(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ಪುರಾತನ ಸುಬ್ರಮಣ್ಯ ದೇವಸ್ಥಾನವಾದ ಕೋಟೇಶ್ವರ ಸಮೀಪದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನ (ಸುಬ್ರಮಣ್ಯ)ದಲ್ಲಿ ಚಂಪಾ ಷಷ್ಠಿ (ಹಿರಿ ಷಷ್ಠಿ) ಮಹೋತ್ಸವ ಡಿ.9 ಗುರುವಾರ ಸಂಪ್ರದಾಯಬದ್ಧವಾಗಿ ಸಂಭ್ರಮದಿಂದ ಜರುಗಿತು.
ದೇವಸ್ಥಾನಕ್ಕೆ ನಸುಕಿನಿಂದಲೇ ಸಾವಿರಾರು ಜನರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಹೂಕಾಯಿ ಹರಕೆ ಸಮರ್ಪಿಸಿದರು. ಕಳೆದ ವರ್ಷ ಕೋವಿಡ್ ಹಿನ್ನೆಲೆ ಸೇವೆಗಳಿಗೆ ಅವಕಾಶ ಇಲ್ಲದ ಕಾರಣ ಈ ಬಾರೀ ಮುಂಜಾನೆ 3.30ರಿಂದಲೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಮಡೆ ಸ್ನಾನಕ್ಕೆ ಅವಕಾಶವಿಲ್ಲದ ಕಾರಣ ಭಕ್ತರಿಂದ ಮಡೆ ಪ್ರದಕ್ಷಿಣೆ (ಉರುಳು ಸೇವೆ) ಬೆಳಿಗ್ಗೆ ನಡೆಯಿತು.
ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದು, ಮುಂಜಾನೆಯಿಂದಲೇ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಹಣ್ಣು ಕಾಯಿ,
ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ಸರತಿ ಸಾಲಿನಲ್ಲಿ ಬರುವ ದೃಶ್ಯವೂ ಕಂಡುಬಂತು. ದೇವಸ್ಥಾನದ ಪ್ರಾಂಗಣದಲ್ಲಿ ವಿಶಾಲ ಜಾಗವಿರುವ ಕಾರಣ ಈ ಬಾರಿ ನೂಕುನುಗ್ಗಲು ಉಂಟಾಗಿರಲಿಲ್ಲ.
ಈ ಸಂದರ್ಭ ದೇವಸ್ಥಾನದ ಪ್ರಭಾರ ಆಡಳಿತಾಧಿಕಾರಿ , ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಹೆಗ್ಡೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯನಾರಾಯಣ ಪುರಾಣಿಕ (ಅರ್ಚಕರು), ಭರತ್ ಕುಮಾರ್ ಶೆಟ್ಟಿ, ಚಂದ್ರ ಪೂಜಾರಿ ಕಾಳಾವರ, ಮಹೇಶ್ ಕಾಳಾವರ, ಲತಾ ಎಸ್.ಕಾಳಾವರ, ಲಲಿತಾ ಸಳ್ವಾಡಿ, ಕೆ.ರಂಜಿತ್ ಕುಮಾರ್ ಶೆಟ್ಟಿ, ಅಶೋಕ್ ಶೆಟ್ಟಿ ಕಾಳಾವರ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರವಿರಾಜ್ ಎನ್. ಶೆಟ್ಟಿ, ಅರ್ಚಕರು, ತಂತ್ರಿಗಳು, ಊರ ಪ್ರಮುಖರಾದ ಕೃಷ್ಣದೇವ ಕಾರಂತ್, ಬಾಲಚಂದ್ರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್…
ಕುಂದಾಪುರದ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ನಿರಂಜನ್ ಗೌಡ, ವಿವಿಧ ಠಾಣೆ ಪಿಎಸ್ಐಗಳು, ಸಿಬ್ಬಂದಿಗಳು ಬಂದೋಬಸ್ತ್ ವ್ಯವಸ್ಥೆ ಹಾಗೂ ಟ್ರಾಫಿಕ್ ಪಿಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ಸುಗಮ ಸಂಚಾರ ವ್ಯವಸ್ಥೆ ನಿರ್ವಹಿಸಿದರು.
ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಟಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಸಿಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಚಂಪಾ ಷಷ್ಟಿ ದಿನ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ಹರಕೆಗಳನ್ನು ನಾಗ ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಷಷ್ಟಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಡಿಯೂ ಇದೆ.
ನಾಳೆ ಧಾರ್ಮಿಕ ಕಾರ್ಯಗಳು….
ಡಿ.10 ರಂದು ಹಾಲಿಟ್ಟು ಸೇವೆ, ನಾಗ ಮಂಡಲೋತ್ಸವ ಕಟ್ಟುಕಟ್ಟಳೆ ಸೇವೆ ಹಾಗೂ ತುಲಾಭಾರ ಸೇವೆ ಜರುಗಲಿದೆ.
Comments are closed.