ಆರೋಗ್ಯ

ಕೋವಿಡ್’ನಿಂದ ಮರಣ: ಮೃತರ ಕುಟುಂಬದವರು ಪರಿಹಾರ ಪಡೆಯಲು ಅರ್ಜಿ ಆಹ್ವಾನ

Pinterest LinkedIn Tumblr

ಉಡುಪಿ: ಸರಕಾರದ ಆದೇಶದಂತೆ ಕೋವಿಡ್ -19 ವೈರಾಣು ಸೋಂಕಿನಿದಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ದುಡಿಯುವ ಸದಸ್ಯ ಮೃತ ಪಟ್ಟ ಸಂದರ್ಭದಲ್ಲಿ ಮೃತರ ಕಾನೂನುಬದ್ದ ವಾರಸುದಾರರ/ಕುಟುಂಬದ ಓರ್ವ ಸದಸ್ಯರಿಗೆ ಆರ್ಥಿಕ ನೆರವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಕ್ಕೆ ಒಂದು ಬಾರಿಗೆ ಸೀಮಿತಗೊಳಿಸಿ, ರಾಜ್ಯ ಸರಕಾರದ ಸಂಧ್ಯಾಸುರಕ್ಷಾ ಯೋಜನೆ ಲೆಕ್ಕ ಶೀರ್ಷಿಕೆಯ ಅನುದಾನದಿಂದ 1 ಲಕ್ಷ ರೂಗಳನ್ನು ಹಾಗೂ ಕೇಂದ್ರ ಸರಕಾರದ ಮಾರ್ಗ ಸೂಚಿಯಂತೆ ಪ್ರತಿಯೊಬ್ಬ ಮೃತರ ವಾರಸುದಾರರಿಗೆ ರಾಜ್ಯವಿಪತ್ತು ಪರಿಹಾರ ನಿಧಿ (SDRF) ಲೆಕ್ಕ ಶೀರ್ಷಿಕೆಯ ಅನುದಾನದಿಂದ ತಲಾ 50,000 ರೂಗಳ ಪರಿಹಾರ ನೀಡಲಾಗುವುದು.

ಮತ್ತು ಕೋವಿಡ್ ನಿಂದ ಮೃತಪಟ್ಟ ಪ್ರತೀ ಕುಟುಂಬಗಳಿಗೂ ಕುಟುಂಬದ ಕಾನೂನುಬದ್ದ ವಾರಿಸುದಾರರಿಗೆ 50000 ರೂ ಪರಿಹಾರವನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನೀಡಲು ಪರಿಷೃತ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು,ಸಂಬಂದಪಟ್ಟವರು ಪರಿಹಾರ ಪಡೆಯಲು ತಾಲೂಕು ಕಚೇರಿ/ಎಲ್ಲಾ ನಾಡ ಕಛೇರಿ/ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ಪರಿಹಾರವನ್ನು ಪಡೆಯಲು ತಮ್ಮ ವ್ಯಾಪ್ತಿಯ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಿ ಅರ್ಜಿ ನಮೂನೆ 1 ರಲ್ಲಿ ಮಾಹಿತಿ ಹಾಗೂ ನಮೂನೆ -2 ರಲ್ಲಿ ಸ್ವಯಂ ಘೋಷಣಾ ಪತ್ರವನ್ನು ಮತ್ತು ನಮೂನೆ -3 ರಲ್ಲಿ ನಿರಾಪೇಕ್ಷಣಾ ಪತ್ರವನ್ನು ಭರ್ತಿ ಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ ತಾಲ್ಲೂಕು ಕಛೇರಿಗೆ ಸಲ್ಲಿಸುವುದು.

ಅರ್ಹತೆ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೋವಿಡ್-19 ಮರಣ ಪರಿಹಾರ ಪಾವತಿಗೆ ಪರಿಗಣಿಸುವ ಎಲ್ಲಾ ಮೃತ ವ್ಯಕ್ತಿಗಳು ಕೋವಿಡ್-19 ಕಾರಣಗಳಿಂದಾಗಿ ಮೃತಪಟ್ಟಿರ ಬೇಕು. ಈ ಕುರಿತು ಅಧಿಕೃತ ಮರಣ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು. ರಾಜ್ಯ ಸರ್ಕಾರವು ಘೋಷಿಸಿರುವ ರೂ.1 ಲಕ್ಷಗಳ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿ.ಪಿ.ಎಲ್ ಕುಟುಂಬದ ದುಡಿಯುವ ಸದಸ್ಯರಾಗಿರಬೇಕು ಹಾಗೂ ಅರ್ಜಿದಾರರೂ ಸಹ ಅದೇ ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿರಬೇಕು. ಕೋವಿಡ್-19 ಸೋಂಕಿನಿಂದ ಮೃತಪಟ್ಟಿರುವ ಕುರಿತು ವೈದ್ಯಕೀಯ ಪ್ರಮಾಣ ಪತ್ರ (Form-4/4a) ಲಭ್ಯವಿಲ್ಲದಿದ್ದಲ್ಲಿ, ಕೋವಿಡ್-19 ಮರಣ ದೃಢೀಕರಣ ಸಮಿತಿ ((Covid-19 Death Ascertaining Committee-CDAC)) ನೀಡುವ ನಿಗದಿತ ಮರಣ ಪ್ರಮಾಣ ಪತ್ರವನ್ನು ಪರಿಗಣಿಸುವುದು. ರಾಜ್ಯ ಸರ್ಕಾರದಿಂದ ನೀಡಲಾಗುವ ರೂ. 1.00 ಲಕ್ಷ ಮರಣ ಪರಿಹಾರ ಧನ ಪಡೆಯಲು ಅರ್ಹವಾಗುವ ಬಿಪಿಎಲ್ ಕುಟುಂಬದ ಮೃತ ವ್ಯಕ್ತಿಯ ವಯಸ್ಸು ಕನಿಷ್ಠ 18 ವರ್ಷ ತುಂಬಿರ ಬೇಕು.

ಸಲ್ಲಿಸಬೇಕಾದ ದಾಖಲೆಗಳು : ಕೋವಿಡ್ -19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ P Number (Patient Number) (ಕೋವಿಡ್ ದೃಢಪಟ್ಟ ರೋಗಿ ಸಂಖ್ಯೆ) , ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ (ಫಾರ್ಮ್ -4 /4ಎ) , ಮೃತ ವ್ಯಕ್ತಿಯ ಆಧಾರ್ ಪ್ರತಿ ಅಥವಾ ಇತರೇ ಗುರುತಿನ ಚೀಟಿಗಳು, ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ,ಅರ್ಜಿದಾರರ ಆಧಾರ್ ಪ್ರತಿ, ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ,ಅರ್ಜಿದಾರರ ಬ್ಯಾಂಕ್/ಅಂಚೆ ಖಾತೆ ಪಾಸ್ ಬುಕ್, ಅರ್ಜಿದಾರರ ಸ್ವಯಂ ಘೋಷಣಾ ಪತ್ರ (ನಮೂನೆ-2),ಕುಟುಂಬ ಸದಸ್ಯರ ನಿರಾಪೇಕ್ಷಣಾ ಪತ್ರ (ನಮೂನೆ-3)

ಅರ್ಜಿ ನಮೂನೆಗಳನ್ನು ವೆಬ್ ಸೈಟ್ ವಿಳಾಸ www.udupi.nic.in ಮೂಲಕ ಹಾಗೂ ಸಂಬಧಿಸಿದ ತಾಲೂಕು ಕಛೇರಿಯಿಂದ ಪಡೆಯ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.