ಆರೋಗ್ಯ

ಕೊರೋನಾ‌ ಲಾಕ್ಡೌನ್: ಬೈಂದೂರು ಕ್ಷೇತ್ರದಲ್ಲಿ 5000ಕ್ಕೂ ಅಧಿಕ ದಿನಸಿ ಕಿಟ್ ವಿತರಿಸುತ್ತಿರುವ ದಾನಿ ಗೋವಿಂದ ಬಾಬು ಪೂಜಾರಿ

Pinterest LinkedIn Tumblr

ಕುಂದಾಪುರ: ಕೊರೋನಾ ಎರಡನೇ ಅಲೆಯ ಲಾಕ್ಡೌನ್ ಜನಸಾಮನ್ಯರ, ದುಡಿದು ತಿನ್ನುವ ಬಹಳಷ್ಟು ಮಂದಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಉಡುಪಿ ಜಿಲ್ಲೆಯಲ್ಲಿದ್ದು ಕುಗ್ರಾಮಗಳನ್ನೇ ಹೊಂದಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ಕುಟುಂಬ ಲಾಕ್ಡೌನ್ ಹೊಡೆತಕ್ಕೆ ಹೈರಾಣಾಗಿದೆ. ಅವರ ಈ ಲಾಕ್ಡೌನ್ ಸಂದರ್ಭದ ಸಂಕಷ್ಟದಲ್ಲಿ ತಾನು ನಿಮ್ಮ ಜೊತೆಗಿದ್ದೇನೆ ಎಂದು ಧೈರ್ಯ ತುಂಬುತ್ತಿದ್ದಾರೆ ಉದ್ಯಮದಲ್ಲಿ ತೊಡಗಿಸಿಕೊಂಡು ದಾನ-ಧರ್ಮಕ್ಕೆ ಪ್ರಖ್ಯಾತಿಯಾದ ಗೋವಿಂದ ಬಾಬು ಪೂಜಾರಿ.

ಟ್ರಸ್ಟ್ ಮೂಲಕ‌ ಸೇವಾ ಕೈಂಕರ್ಯ…
ಬೈಂದೂರು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಗೋವಿಂದ ಬಾಬು ಪೂಜಾರಿ ಅವರ ನೇತೃತ್ವದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳಿರುವ ಸುಮಾರು 5000ಕ್ಕೂ ಅಧಿಕ ಕಿಟ್’ಗಳನ್ನು ವಿತರಿಸಲಾಗಿದೆ. ಕಳೆದ ವರ್ಷ ಇದೇ ಕೋವಿಡ್ ಲಾಕ್ಡೌನ್ ಸಂದರ್ಭ ತನ್ನೂರಿನ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡಲು ಎರಡು ತಿಂಗಳ ಕಾಲ ಶುದ್ಧ ಕುಡಿಯುವ ನೀರು ಕೊಟ್ಟಿದ್ರು. ಬಡ ಕುಟುಂಬವೊಂದಕ್ಕೆ ಸೂರು ನಿರ್ಮಿಸಿ ಕೊಟ್ಟಿದ್ದರು. ಈ‌ ವರ್ಷವೂ 300 ಕ್ಕೂ ಅಧಿಕ ಕುಟುಂಬಕ್ಕೆ ನೀರು ಸರಬರಾಜು ಮಾಡಿದ್ದಾರೆ. ಅಷ್ಟೇ ಅಲ್ಲ ಟ್ರಸ್ಟ್ ಮೂಲಕ‌ ಮೂರು ಮನೆಗಳು ನಿರ್ಮಾಣವಾಗಿದೆ. ಗಂಗೊಳ್ಳಿಯಲ್ಲಿರುವ ಕರಾವಳಿ ಕಾವಲು ಪಡೆಯಲ್ಲಿರುವ ಗೃಹರಕ್ಷಕ ಸಿಬ್ಬಂದಿಗಳಿಗೂ ಕಿಟ್ ವಿತರಿಸಲಾಗಿದೆ. ಗಂಗೊಳ್ಳಿಯಲ್ಲಿರುವ ಕರಾವಳಿ ಕಾವಲು ಪಡೆಯಲ್ಲಿರುವ ಗೃಹರಕ್ಷಕ ಸಿಬ್ಬಂದಿಗಳಿಗೂ ಕಿಟ್ ವಿತರಿಸಲಾಗಿದೆ.

ಕಿಟ್…ಜಲದಾನ…ಸಹಾಯಧನ
ಲಾಕ್ಡೌನ್ ಕಾರಣದಿಂದ ಜನಸಾಮಾನ್ಯರು, ದಿನನಿತ್ಯ ದುಡಿದು ತಿನ್ನುವವರಿಗೆ ಸಾಕಷ್ಟು ತೊಂದರೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಟ್ರಸ್ಟ್ ಮೂಲಕ ತನ್ನೂರಿನ ಜನರಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆರಂಭಿಕವಾಗಿ ಬೈಂದೂರಿನಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರಿಗೆ ದಿನಸಿ ಕಿಟ್, ಮಾಸ್ಕ್ ಸ್ಯಾನಿಟೈಸರ್ ನೀಡಿರುವುದಲ್ಲದೇ ಧನಸಹಾಯವನ್ನು ಮಾಡಲಾಯ್ತು. ಮುಂದುವರಿದು ಪ್ರತಿ ಗ್ರಾಮಗಳಿಗೂ ಗೋವಿಂದ ಬಾಬು ಪೂಜಾರಿ ಜನಸೇವಾ ಸಂಘದ ಮೂಲಕ ಅಗತ್ಯವುಳ್ಳವರನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಬೆಂಗಳೂರಿನಲ್ಲಿಯೂ ಆಟೋ ಚಾಲಕರು, ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ, ಧನಸಹಾಯ ಮಾಡಲಾಗಿದೆ.

ಮಳೆ ನಡುವೆಯೂ ಕಿಟ್ ಹಂಚಿಕೆ…..
ಶನಿವಾರದಿಂದ ಸತತವಾಗಿ ಮಳೆ‌ ಸುರಿಯುತ್ತಿದ್ದು ಈ ನಡುವೆಯೂ ದಾನಿ ಗೋವಿಂದ ಬಾಬು ಪೂಜಾರಿಯವರು ಖುದ್ದು ಆಯಾಯ ಸ್ಥಳಗಳಿಗೆ ತೆರಳಿ ಈ ಕಿಟ್ ವಿತರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತಾನು ಹೋದ ಸ್ಥಳದಲ್ಲಿ ಅನಾರೋಗ್ಯ ಪೀಡಿತರಿದ್ದವರಿಗೆ ಸಾಂತ್ವಾನ ಮಾತ್ರವಲ್ಲದೆ ಆರ್ಥಿಕ ಸಹಾಯಧನ ನೀಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಮಂಗಳವಾರವೂ ಕಿಟ್ ಹಂಚಿಕೆ ಕಾರ್ಯ ಮಳೆಯ ನಡುವೆಯೇ ಮುಂದುವರಿದೆ ಎಂದು ಗೋವಿಂದ ಬಾಬು ಪೂಜಾರಿ ಅಭಿಮಾನಿಯಾಗಿರುವ ಸಂದೀಪ್ ಕೊಡ್ಲಾಡಿ‌ ಹೇಳುತ್ತಾರೆ.

ಗೋವಿಂದ ಬಾಬು ಪೂಜಾರಿ ಜನಸೇವಾ ಸಂಘದ ನೇತೃತ್ವದಲ್ಲಿ ಸ್ವಯಂಸೇವಕರು, ಸ್ನೇಹಿತರು, ಹಿತೈಷಿಗಳು, ಕುಟುಂಬಿಕರ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳ ಅಗತ್ಯವುಳ್ಳವರನ್ನು ಗುರುತಿಸಿ ಅವರಿಗೆ ಕಿಟ್ ವಿತರಿಸುವ ಕಾರ್ಯ ಮಾಡಲಾಗಿದ್ದು, ಈ ಮಾನವೀಯ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.