ಆರೋಗ್ಯ

ಕೊರೋನಾದಿಂದ 14 ದಿನ ಆಸ್ಪತ್ರೆಯಲ್ಲಿದ್ದು ‘ನೆಗೆಟಿವ್’ ವರದಿಯೊಂದಿಗೆ ಮನೆಗೆ ಮರಳಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ಕೊರೋನಾ ಪಾಸಿಟಿವ್ ಹಿನ್ನೆಲೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 14 ದಿನಗಳಿಂದ ಚಿಕಿತ್ಸೆ ಪಡೆದು ಸದ್ಯ ನೆಗೆಟಿವ್ ವರದಿ ಬಂದ ಹಿನ್ನೆಲೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ನಿಮ್ಮೆಲ್ಲರ ಶುಭ ಹಾರೈಕೆಯೊಂದಿಗೆ ಇಂದು 14 ದಿನಗಳ ಕಾಲ ಆಸ್ಪತ್ರೆ ವಾಸ ಮುಗಿಸಿ ಮನೆಗೆ ತೆರಳುತ್ತಿದ್ದೇನೆ. ಸುಮಾರು 61 ವರ್ಷ ಪ್ರಾಯದ ನನಗೆ ಬದುಕಿನ್ನುದ್ದಕ್ಕೂ, ಒಂದು ದಿನವೂ ಜ್ವರ ಬಂದು ಮಲಗಿದ ನೆನಪಿಲ್ಲ. ಕೇರಳ ಪ್ರವಾಸದ ವೇಳೆ ಕಾಡಿದ ಕೋವಿಡ್ 19 ಹಣ್ಣುಗಾಯಿ ಮಾಡಿತ್ತು. ಚಿಕಿತ್ಸೆ ಮತ್ತು ಕ್ವಾರಂಟೈನ್ ಅವಧಿ ಮುಗಿಸಿ ಆಸ್ಪತ್ರೆಯಿಂದ ಹೊರಡುವಾಗ, ಬೇಗ ಗುಣವಾಗಲಿ ಎಂದು ಹಾರೈಸಿದ ತಮಗೆಲ್ಲ ಋಣಿಯಾಗಿದ್ದೇನೆ.

‘ಉಡುಪಿ ಆದರ್ಶ ಆಸ್ಪತ್ರೆಯ ಎಂ. ಡಿ. ಡಾ. ಚಂದ್ರಶೇಖರ್ ಮತ್ತವರ ತಂಡದ ಆತ್ಮೀಯತೆಗೆ ಆಭಾರಿಯಾಗಿರುವೆ. ನನ್ನೊಂದಿಗೆ ದಾಖಲಾದ ಎಲ್ಲಾ ಕೊರೋನಾ ಪೀಡಿತರಿಗೆ ಅವರ ಹೃದಯಸ್ಪರ್ಶಿ ಚಿಕಿತ್ಸೆ ಪ್ರತೀ ರೋಗಿಯಲ್ಲಿಯೂ ಆತ್ಮವಿಶ್ವಾಸ ಮೂಡಿಸಿದೆ’

‘ನಿಮ್ಮ ಟೆಸ್ಟಿಂಗ್ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದ ವೈದ್ಯಾಧಿಕಾರಿಯವರ ಮಾತು ಮನಸ್ಸಿಗೆ ಒಂದಷ್ಟು ನಿರಾಳತೆ ಉಂಟು ಮಾಡಿದೆ. ನಾಳೆಯಿಂದ ನನ್ನ ಕರ್ತವ್ಯಕ್ಕೆ ಹಾಜರಾಗುವೆ. ಡಾ. ಚಂದ್ರಶೇಖರ್ ರವರ ತಂಡಕ್ಕೆ ನಾನು ಮತ್ತು ನನ್ನ ಕುಟುಂಬ ಋಣಿ. ಹಿರಿಯರ ಆಶೀರ್ವಾದಗಳಿರಲಿ’ ಎಂದಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕೊರೋನಾ ಪಾಸಿಟಿವ್ ಬಂದ ಬಳಿಕ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದಲೆ ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳ ಜೊತೆ ಕೊರೋನಾ ನಿಯಂತ್ರಣದ ವಿಚಾರವಾಗಿ ಆನ್ಲೈನ್ ಸಭೆ ನಡೆಸಿದ್ದಲ್ಲದೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.