India

21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ; ಹರ್ನಾಜ್ ಸಂಧು ಮಿಸ್ ಯೂನಿವರ್ಸ್

Pinterest LinkedIn Tumblr

ನವದೆಹಲಿ: ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ ಸಿಕ್ಕಿದೆ. ಪಂಜಾಬ್ ಮೂಲದ 21 ವರ್ಷದ ಸುಂದರಿ ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯೂನಿವರ್ಸ್ ಪಟ್ಟ ಒಲಿಸಿಕೊಂಡಿದ್ದಾರೆ. ಕೊನೆಯ ಬಾರಿ 2000ನೇ ಇಸವಿಯಲ್ಲಿ ಬಾಲಿವುಡ್ ನಟಿ ಲಾರಾ ದತ್ತ ಅವರಿಗೆ ಮಿಸ್ ಯೂನಿವರ್ಸ್ ಪಟ್ಟ ಒಲಿದಿತ್ತು.

ಇಸ್ರೇಲ್ ನ ಐಲಾಟ್ ನಲ್ಲಿ ನೆರವೇರಿದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಧರಿಸಿಕೊಂಡಿದ್ದಾರೆ.

ಮೆಕ್ಸಿಕೋ ದೇಶದ 2020ರ ಮಾಜಿ ಭುವನ ಸುಂದರಿ ಆಂಡ್ರಿಯಾ ಮೆಜಾ ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕರತಾಡನ ಮಧ್ಯೆ ಸಂಧು ಅವರಿಗೆ ಕಿರೀಟ ತೊಡಿಸಿದರು. ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮದ ನೇರ ಪ್ರಸಾರವಾಗಿದೆ. ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರು ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಟಾಪ್ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸಬಹುದು ಎಂದು ನೀವು ಹೇಳುತ್ತೀರಿ ಎಂದು ಕೇಳಿದ್ದರು. ಅದಕ್ಕೆ ಭಾರತದ ಹರ್ನಾಜ್ ಸಂಧು, ‘ಇಂದಿನ ಯುವಜನತೆ ಎದುರಿಸುತ್ತಿರುವ ದೊಡ್ಡ ಒತ್ತಡವೆಂದರೆ ತಮ್ಮಲ್ಲಿ ನಂಬಿಕೆ ಇಡಬೇಕಾಗಿರುವುದು. ನೀವು ವಿಶಿಷ್ಠರು ಎಂದು ಭಾವಿಸಿಕೊಂಡರೆ ನಿಮ್ಮ ಬದುಕು ಸುಂದರವಾಗುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ. ಮನೆಯಿಂದ ಆಚೆ ಬನ್ನಿ, ನಿಮ್ಮ ಬಗ್ಗೆ ಯೋಚನೆ ಮಾಡಿ, ನಿಮ್ಮ ಜೀವನಕ್ಕೆ ನೀವೇ ನಾಯಕರು, ನಿಮಗೆ ನೀವೇ ಧ್ವನಿಯಾಗಬೇಕು. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ಇಂದು ಇಲ್ಲಿ ನಿಂತಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.

Comments are closed.