರ್ಥಿನಿಯರು, ವಿ.ವಿ. ಅಧಿಕಾರಿಗಳ ಎದುರು ಕುಲಪತಿ, ಕುಲಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಇದರ ಜತೆಗೆ ಮಹಿಳಾ ವಿಶ್ವವಿದ್ಯಾ­ಲಯದ ವಿದ್ಯಾರ್ಥಿ­ನಿ­ಯರ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲದಿದ್ದರೂ ಕಾಮಗಾರಿ ವೀಕ್ಷಿಸುವ ನೆಪದಲ್ಲಿ ಅನುಮತಿ ಇಲ್ಲದೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಧಿಕಾರಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಸದಸ್ಯರು ತಮ್ಮ ಭೇಟಿ ಸಂದರ್ಭ­ದಲ್ಲಿ ಅನುಚಿತ­ವಾಗಿ ಮತ್ತು ಬೇಜ­ವಾಬ್ದಾರಿಯಿಂದ ನಡೆದುಕೊಂಡಿ­ದ್ದಾರೆ ಎಂಬ ದೂರುಗಳು ಬಂದಿದ್ದರಿಂದ ಈ ಇಬ್ಬರ ವಿರುದ್ಧ ಕುಲಪತಿ ಪ್ರೊ.ಮೀನಾ ಆರ್‌.ಚಂದಾವರಕರ ಅವರು ರಾಜ್ಯ­ಪಾಲರು, ಉನ್ನತ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೆ. 20 -ರಂದು ದೂರು ಸಲ್ಲಿಸಿದ್ದರು.

ತನಿಖಾಧಿಕಾರಿ ನೇಮಕ: ಕುಲಪತಿ ದೂರು ಆಧರಿಸಿ, ಆ ಇಬ್ಬರು ಸಿಂಡಿಕೇಟ್‌ ಸದಸ್ಯರ ವಿರುದ್ಧದ ಅನು­ಚಿತ ಮತ್ತು ಬೇಜವಾಬ್ದಾರಿ ವರ್ತನೆ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರು ಅಕ್ಟೋಬರ್‌ 29 ರಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯ­ದರ್ಶಿ, ಅಭಿವೃದ್ಧಿ ಆಯಕ್ತ­ರಾಗಿರುವ ಜಿ.ಲತಾ ಕೃಷ್ಣರಾವ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.

ತನಿಖಾಧಿಕಾರಿ ಜಿ.ಲತಾ ಕೃಷ್ಣರಾವ್ ಅವರು ನ. 11ರಂದು ಚಂದ್ರಶೇಖರ್, ಸೊಂಡೂರ ಸೇರಿದಂತೆ, ಕುಲಪತಿ, ಕುಲಸಚಿವರು, ನಿಲಯ ಪಾಲಕರು, ಪ್ರಸಾ­ರಾಂಗದ ನಿರ್ದೇಶಕರು ಮತ್ತಿತರರನ್ನು ವಿಚಾರಣೆಗೆ ಒಳಪಡಿಸಿದ್ದರು. ನಂತರ ಜಿ.ಲತಾ ಕೃಷ್ಣರಾವ್ ಸಲ್ಲಿಸಿದ್ದ ತನಿಖಾ ವರದಿ ಆಧರಿಸಿ, ರಾಜ್ಯಪಾಲರು ಇಬ್ಬರೂ ಸದಸ್ಯರ ಸಿಂಡಿಕೇಟ್ ಸದಸ್ಯತ್ವ ರದ್ದುಪಡಿಸಿ ಡಿ. 1ರಂದು ಆದೇಶ ಹೊರಡಿಸಿದ್ದಾರೆ.

Write A Comment