ಆರೋಗ್ಯ

ಕುಂದಾಪುರ ಪುರಸಭೆ; ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಮಾಹಿತಿ ಕಾರ್ಯಾಗಾರ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಮನುಷ್ಯ ನಿತ್ಯ ಬಳಕೆಯಲ್ಲಿ 64 ರೀತಿಯಾದ ಪ್ಲಾಸ್ಟಿಕ್ ಬಳಸುವ ಮೂಲಕ ಆರೋಗ್ಯದ ಮೇಲೆ ಸವಾಲೊಡ್ಡಿಕೊಳ್ಳುತ್ತಿದ್ದು ಜೀವದ ರಕ್ಷಣೆ ನಿಟ್ಟಿನಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಲು ಇಡೀ ದೇಶಕ್ಕೆ ಅನ್ವಯವಾಗುವಂತೆ ಕಾಯ್ದೆ ರೂಪಿಸಲಾಗಿದೆ. ಇದು ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಪ್ಲಾಸ್ಟಿಕ್ ಉತ್ಪಾದನೆ ಮಾಡುವವರಿಗೂ ಸಮಾನ ಕಾಯ್ದೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ಹೇಳಿದರು.

ಕುಂದಾಪುರ ಪುರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಮಂಗಳವಾರದಂದು ಕುಂದಾಪುರ ಪುರಸಭೆಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಪುರಸಭಾ ವ್ಯಾಪ್ತಿಯ ವರ್ತಕರು, ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಸ್ವಸ್ಥ ಸಮಾಜದ ಮೇಲೆ ಹಂತಹಂತವಾಗಿ ದುಷ್ಪರಿಣಾಮ ಬೀರುತ್ತಿದೆ. ಮನುಷ್ಯರ ಸಹಿತ, ಜಾನುವಾರು, ಪ್ರಾಣಿ-ಪಕ್ಷಿಗಳು ಈ ತ್ಯಾಜ್ಯ ತಿಂದು ಸಮಸ್ಯೆ ಅನುಭವಿಸುತ್ತಿದ್ದಾರೆ. 25 ವರ್ಷಗಳ ಹಿಂದೆ ಪ್ಲಾಸ್ಟಿಕ್ ಬಳಕೆ ಇರಲಿಲ್ಲ. ಕಾಲಘಟ್ಟ ಬದಲಾದಂತೆ ಮನುಷ್ಯ ಇದನ್ನು ನಿತ್ಯ ಜೀವನದಲ್ಲಿ ಬಳಸಲು ಆರಂಭಿಸಿದ್ದು ಅಗತ್ಯಕ್ಕೆ ತಕ್ಕಂತೆ ಉತ್ಪಾದಕರು ಪೂರೈಕೆ ಮಾಡಿದ್ದಾರೆ. ಇದೀಗಾ ಕಠಿಣ ಕಾನೂನು ಬಂದಿದ್ದು ಕ್ರಮೇಣ ಜನರು ಪ್ಲಾಸ್ಟಿಕ್ ರಹಿತವಾದ ಜೀವನಕ್ಕೆ ಹೊಂದಿಕೊಳ್ಳುತ್ತಾರೆ ಎಂದರು.

ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, 2016ರಲ್ಲಿ ಪ್ಲಾಸ್ಟಿಕ್‌ ನಿಷೇಧ ಕಾಯ್ದೆ ಬಂದಿದ್ದು ಅನುಷ್ಟಾನದ ಬಗ್ಗೆ ಹಲವು ಗೊಂದಲಗಳಾಗಿತ್ತು. ಈಗ ಕೇಂದ್ರ ಸರ್ಕಾರ ಕೂಡ ಈ ಕಾಯ್ದೆ ತಂದಿದ್ದು ರಾಜ್ಯದಲ್ಲಿಯೂ ಕೂಡ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳಲಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆ ಹೆಚ್ಚಿದೆ. ಮೀನು ಮಾರಾಟದ ಮಹಿಳೆಯರು ಪ್ಲಾಸ್ಟಿಕ್ ತೊಟ್ಟೆ ಮೂಲಕ ಮೀನು ನೀಡುತ್ತಿದ್ದು ಅವರ ಕಷ್ಟದ ಅರಿವಿದೆ. ಆದರೆ ಬುದ್ದಿವಂತರ ಜಿಲ್ಲೆಯಾದ ನಮ್ಮ ಜಿಲ್ಲೆಯಲ್ಲಿ ಸರ್ಕಾರದ ಕಾನೂನು-ಕಾಯ್ದೆ ಅನುಷ್ಟಾನಕ್ಕೆ ಬರಬೇಕು. ಸರಕಾರದ ಆದೇಶ ಕಾರ್ಯಗತಗೊಳಿಸುವಲ್ಲಿ ಅಧಿಕಾರಿಗಳು ಕ್ರಮವಹಿಸಬೇಕಿದೆ. ದಂಡ ಹಾಕುವುದು ಪರಿಹಾರವಲ್ಲ. ಸಾರ್ವಜನಿಕರು, ವರ್ತಕರು ಆದೇಶ ಪಾಲನೆ ಮಾಡಿ ಏಕ ಬಳಕೆ ಪ್ಲಾಸ್ಟಿಕ್ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಕುಂದಾಪುರ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಶ್ರೀಧರ್ ಶೇರೆಗಾರ್, ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್ ಖಾರ್ವಿ, ರತ್ನಾಕರ್ ಇದ್ದರು.

ಕುಂದಾಪುರ ಪುರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಸ್ವಾಗತಿಸಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ವಂದಿಸಿದರು.

Comments are closed.