ಕರಾವಳಿ

ಶಿರೂರು ಟೋಲ್‍ನಲ್ಲಿ ಅಪಘಾತ: ಸಿಬ್ಬಂದಿ ಸಾವು, ಸಂಸ್ಥೆಯ ನಿರ್ಲಕ್ಷ್ಯ ಖಂಡಿಸಿ ಟೋಲ್ ಎದುರು ಪ್ರತಿಭಟನೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗಡಿ ಭಾಗದಲ್ಲಿರುವ ಶಿರೂರು ಟೋಲ್ ಗೇಟ್‍ನಲ್ಲಿ ಡಿ.13 ರ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44)ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ರಾತ್ರಿ 2 ಗಂಟೆ ವೇಳೆ ವೇಗವಾಗಿ ಬಂದ ಕೆ.ಎ 10 ಎ 3398 ಕಾರು ಟೋಲ್ ಗೇಟ್ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ರಾಘವೇಂದ್ರ ಮೇಸ್ತ ಗಂಭೀರ ಗಾಯಗೊಂಡು ಮೃತಪಟ್ಟಿದ್ದು ಕಾರಿನಲ್ಲಿರುವವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟೋಲ್ ಸಂಸ್ಥೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ…
ಈ ಘಟನೆಗೆ ಟೋಲ್ ಗೇಟ್ ನಿರ್ವಹಣೆ ಮಾಡುತ್ತಿರುವವರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಬೆಳಿಗ್ಗೆ ಪ್ರತಿಭಟನೆ ನಡೆಯಿತು. ಟೋಲ್ ಸಿಬ್ಬಂದಿ ಮೃತಪಟ್ಟ ನಂತರವೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ, ಮೃತ ರಾಘವೇಂದ್ರ ಮೆಸ್ತನ ಕುಟುಂಬಕ್ಕೆ ಪರಿಹಾರ, ಮೃತನು ಕೆಲಸ ಮಾಡುತ್ತಿದ್ದ ಟೋಲ್ ಗೇಟ್ ನಿರ್ವಹಣೆ ಮಾಡುತ್ತಿದ್ದ ಕಂಪನಿಯಲ್ಲಿ ಆತನ ಹೆಂಡತಿಗೆ ಕೆಲಸ ಕೊಡಿಸಬೇಕು, ವಾಹನದ ವಿಮೆ ಹಾಗೂ ಇತರೆ ವಿಮೆಗಳನ್ನು ಕಂಪನಿಯೇ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು, ಈ ಬಗ್ಗೆ ಲಿಖಿತವಾಗಿ ಬರೆದುಕೊಡಬೇಕು ಎಂದು ಒತ್ತಾಯಿಸಿ ಶ್ರೀ ರಾಮ ಮೇಸ್ತರವರ ನೇತೃತ್ವದಲ್ಲಿ ಮೇಸ್ತ ಜಾತಿ ಹಾಗೂ ಸ್ಥಳೀಯರ ಸಹಿತ ಸುಮಾರು 125 ಜನರು ಶಿರೂರು ಟೋಲ್ ಬಳಿ ಪ್ರತಿಭಟನೆ ನಡೆಸಿದರು.

 

Comments are closed.