ಆರೋಗ್ಯ

ಮೊದಲನೆ ದಿನದ ಲಾಕ್‌ಡೌನ್‌ಗೆ ಕುಂದಾಪುರದಲ್ಲಿ ಜನರಿಂದ ಸಿಕ್ಕಿತು ಉತ್ತಮ ಬೆಂಬಲ..!

Pinterest LinkedIn Tumblr

ಕುಂದಾಪುರ: ರಾಜ್ಯ ಸರಕಾರವು ಕೊರೊನಾ ನಿಯಂತ್ರಣಕ್ಕಾಗಿ ಸೋಮವಾರದಿಂದ 14 ದಿನಗಳ ಕಾಲ ರಾಜ್ಯಾದ್ಯಾಂತ ಜಾರಿಗೆ ತಂದಿರುವ ಸೆಮಿ ಲಾಕ್‌ಡೌನ್‌ ಮೊದಲ ದಿನವಾದ ಸೋಮವಾರ ಕುಂದಾಪುರ ತಾಲ್ಲೂಕಿನಾದ್ಯಾಂತ ಸಾರ್ವಜನಿಕರು ಉತ್ತಮ ಬೆಂಬಲ ನೀಡಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗಾಗಿ ವಾಹನಗಳನ್ನು ಬಿಟ್ಟು ಕೈ ಚೀಲಗಳನ್ನು ಹಿಡಿದು ನಡೆದುಕೊಂಡು ಬಂದಿದ್ದ ಜನರು ವಸ್ತುಗಳನ್ನು ಖರೀದಿ ಮಾಡಿಕೊಂಡು ಸಮಯದ ಒಳಗೆ ಮನೆ ತಲುಪಿದ ದೃಶ್ಯ ಕಂಡುಬಂತು.

ತರಕಾರಿ, ಹಣ್ಣು, ದಿನಸಿ, ಔಷಧಿ ಹಾಗೂ ಮದ್ಯದ ಅಂಗಡಿಗಳಲ್ಲಿ ಎಂದಿನಂತೆ ಜನಸಂದಣಿ ಇರಲಿಲ್ಲ. ಪಾರ್ಸೆಲ್ ಹಾಗೂ ಸರಬರಾಜು ಸೇವೆಗಾಗಿ ಕೆಲವೊಂದು ಹೋಟೇಲ್ ಗಳು ತೆರೆದಿದ್ದವು. ನಾಗರೀಕ ಸೇವೆಗಾಗಿ ಮಾರ್ಗಸೂಚಿಯಲ್ಲಿ ವಿನಾಯಿತಿ ಇರುವ ಕಚೇರಿ ಸಿಬ್ಬಂದಿಗಳು ತಮ್ಮ ಗುರುತು ಕಾರ್ಡ್‌ಗಳನ್ನು ತೋರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಲ್ಲಿನ ಸರ್ಕಾರಿ ಕಿರಿಯ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ ಸೋಮವಾರ ಮಧ್ಯಾಹ್ನದ ಬಳಿಕ ಆನ್‌ಲೈನ್ ನಲ್ಲಿ ನೊಂದಾಣೆ ಮಾಡಿಕೊಂಡಿರುವ 18 ವರ್ಷ ವಯೋಮಿತಿ ನಂತರದವರಿಗೆ ಲಭ್ಯ ಸಂಖ್ಯೆಗೆ ಅನುಗುಣವಾಗಿ ಲಸಿಕೆ ನೀಡಲಾಗಿದೆ.

ನಗರ ಹಾಗೂ ಗ್ರಾಮೀಣ ಭಾಗದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಹಾಗೂ ಗ್ರಹ ರಕ್ಷಕ ಸಿಬ್ಬಂದಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ನಗರದ ಶಾಸ್ತ್ರಿ ಸರ್ಕಲ್, ಮೀನು ಮಾರುಕಟ್ಟೆ ರಸ್ತೆಯ ಮೂಲಕ ನಗರ ಪ್ರವೇಶಿಸುವ ವಾಹನಗಳನ್ನು ತಪಾಸಣೆ ನಡೆಸಿ ಅಗತ್ಯ ಕಾರಣಗಳನ್ನು ಕೇಳಿ ಒಳ ಬಿಡಲಾಗುತ್ತಿತ್ತು. ಆಸ್ಪತ್ರೆ, ಔಷಧಿ ಖರೀದಿ ಹಾಗೂ ಇತರ ಅಗತ್ಯ ಕಾರಣಗಳಿಗೆ ಅವಕಾಶ ನೀಡಲಾಗಿದೆ. ಬಹುತೇಕ ಸೆಮಿ ಲಾಕ್‌ಡೌನ್‌ ಗೆ ಸ್ಪಂದನ ದೊರಕಿದೆ. ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ರಸ್ತೆಗೆ ಇಳಿದಿದ್ದ ವಾಹನ ಸವಾರರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಸ್ಪತ್ರೆ, ಔಷಧಿ ಖರೀದಿ ಹಾಗೂ ಇತರ ಅಗತ್ಯ ಕಾರಣಗಳಿಗೆ ಅವಕಾಶ ನೀಡಲಾಗಿದೆ.

ಮಾರ್ಗಸೂಚಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಕೈಗಾರಿಕೆಗೆ ಅವಕಾಶ ನೀಡಿದ್ದರೂ, ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಹೆಚ್ಚಿನ ಕಾರ್ಮಿಕರು ತಮ್ಮ ತಮ್ಮ ಊರುಗಳನ್ನು ಬಿಟ್ಟು ಹೊರ ಭಾಗಕ್ಕೆ ಕೆಲಸಕ್ಕೆ ತೆರಳಿರಲಿಲ್ಲ.

ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಡಿವೈಎಸ್ಪಿ ಕೆ.ಶ್ರೀಕಾಂತ, ಸರ್ಕಲ್ ಇನ್ಸಪೆಕ್ಟರ್ ಗೋಪಿಕೃಷ್ಣ, ಸಂತೋಷ್ ಕಾಯ್ಕಿಣಿ, ಎಸ್‌.ಐ ಗಳಾದ ನಾಸೀರ್ ಹುಸೇನ್ ಕೊಲ್ಲೂರು, ಶ್ರೀಧರ ನಾಯಕ್ ಶಂಕರನಾರಾಯಣ, ಸದಾಶಿವ ಗವರೋಜಿ ಕುಂದಾಪುರ, ಸುಬ್ಬಣ್ಣ ಅಮಾಸೆಬೈಲ್, ಸುದರ್ಶನ ಹಾಗೂ ಪ್ರಕಾಶ್‌ ಕೆ ಅವರ ನೇತ್ರತ್ವದಲ್ಲಿ ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿತ್ತು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಂದೋಬಸ್ತ್ ವ್ಯವಸ್ಥೆಗೆ ಇಲಾಖೆ ಕ್ರಮ ಕೈಗೊಂಡಿದೆ. ಅನಗತ್ಯ ಹೊರಗಡೆ ಬಂದರೆ ವಾಹನ ವಶಕ್ಕೆ ಪಡೆಯಲಾಗುತ್ತದೆ. ತಪಾಸಣಾ ಕೇಂದ್ರಗಳಲ್ಲಿ ಇರುವ ಪೊಲೀಸ್‌ ಹಾಗೂ ಗ್ರಹ ರಕ್ಷಕ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಫೇಸ್‌ ಶೀಲ್ಡ್, ಕೈಗವಸು ಹಾಗೂ ಸ್ಯಾನಿಟೈಸರ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
(ಕೆ.ಶ್ರೀಕಾಂತ, ಡಿವೈಎಸ್ಪಿ ಕುಂದಾಪುರ)

Comments are closed.