ಕರಾವಳಿ

ಮಂಗಳೂರು ಪೊಲೀಸರ ಕಾರ್ಯಾಚರಣೆ: ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ನೈಜೀರಿಯಾ ಪ್ರಜೆಗಳ ಬಂಧನ

Pinterest LinkedIn Tumblr

ಮಂಗಳೂರು, ಜೂನ್. 29: ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ನೈಜೀರಿಯಾ ಮೂಲದ ಮತ್ತಿಬ್ಬರು ಆರೋಪಿಗಳನ್ನು ಜೂ.28ರಂದು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.‌ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ನೈಜೀರಿಯಾ ಪ್ರಜೆಗಳಾದ ಪೌಲ್ ಒಹಮೋಬಿ ಯಾನೆ ಇಫೆಚುಕು ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎಂಬವರನ್ನು ಮಂಗಳೂರು ಪೊಲೀಸರು ಬೆಂಗಳೂರಿನ ಬಿದರಹಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್, ಜೂ.3ರಂದು ಮನಾಫ್, ಮುಝಾಂಬಿಲ್, ಅಹಮ್ಮದ್ ಮಸೂಕ್ ಎಂಬವರನ್ನು ವಶಕ್ಕೆ ಪಡೆದು 170 ಗ್ರಾಂ ಎಂ.ಡಿ.ಎಂ.ಎಂ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಜೂ.13ರಂದು ಉಪ್ಪಳ ನಿವಾಸಿಗಳಾಸ ಶಫೀಕ್ ಕೆ.ಎಸ್. ಮತ್ತು ಅಲ್ತಾಫ್ ರನ್ನು ವಶಕ್ಕೆ ಪಡೆದು 65 ಗ್ರಾಂ ಎಂ.ಡಿ.ಎಂ.ಎಂ ಡ್ರಗ್ಸ್ ವಶಕ್ಕೆ ಪಡೆಲಾಗಿತ್ತು. ವಿಚಾರಣೆ ಸಂದರ್ಭ ತಮಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಟ್ಯಾನ್ಲಿ ಚಿಮಾ ಮತ್ತು ಉಪ್ಪಳದ ರಮೀಜ್ ಬಗ್ಗೆ ಮಾಹಿತಿ ನೀಡಿದ್ದು ಅವರನ್ನು ಬಂಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಸ್ಟ್ಯಾನ್ಲಿ ಮತ್ತು ರಮೀಜ್ ನನ್ನು ವಿಚಾರಣೆ ಮಾಡಿದಾಗ ಬೆಂಗಳೂರಿನಲ್ಲಿರುವ ನೈಜೀರಿಯಾ ಮೂಲದ ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ರಿಂದ ಡ್ರಗ್ಸ್ ಖರೀದಿಸಿದ್ದಾಗಿ ಹೇಳಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಿದ ನಗರ ಪೊಲೀಸರು ಬಿದರಹಳ್ಳಿಯಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದೀಗ ಸಿಂಥೆಟಿಕ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರನ್ನು ಬಂಧಿಸುವ ಮೂಲಕ ಪೊಲೀಸರು ಒಟ್ಟು 7 ಮಂದಿಯನ್ನು ಬಂಧಿಸಿದಂತಾಗಿದೆ. ಮಂಗಳೂರು ಹಾಗೂ ಕೇರಳದ ವಿವಿಧ ಜಿಲ್ಲೆಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ- ಪೂರೈಕೆಯಲ್ಲಿ ನಿರತವಾಗಿದ್ದ ದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಬೇಧಿಸಿದ್ದಾರೆ.

ಇವರಿಬ್ಬರ ವೀಸಾ ಅವಧಿ ಮುಗಿದ ಬಳಿಕವೂ ಇವರಿಬ್ಬರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದು,, ಬೆಂಗಳೂರಿನಲ್ಲಿ ಟಿ ಶರ್ಟ್ ರಫ್ತು ಮಾಡುವ ಉದ್ಯೋಗದ ನೆಪದಲ್ಲಿ ಡ್ರಗ್ಸ್ ವ್ಯವಹಾರವನ್ನೂ ನಡೆಸುತ್ತಿದ್ದರೆಂದು ಕಮಿಶನರ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಬಂಡಾರು ಉಪಸ್ಥಿತರಿದ್ದರು.

Comments are closed.