(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಅನೇಕ ಸುಲಿಗೆ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರನನ್ನು ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದ ಅಪರಾಧ ಪತ್ತೆ ದಳದ ತಂಡ ಮುಂಬಯಿ ಬಳಿಯ ಕೇಂದ್ರಾಡಳಿತ ಪ್ರದೇಶವಾದ ದಮನ್ ಎಂಬಲ್ಲಿ ಬಂಧಿಸಿ ಕರೆತಂದಿದ್ದು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತಃ ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಪ್ರಸ್ತುತ ಮಹಾರಾಷ್ಟ್ರದಲ್ಲಿ ವಾಸವಿರುವ ವಿಜಯ್ (48) ಬಂಧಿತ ಆರೋಪಿಯಾಗಿದ್ದು ಈತನಿಗೆ ಮೇ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ.
ಬಂಧಿತ ಆರೋಪಿಯಿಂದ 24.4 ಗ್ರಾಂ ತೂಕದ ಒಂದು ಚಿನ್ನದ ಸರ, 38.6 ಗ್ರಾಂ ತೂಕದ ಕರಿಮಣಿ ಸರ, ಟಿವಿಎಸ್ ಅಪಾಚಿ ಮೋಟಾರ್ ಸೈಕಲ್, ಮೊಬೈಲ್ ಸಹಿತ 3,25,500 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿ ಕೃತ್ಯಕ್ಕೆ ಬಳಸಿದ ಬೈಕಿನ ಚಲನವಲನಗಳ ಮೇಲೆ ನಿಗಾಯಿಟ್ಟ ಪೊಲೀಸರು ಸಿಸಿ ಟಿ.ವಿ ಪೂಟೇಜ್ ಆಧಾರದಲ್ಲಿ ಆತನ ಪತ್ತೆಗೆ ಮುಂದಾಗಿದ್ದು ಆಧುನಿಕ ತಂತ್ರಜ್ಞಾನಗಳ ಸಹಕಾರದಲ್ಲಿ ವಿಜಯ್ ನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ನವಾಗರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಹಾಗೂ ಮುಲುಂಡ್ ಠಾಣೆಯಲ್ಲಿ ಒಂದು ಪ್ರಕರಣವಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ದಲಿಂಗಪ್ಪ ಹಾಗೂ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ಸೂಚನೆಯಂತೆ ಬೈಂದೂರು ಇನ್‌ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ತನಿಖಾ ಪಿಎಸ್ಐ ವಿನಯ ಎಂ. ಕೊರ್ಲಹಳ್ಳಿ ಅಪರಾಧ ವಿಭಾಗದ ಸಿಬಂದಿ ಮೋಹನ ಪೂಜಾರಿ, ಶ್ರೀಧರ, ಪ್ರಿನ್ಸ್ ಕೆ.ಜೆ., ರಿತೇಶ್, ಕೃಷ್ಣದೇವಾಡಿಗ, ಅಣ್ಣಪ್ಪ ಪೂಜಾರಿ, ಚಾಲಕ ಚಂದ್ರ ಪೂಜಾರಿ, ಕೋಟ ಠಾಣೆಯ ರಾಘವೇಂದ್ರ ಶೆಟ್ಟಿ ಆರ್.ಡಿ. ಸೆಲ್ ವಿಭಾಗದ ಶಿವಾನಂದ, ದಿನೇಶ ಕಾರ್ಯಾಚರಣೆಯಲ್ಲಿದ್ದರು.
ಪ್ರಕರಣದ ಇನ್ನೋರ್ವ ಆರೋಪಿ ಸತ್ಸಿಂಗ್ ವಿರಮ್ ಸಿಂಗ್ ಸಂದು ಅಲಿಯಾಸ್ ಬಬ್ಬು ಸರ್ದಾರ್ ಎಂಬಾತ ಮುಲುಂಡ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತಿಳಿದುಬಂದಿದೆ.