ಆರೋಗ್ಯ

ಕುಂದಾಪುರದ ಗೋಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗಾಂಜಾ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಪೊಲೀಸರಿಗೆ ಮನವಿ

Pinterest LinkedIn Tumblr

ಕುಂದಾಪುರ: ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಮದ್ಯ ಮತ್ತು ಗಾಂಜಾ ಸೇವನೆ ನಡೆಯುತ್ತಿದ್ದು, ಪರಿಸರ ನಿವಾಸಿಗಳಿಗೆ ಕಿರಿಕಿರಿ ಆಗುತ್ತಿದೆ. ಗಾಂಜಾ ಮಾರಾಟ,‌ ಸೇವನೆ ಹಾಗೂ ಸಾರ್ವಜನಿಕ ಸ್ಥಳ, ಶಾಲೆ ವಠಾರದಲ್ಲಿ ಮದ್ಯಪಾನ ಮಾಡುವ ಅಸಭ್ಯ ವರ್ತನೆಗೆ ಕಡಿವಾಣ ಹಾಕುವಂತೆ ಆಗ್ರಹಸಿ ಗೋಪಾಡಿ ಗ್ರಾಮ ಪಂಚಾಯತ್ ವತಿಯಿಂದ ಕುಂದಾಪುರ ಪೊಲೀಸ್ ಠಾಣಾ ಉಪನಿರೀಕ್ಷರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಗೋಪಾಡಿ ಗ್ರಾಮ ಮೂಡುಗೋಪಾಡಿ ಸರ್ಕಾರಿ ಶಾಲಾ ವಠಾರ, ಜನತಾ ಕಾಲನಿ ಮೈದಾನ, ಬಸ್ ನಿಲ್ದಾಣ ಬಳಿ ರಾತ್ರಿ ಸಮಯದಲ್ಲಿ ಪಡ್ಡೆ ಹುಡುಗರ ಗುಂಪು ಗಾಂಜಾ ಹಾಗೂ ಮದ್ಯ ಸೇವನೆ ಮಾಡುತ್ತಾರೆ. ಪರಿಸರದ ಜನರಿಗೆ ಇದರಿಂದ ಸಮಸ್ಯೆ ಆಗುತ್ತಿದ್ದರೂ ಪೊಲೀಸ್ ಇಲಾಖೆ ಅಕ್ರಮ ತಡೆಯಲು ಸಾಧ್ಯವಾಗಿಲ್ಲ ಎಂದು ಜನರು ಆರೋಪಿಸಿದ್ದಾರೆ. ಗೋಪಾಡಿ ಗ್ರಾಪಂ ಮಕ್ಕಳ, ಮಹಿಳೆಯರ ಗ್ರಾಮ ಸಭೆ ಮತ್ತು ಗ್ರಾಪಂ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ಕೂಡಾ ನಡೆದಿದೆ. ಇದೂವರೆಗೆ ಪೊಲೀಸರು ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿಯನ್ನು ಪ್ರಶ್ನಿಸುತ್ತಿದ್ದಾರೆ.

ಸಾರ್ವಜನಿಕರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮ ಸಭೆಯಲ್ಲಿ ಚರ್ಚಿಸಿ, ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಕೂಡಾ ಗಾಂಜಾ ಸೇವನೆ ಕುರಿತು ಇಲಾಖೆಗೆ ಪತ್ರ ಬರೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತು ಗೋಪಾಡಿ ಗ್ರಾಮ ಗಾಂಜಾ ಸೇವನೆ ಮತ್ತು ಮಾರಾಟ ಮುಕ್ತ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದೇವೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ ಪೂಜಾರಿ, ಗ್ರಾ.ಪಂ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಕಾಶ್, ಮೊದಲಾದವರು ಇದ್ದರು.

 

Comments are closed.