ಆರೋಗ್ಯ

ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ

Pinterest LinkedIn Tumblr

ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ವರ್ಚುವಲ್ ವೇದಿಕೆಯ ಮೂಲಕ2021ರ ನೋಂದಾವಣೆಗೆ ಚಾಲನೆ ನೀಡಿದರು.

ಉದ್ಘಾಟನೆಯ ಬಳಿಕ ಡಾ.ಬಲ್ಲಾಳ್ ಮಾತನಾಡಿ, “ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವೀ 20 ವರ್ಷಗಳನ್ನು ಪೂರೈಸಲಾಗಿದೆ. ಕಳೆದ 20 ವರ್ಷಗಳಲ್ಲಿ, ನಾವು ಸಾಮಾಜಿಕ ಕಾಳಜಿಯೊಂದಿಗೆ ಉತ್ಕ್ರಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವುದರ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮಣಿಪಾಲ್ ಕಾರ್ಡ್ “ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ” ಎಂಬುದು ಈ ವರ್ಷದ ಧ್ಯೇಯ ವಾಕ್ಯ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆ. ಅಲ್ಲದೇ ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆ ಆಗಿದೆ. ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಮತ್ತು ಅವರು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ” ಎಂದು ಅವರು ಹೇಳಿದರು.

ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಯೋಜನೆ ವಿವರವನ್ನು ಪ್ರಕಟಿಸುತ್ತಾ ಮಣಿಪಾಲ್ ಆರೋಗ್ಯ ಕಾರ್ಡ್ ಒಂದು ವರ್ಷದ ಯೋಜನೆಯೊಂದಿಗೆ ಎರಡು ವರ್ಷದ ಯೋಜನೆಯನ್ನು ಸಹ ಒಳಗೊಂಡಿದೆ. ಕಾರ್ಡ್ ಹೊಂದಿರುವವರು ಮಣಿಪಾಲ, ಕಾರ್ಕಳ , ಮಂಗಳೂರು, ಗೋವಾ ಮತ್ತು ಕಟೀಲ್ ನಲ್ಲಿರುವ ನಮ್ಮ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು ಎಂದರು.

ಕಾರ್ಡ್ ಸೌಲಭ್ಯ…
1 ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹ 300 / -, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ₹ 600/- ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹ 750/-. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹ 500/-, ಕುಟುಂಬಕ್ಕೆ ₹ 800/- ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ₹ 950/- ಆಗಿರುತ್ತದೆ.

ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ 50% ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ 30% ರಿಯಾಯಿತಿ, ವಿಕಿರಣಶಾಸ್ತ್ರ ಪರೀಕ್ಷೆಗಳ ಮೇಲೆ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ 20% ರಿಯಾಯಿತಿ. ಡಯಾಲಿಸಿಸ್ ನಲ್ಲಿ ₹ 100/ -, ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ 12%ರವರೆಗೆ ರಿಯಾಯಿತಿ ಮತ್ತು ಒಂದೊಮ್ಮೆ ಜನರಲ್ ವಾರ್ಡ್ ನಲ್ಲಿ ಒಳರೋಗಿಯಾದ್ದಲ್ಲಿ ಉಪಯೋಗವಾಗುವ ವಸ್ತುಗಳು ಮತ್ತು ಪ್ಯಾಕೇಜ್ ಗಳನ್ನುಹೊರತುಪಡಿಸಿ 25% ರಿಯಾಯಿತಿ ಮತ್ತು ಕೋವಿಡ್-19 ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ನಗದು ಪಾವತಿ ರೋಗಿಗಳಿಗೆ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ 10% ರಿಯಾಯಿತಿ. ಸಿಗುತ್ತದೆ” ಎಂದು ಅವರು ಹೇಳಿದರು.

ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಗಳಾದ -ಡಾ. ಪಿಎಲ್ಎನ್ ಜಿ ರಾವ್ ರವರು “ಮಣಿಪಾಲ ಆರೋಗ್ಯ ಕಾರ್ಡ್ ನ ಈ ದೀರ್ಘ ಪ್ರಯಾಣದ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳು. ವಿಶೇಷವಾಗಿ ಮಣಿಪಾಲ್ ಆರೋಗ್ಯ ಕಾರ್ಡ್ ಪ್ರಚಾರ ಮತ್ತು ನೋಂದಣಿಗಾಗಿ ದೂರದ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮಣಿಪಾಲ್ ಆರೋಗ್ಯ ಕಾರ್ಡ್ ಏಜೆಂಟರಿಗೆ ಅಭಿನಂದನೆ. ಸದಸ್ಯರನ್ನು ನೋಂದಾಯಿಸುವಲ್ಲಿ ಇವರ ಕಾರ್ಯ ಶ್ಲಾಘನೀಯವಾದುದು” ಎಂದು ಹೇಳಿದರು.

ಡಾ. ಶರತ್ ಕೆ ರಾವ್, ಡೀನ್, ಕೆ ಎಂ ಸಿ ,ಮಣಿಪಾಲ, ಸ್ವಾಗತಿಸಿದರು, ಶ್ರೀ ಸಗೀರ್ ಸಿದ್ಧಿಕಿ , ಪ್ರಾದೇಶಿಕ ನಿರ್ವಹಣಾಧಿಕಾರಿ, ಮಂಗಳೂರು, ವಂದಿಸಿದರು. ಮಂಗಳೂರಿನ ಸಹ ಕುಲಪತಿಗಳಾದ ಡಾ. ದಿಲೀಪ್ ಜಿ ನಾಯ್ಕ್ , ಡಾ. ಎಂ ವಿ ಪ್ರಭು, ಡೀನ್, ಕೆ ಎಂ ಸಿ, ಮಂಗಳೂರು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಮಂಗಳೂರಿನ ವೈದ್ಯಕೀಯ ಅಧೀಕ್ಷಕರುಗಳಾದ ಡಾ. ಆನಂದ್ ವೇಣುಗೋಪಾಲ್, ಡಾ. ಜಾನ್ ರಾಮಪುರಮ್, ಮಾರುಕಟ್ಟೆ ಮುಖ್ಯಸ್ಥರಾದ ಸಚಿನ್ ಕಾರಂತ್ ಉಪಸ್ಥಿತರಿದ್ದರು.

ಜನರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ನಮ್ಮ ಅಧಿಕೃತ ಏಜೆಂಟರ ಬಳಿ ನೋಂದಾವಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9980854700 / 0820-2923748 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments are closed.