ಕರಾವಳಿ

ಭಕ್ತಿಯೇ ಮನುಷ್ಯನ ಪರಮ ಶಕ್ತಿ : ಸ್ವಾಮಿನಿ ಮಂಗಳಾಮೃತ ಪ್ರಾಣ

Pinterest LinkedIn Tumblr

ಉಚ್ಚಿಲದಲ್ಲಿ‌ ಗುರುಪೂರ್ಣಿಮಾ 

ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರದ್ಧಾ ಭಕ್ತಿಗಳಿಂದ ಗುರುಪೂರ್ಣಿಮಾ ಆಚರಣೆ ಜರುಗಿತು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಮೂಹಿಕ ಪೂಜೆಯಲ್ಲಿ ಭಾಗವಹಿಸಿ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಿದರು. ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಸಾರಥ್ಯದಲ್ಲಿ ಜರುಗಿದ ಈ ಕಾರ್ಯಕ್ರಮವು ಶ್ರೀ ಗುರು ಪಾದುಕಾ ಪೂಜೆ,ಗುರು ಹೋಮ, ಮಹಾ ಮೃತ್ಯುಂಜಯ ಹೋಮ, ಸಾಮೂಹಿಕ ಸರ್ವೈಶ್ವರ್ಯ ಪೂಜೆ, ಕ್ಷೀರಾಭಿಷೇಕ, ಆರತಿ,ಪ್ರಸಾದ ವಿತರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅವರು ಆಶೀರ್ವಚನವಿತ್ತು”ಭೌತಿಕ ಲೋಲುಪ್ತಿಯಿಂದ ಮನುಷ್ಯ ಬಳಲಿ ಹೋಗಿದ್ದಾನೆ. ಚಿತ್ತಶಾಂತಿಯಿಲ್ಲದೆ ಕಷ್ಟ ಸಂಕಟಗಳಲ್ಲಿ ತೊಳಲಾಡುತ್ತಿದ್ದಾನೆ. ಇದಕ್ಕೆ ಭಕ್ತಿತತ್ತ್ವದಲ್ಲಿ ಉತ್ತರವಿದೆ. ಭಕ್ತಿ ಮತ್ತು ಸಂಪೂರ್ಣ ಶರಣಾಗತಿಯಿಂದ ಎಲ್ಲ ಕಷ್ಟಗಳಿಂದ ದೂರಾಗಿ ಬದುಕು ಹಗುರಾಗಲು ಸಾಧ್ಯ, ಭಕ್ತಿಯೇ ಮನುಷ್ಯನ ಪರಮಶಕ್ತಿ ಎಂದರು.

ಗುರುಪೂರ್ಣಿಮಾ ದಿನದ ಮಹತ್ವದ ಬಗ್ಗೆ ಮೈಸೂರಿನ ನ್ಯಾಯವಾದಿ ಒ. ಶಾಮ್ ಭಟ್ ಅವರು ಮಾತನಾಡಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮನ‌ವರು ಭಕ್ತರು ಯಾವ ರೀತಿಯಲ್ಲಿ ಎಷ್ಟೇ ದೂರದಲ್ಲಿದ್ದು ಪ್ರಾರ್ಥನೆ ಮಾಡಿದರೂ ತಮ್ಮ ದಿವ್ಯ ಶಕ್ತಿಯಿಂದ ಸಕಾರಾತ್ಮಕ ಪರಿವರ್ತನೆ ತರುತ್ತಿರುವ ಬಗ್ಗೆ ನಡೆದ ಅನುಭವಾಧಾರಿತ ಘಟನೆಗಳೊಂದಿಗೆ ತಿಳಿಸಿದರು .

ಅಮ್ಮನ ಭಕ್ತಿ ಭಾವದ ಸುಶ್ರಾವ್ಯ ಭಜನೆಗಳು ನೆರೆದಿದ್ದ ಭಕ್ತರಿಗೆ ಸಂತೃಪ್ತಿ ನೀಡಿತು. ನೂತನ ಸದಸ್ಯರ ಪದಗ್ರಹಣ:ಗುರುಪೂರ್ಣಿಮಾ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಮಠದದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಸಮಿತಿಗಳಿಗೆ ಆಯ್ಕೆಯಾದ ನೂತನ
ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶ್ರೀ ಮುರಳೀಧರ್ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸಮಿತಿಯ ಕಾರ್ಯಶೈಲಿಯ ಪರಿಚಯ ನೀಡಿದರು.ಶ್ರೀ ಚಂದ್ರೇಶ್ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಉಚ್ಚಿಲ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಶಂಕರ್,ಶ್ರೀ ಆನಂದ ಕುಂದರ್, ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್, ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಶ್ರೀ ಜಯ ಕೋಟ್ಯಾನ್,ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್ ಹಾಗೂ ಮೊಗವೀರ ಮಹಾ ಸಭಾದ ಪದಾಧಿಕಾರಿಗಳು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಗುರುಹೋಮ,ಮಹಾಮೃತ್ಯುಂಜಯ ಹೋಮ ಹಾಗೂ ವಿಶೇಷ ಪೂಜೆಗಳನ್ನು ಬ್ರಹ್ಮಚಾರಿ ಶ್ರೀ ರತೀಶ್ ,ಶ್ರೀ ಜಯಪ್ರಕಾಶ್ ನೆರವೇರಿಸಿದರು.

21 ದಿನಗಳ ಗುರುಪೂಜೆಯ ಸಮಾರೋಪ, ಹಾಗೂ ಅವರಿಗೆ ಅಮ್ಮನ ಪ್ರಸಾದ ವಿತರಣೆ ಮಾಡಲಾಯಿತು. ಭಾಗವಹಿಸಿದ ಎಲ್ಲರಿಗೂ ಮಹಾಪ್ರಸಾದ ನೀಡಲಾಯಿತು.

Comments are closed.