ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಆಗಿದೆ. ವಿಧಾನಸಭೆಯಲ್ಲಿ ಇತ್ತೀಚೆಗೆ ನಿಧನಾರಾದ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಅಪ್ಪು ನಿಧನರಾದ ದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದರು.
‘ಅಂದು ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡಿದ ಬಳಿಕ ಪುನೀತ್ ಅವರಿಗೆ ಈ ರೀತಿ ಆಗುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ. ವಿಷಯ ತಿಳಿದು ನಾನು ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಅವರು ನಿಧನರಾಗಿದ್ದರು. ಕೂಡಲೇ ಅವರ ಕುಟುಂಬದವರ ಜತೆ ಮಾತನಾಡಿ ಸಹಕಾರ ಕೋರಿದೆವು. ಡಾ. ರಾಜ್ಕುಮಾರ್ ಅಂತ್ಯ ಸಂಸ್ಕಾರದ ವೇಳೆ ನಡೆದ ಅಹಿತಕರ ಘಟನೆಗಳು ಮತ್ತೆ ಸಂಭವಿಸಬಾರದು ಎಂಬುದು ನಮ್ಮ ಉದ್ದೇಶ ಆಗಿತ್ತು. ಅದಕ್ಕೆ ಪುನೀತ್ ಕುಟುಂಬದವರ ಸಹಕಾರ ಸಿಕ್ಕಿತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದೆ. ಆ ಪ್ರಶಸ್ತಿ ನೀಡುವ ದಿನಾಂಕ ಯಾವುದು ಎಂದು ತಿಳಿಯಲು ಜನರು ಕಾದಿದ್ದಾರೆ. ಆ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು. ಪದ್ಮಶ್ರೀ ಪ್ರಶಸ್ತಿಗೆ ಅಪ್ಪು ಹೆಸರನ್ನು ಶಿಫಾರಸು ಮಾಡಲಾಗುವುದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಹರಿದುಬಂದ ಜನಸಾಗರವನ್ನು ನೋಡಿ ನನಗೆ ಆಶ್ಚರ್ಯ ಆಯಿತು. ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಜನರ ಹೃದಯದಲ್ಲಿ ಸ್ಥಾನ ಗಳಿಸಬಲ್ಲ ಎಂಬುದು ಅವರ ಸಾವಿನ ಬಳಿಕ ತಿಳಿಯಿತು. ಪುನೀತ್ ಕೇವಲ ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ. ಸಿನಿಮಾ ಹೊರತಾಗಿಯೂ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲ ಆಗುವ ರೀತಿಯಲ್ಲಿ ಆ್ಯಪ್ ಬಿಡುಗಡೆ ಮಾಡಿದ್ದರು ಎಂದು ಅಪ್ಪು ಮಾಡಿದ ಕಾರ್ಯಗಳನ್ನು ಬೊಮ್ಮಾಯಿ ಶ್ಲಾಘಿಸಿದರು.
‘ಚಿಕ್ಕಂದಿನಿಂದಲೂ ನಾನು ಪುನೀತ್ ಅವರನ್ನು ಬಲ್ಲೆ. ಅವರಿಗೆ ನಾನೊಂದು ಪ್ರಶ್ನೆ ಕೇಳಿದ್ದೆ. ನಿಮಗೆ ನಟನೆ ಇಷ್ಟು ಸರಳವಾಗಿ ಮೈಗೂಡಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದೆ. ತಮಗೆ ಅದು ಸಹಜವಾಗಿ ಬಂದಿದೆ ಅಂತ ಪುನೀತ್ ಹೇಳಿದ್ದರು’ ಎಂದು ಬೊಮ್ಮಾಯಿ ನೆನಪಿಸಿಕೊಂಡರು.
Comments are closed.