ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆತಂಕ ಹೆಚ್ಚುತ್ತಿದ್ದು ಬೆಂಗಳೂರಿನಲ್ಲಿ ಕೊರೋನಾಗೆ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದ್ದು ಒಟ್ಟು 38 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಬೆಂಗಳೂರಿನಲ್ಲಿಯೇ 32 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ.
ಕೋವಿಡ್ ಬಂದಿದೆ ಎಂದು ಜನ ಆತಂಕ ಪಡುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಅಗತ್ಯ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದರು.
ಕೋವಿಡ್ ತಾಂತ್ರಿಕ ಸಮಿತಿ ನಿನ್ನೆ ಸಭೆ ನಡೆಸಿ ರಾಜ್ಯದಲ್ಲಿ ಕಂಡುಬಂದಿರುವ ಕೋವಿಡ್ ಪ್ರಕರಣಗಳ ಕುರಿತಂತೆ ಚರ್ಚೆ ನಡೆಸಿದೆ. ನಾವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರದ ಜೊತೆ ಕೂಡ ಸಂಪರ್ಕದಲ್ಲಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕೋವಿಡ್ ಪಾಸಿಟಿವ್ ಹೊಂದಿದವರಿಗೆ ಮೈಲ್ಡ್ ಸಿಂಟಂಸ್ ಇದೆ. ಬಿಟ್ಟರೆ ಗಂಭೀರವಾದ ಸಮಸ್ಯೆಗಳು ಕಂಡುಬಂದಿಲ್ಲ. ಉಸಿರಾಟದ ತೊಂದರೆ ಇರುವವರಿಗೆ, ಸಾರಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರು ಅಡ್ಮಿಟ್ ಅಗಿರುವ ಆಸ್ಪತ್ರೆಗಳಲ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.
ಬಾಣಂತಿಯರು, ಜನ ಹೆಚ್ಚಿರುವ ಕಡೆ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ಯಾರು ಭಯ ಪಡುವ ಅಗತ್ಯವಿಲ್ಲ. ಕೋವಿಡ್ ಬಂದಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಮಾರ್ಗಸೂಚೊಯಂತೆ ಮುಂಜಾಗ್ರತೆ ವಹಿಸಿದರೆ ಸಾಕು. ತಕ್ಷಣಕ್ಕೆ ಮಾಸ್ಕ್ ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಬಾಣಂತಿಯರು, ಗರ್ಭಿಣಿಯರು ಧರಿಸಬೇಕು ಎಂದು ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸುವುದು ಉತ್ತಮ. ಸಾರ್ವಜನಿಕರು ಪ್ರಯಾಣ ಮಾಡಲು ಯಾವುದೇ ಅಡ್ಡಿಯಿಲ್ಲ. ಎಲ್ಲರು ಸಹಜ ಜೀವನ ನಡೆಸಬಹುದು. ಮಾಧ್ಯಮಗಳು ಆತಂಕ ಸೃಷ್ಟಿಸುವುದು ಬೇಡ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮಗಳಿಂದ ಆಗಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿ 38 ಜನರು ಕೋವಿಡ್ ಪಾಸಿಟಿವ್ ಹೊಂದಿದ್ದು, ಬೆಂಗಳೂರಿನಲ್ಲಿ ವಯೋ ವೃದ್ದರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಡಯಾಬಿಟಿಸ್ , ಹೃದಯದ ಕಾಯಿಲೆ ಸೇರಿದಂತೆ ಬಹು ಅಂಗಾಂಗಳ ವೈಫಲ್ಯದಿಂದ ಅವರು ಬಳಲುತ್ತಿದ್ದರು. SEPTIC SHOCK WITH MULTI ORGAN SYNDROME ನಿಧನಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೇ ಅವರು ಕೋವಿಡ್ 19 ಸೋಂಕಿಗೆ ತುತ್ತಾಗಿದ್ದರು ಎಂಬುದು ಬೆಳಕಿಗೆ ಬಂದಿದೆ.
ಇದೇ ತಿಂಗಳ 13 ರಂದು ಆಸ್ಪತ್ರೆಗೆ ದಾಖಲಾದ ದಿನದಿಂದ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೇ. 17 ರಂದು ನಿಧನರಾಗಿದ್ದಾರೆ. ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಉಸಿರಾಟದ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಮುಂಜಾಗ್ರತೆ ವಹಿಸಿ ತಪಾಸಣೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡುತ್ತೇನೆ.
-ದಿನೇಶ್ ಗುಂಡೂರಾವ್ (ಆರೋಗ್ಯ ಸಚಿವರು)
Comments are closed.