ಆರೋಗ್ಯ

ರಾಜ್ಯದಲ್ಲಿ ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ; ಕ್ರಿಸ್ಮಸ್, ಹೊಸ ವರ್ಷಾಚರಣೆ ಬಗ್ಗೆ ವಾರದ ಬಳಿಕ ನಿರ್ಧಾರ: ಸಿಎಂ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಕುರಿತು ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ವಾರದ ಬಳಿಕ ಈ ಕುರಿತು ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ, ಒಂದು ವಾರದ ಬಳಿಕ ನಿರ್ಧಾರ ಮಾಡಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ. ಕ್ರಿಸ್ಮಸ್, ಹೊಸ ವರ್ಷಕ್ಕೆ ಒಂದು ವಾರ ನೋಡಿಕೊಂಡು ಕೆಲ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ವಿವರಿಸಿದರು.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ಓಮಿಕ್ರಾನ್ ಕುರಿತು ವಿವರಣೆ ನೀಡಿದ್ದಾರೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಹಾಸ್ಟೆಲ್‌ಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದೇವೆ. ವಾರ್ಡನ್, ಅಡುಗೆಯವರಿಗೆ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು. ವ್ಯಾಕ್ಸಿನ್ ಡ್ರೈವ್ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಹಾಸ್ಟೆಲ್, ಕ್ಲಸ್ಟರ್ ಗೆ ಮಾತ್ರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ ಎಂದರು.

ಸಂಪುಟ ಸಭೆಯ ನಂತರ ಶಾಲೆಗಳ ಪರಿಸ್ಥಿತಿ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ, ಪರೀಕ್ಷೆಗಳು ಎಂದಿನಂತೆ ನಡೆಯುತ್ತಿದೆ. ಶಾಲೆಗಳಲ್ಲಿ ಹಿಂದಿನ ಮಾರ್ಗಸೂಚಿಯೇ ಮುಂದುವರಿಯಲಿದೆ. ಹೊಸದಾಗಿ ಜಾರಿಗೆ ತರುವುದಿಲ್ಲ. ವಸತಿ ಶಾಲೆಗಳು ಮತ್ತು ಹಾಸ್ಟೆಲ್ ಗಳಲ್ಲಿ ವಿಶೇಷ ಗಮನ ನೀಡುತ್ತೇವೆ ಎಂದರು. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಿಂದ ಅಧಿಕಾರಿಯನ್ನೊಳಗೊಂಡ ಜಂಟಿ ಸಮಿತಿ ಮಾಡಿ ವಸತಿ ಶಾಲೆಗಳು, ಹಾಸ್ಟೆಲ್ ಗಳಿಗೆ ಹೋಗಿ ಆಗಾಗ ತಪಾಸಣೆ ಮಾಡುತ್ತಿರಬೇಕೆಂದು ಸಲಹೆ ನೀಡಿದ್ದಾರೆ ಎಂದರು.

ಕೋವಿಡ್ ಸಾಂಕ್ರಾಮಿಕಕ್ಕೆ ಹಾಗೂ ಹೊಸ ತಳಿ ಒಮಿಕ್ರಾನ್ ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆಗಳ ಮುಖ್ಯಾಂಶಗಳು;

🔹ಕೋವಿಡ್ ಸ್ಥಿತಿಗತಿಯ ಬಗ್ಗೆ, ಒಮಿಕ್ರಾನ್ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರಿಂದ ವಿವರಣೆ.

🔹ಲಸಿಕಾ ಅಭಿಯಾನದ ವಿಶೇಷ ಮೇಳ ನಡೆಸಲು ಸಚಿವರ ಸಲಹೆ.

🔹ಈಗಿರುವ ಸೋಂಕು ಪಾಸಿಟಿವಿಟಿ ದರ ಪರಿಗಣಿಸಿದಲ್ಲಿ ಬಹಳ ಆತಂಕದ ಅವಶ್ಯಕತೆ ಇಲ್ಲ, ಮುನ್ನೆಚ್ಚರಿಕೆ ಅಗತ್ಯ

🔹ಹಾಸ್ಟೆಲ್ ಗಳಿಗೆ ವಿಶೇಷ ಮಾರ್ಗಸೂಚಿ – ಒಂದೇ ಬಾರಿಗೆ ಊಟಕ್ಕೆ ಬಾರದಂತೆ ಕ್ರಮ, ಅಡುಗೆ ಸಿಬ್ಬಂದಿಗೆ ಎರಡು ಡೋಸ್ ಲಸಿಕೆ, ಐಸೋಲೇಶನ್ ಕೊಠಡಿ, ಸ್ಯಾನಿಟೈಸ್ ಮೊದಲಾದ ಕ್ರಮಕ್ಕೆ ಸೂಚನೆ;

🔹ಜೊತೆಗೆ ಕ್ಲಸ್ಟರ್ ನಿರ್ವಹಣೆಗೆ ಸೂಚನೆ; ಇವುಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗಿದೆ.

🔹ಕ್ರಿಸ್ ಮಸ್ ಮತ್ತು ಹೊಸ ವರ್ಷದ ಬಗ್ಗೆ ವಾರದ ಬಳಿಕ ನಿರ್ಧಾರ.

 

Comments are closed.