ಕುಂದಾಪುರ: ಆಸರೆ ಟ್ರಸ್ಟ್ (ರಿ.) ವಕ್ವಾಡಿ ಇವರ ಆಶ್ರಯದಲ್ಲಿ ಆ.9 ರವಿವಾರದಂದು ವಕ್ವಾಡಿಯ ಶ್ರೀ ಹಳೆಯಮ್ಮ ದೇವಿ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ಜರುಗಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಸರೆ ಸಂಸ್ಥೆಯು ಸಮಾಜಮುಖಿಯಾಗಿ ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಜನಮೆಚ್ಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ಶ್ಲಾಘಿಸಿದರು.
ದುಬೈ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್‌ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ, ಆಸರೆ ಟ್ರಸ್ಟ್ ಹಾಗೂ ಊರಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲು ಸದಾ ಕೈಜೋಡಿಸುವುದಾಗಿವಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಟ್ರಸ್ಟ್ ವಕ್ವಾಡಿ ಇದರ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಣಗಲ್ಲುಮನೆ ವಹಿಸಿದ್ದರು.
ಕಟೀಲು ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅವರು ದಿಕ್ಸೂಚಿ ಭಾಷಣಗೈದರು. ಹೊನ್ನಾವರದ ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಾಧಕ ವೈದ್ಯ ಡಾ. ಚಂದ್ರಶೇಖರ ಶೆಟ್ಟಿ ಸಾಧಕರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ವಕ್ವಾಡಿ ಶ್ರೀ ಹಳೆಯಮ್ಮ ದೇವಿ ಸಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ ಹಾಗೂ ನೆರವು ವಿತರಣೆ: ಈ ಸಂದರ್ಭದಲ್ಲಿ ಆಸರೆ ಟ್ರಸ್ಟ್‌ನ ಸಾಧಕ, ಕೋಟೇಶ್ವರ ರೋಟರಿ ಕ್ಲಬ್‌ನ ನೂತನ ಕಾರ್ಯದರ್ಶಿ ಅರುಣ್ ದೇವಾಡಿಗ, ಲಯನ್ಸ್ ಕ್ಲಬ್ ತೆಕ್ಕಟ್ಟೆಯ ನೂತನ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ಅಶೋಕ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ನಂದಿನಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ಥಳೀಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಅಶಕ್ತರಿಗೆ ಆರ್ಥಿಕ ನೆರವು ಹಾಗೂ ಸ್ಥಳೀಯ ಅಂಗನವಾಡಿ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ಅಸರೆ ಸಂಸ್ಥೆಯ ಸದಸ್ಯ ಹಾಗೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕೀರ್ತಿ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಆನಂದ್ ಆಚಾರ್ ವಂದಿಸಿದರು.
Comments are closed.