ಆರೋಗ್ಯ

ರಾಜ್ಯದಲ್ಲಿ ಕೊವಿಡ್ ಪಾಸಿಟಿವ್ ಸಂಖ್ಯೆ ಕಡಿಮೆ ಮಾಡಲು ಸರ್ವ ಪ್ರಯತ್ನ: ಸಚಿವ ಡಾ.ಸುಧಾಕರ್

Pinterest LinkedIn Tumblr

ಉಡುಪಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳು ಸವಾಲಿನ ದಿನಗಳಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಕೊವಿಡ್ ಪಾಸಿಟಿವ್ ಸಂಖ್ಯೆಯನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಬೇಕು. ಎಪ್ರಿಲ್ 1 ರಿಂದ ಎಲ್ಲಾ 45 ವರ್ಷದ ಮೇಲಿನ ಅರ್ಹರಿಗೆ ಕೋವಿಡ್ ಲಸಿಕೆ ಕೊಡಿಸಬೇಕು ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮಂಗಳವಾರದಂದು ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆ, ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಮಲ್ಪೆಯ ಸರಕಾರಿ ಚಿಕಿತ್ಸಾ ಕೇಂದ್ರ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪರಿಶೀಲನೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 13 ಲಕ್ಷ ಜನಸಂಖ್ಯೆಯಿದ್ದು ಸುಮಾರು 70 ಲಕ್ಷ ಮಂದಿ ಎಬಿಆರ್ ಕೆ (ಆಯುಷ್ಮಾನ್ ಭಾರತ್) ಪ್ರಯೋಜನವನ್ನು ಪಡೆದಿದ್ದು, ಮುಂದಿನ 90 ದಿನದೊಳಗೆ ಉಳಿದ 6 ಲಕ್ಷ ಮಂದಿಯನ್ನು ತಲುಪುವ ಗುರಿ ಹೊಂದಿದೆ ಎಂದರು. ಕೆಲವು ಆಸ್ಪತ್ರೆಯಲ್ಲಿ , ಆಂಬುಲೆನ್ಸ್, ಮೆಡಿಕಲ್ ಉಪಕರಣಗಳ, ಡಾಟಾ ಎಂಟ್ರಿ ಸಿಬ್ಬಂದಿಗಳ ಕೊರತೆ ಇದ್ದು ಕೊರತೆ ನೀಗಿಸುವಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಐಎಲ್ ಐ, ಸಾರಿ ಪ್ರಕರಣಗಳ ಹೆಚ್ಚೆಚ್ಚು ಆರೋಗ್ಯ ತಪಾಸಣೆ ನಡೆಸಬೇಕು.

ಖಾಸಗಿ ಕ್ಷೇತ್ರಕ್ಕಿಂತ ಸರಕಾರಿ ಉತ್ತಮವಾಗಿ ಕೆಲಸ ನಿರ್ವಹಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ ೨೦೦೦ ಕ್ಕಿಂತ ವೈದ್ಯರನ್ನು ನೇರ ನೇಮಕಾತಿ ಮಾಡುವಂತೆ ಆದೇಶ ನೀಡಿದೆ. ಒಂದು ತಿಂಗಳು ಅಥವಾ ೪೫ ದಿನದೊಳಗೆ ಈ ಪ್ರಕ್ರಿಯೆ ಪೂರ್ಣ ಆಗುತ್ತದೆ. ಕ್ಯಾಬಿನೆಟ್ ಸಭೆಯಲ್ಲೂ ಇದಕ್ಕೆ ಅಂಗೀಕಾರ ಸಿಕ್ಕಿದೆ ಎಂದರು. ಕೊರತೆ ಇರುವ ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನೀಶಿಯನ್, ಪಾರಾ ಮೆಡಿಕಲ್ ಸಿಬ್ಬಂದಿಯ ಖಾಲಿ ಹುದ್ದೆಗೆ ೮೦೦ -೧೦೦೦ ರವೆಗೆ ನೇರ ನೇಮಕಾತಿ ಮಾಡಲು ಕ್ಯಾಬಿನೆಟ್ ಅವಕಾಶ ಮಾಡಿ ಕೊಟ್ಟಿದೆ ಎಂದು ಡಾ. ಸುಧಾಕರ್ ತಿಳಿಸಿದರು.

ಜನರು ಸರ್ಕಾರದ ಮಾರ್ಗ ಸೂಚಿ, ಮನವಿಗೆ ಸ್ಪಂದಿಸಿದೇ ಇರುವುದರಿಂದ ಕೋವಿಡ್ ಉಲ್ಬಣವಾಗಿದೆ. ಇದರ ನಿರೀಕ್ಷೆ ಮೊದಲೇ ಇತ್ತು. ರಾಜ್ಯದಲ್ಲಿ ಸುಮಾರು 5000 ಲಸಿಕಾ ಕೇಂದ್ರ ಗಳು ಸೇವೆಗೆ ಸಿದ್ದವಾಗಿವೆ . ಸುಮಾರು 3 ರಿಂದ 4 ಲಕ್ಷ ಜನರಿಗೆ ಲಸಿಕೆ ಕೊಡುವ ಅವಶ್ಯಕತೆ ಇದೆ. ಜನರು ತಾವಾಗಿಯೇ ಬಂದು ಲಸಿಕೆ ಪಡೆದುಕೊಳ್ಳಬೇಕು. ಸರಕಾರದೊಂದಿಗೆ ಸಹಕಾರ ನೀಡಿ ಎಂದು ಡಾ ಸುಧಾಕರ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯಬೇಕಾದಲ್ಲಿ ಇರುವ ತಾಂತ್ರಿಕ ಸಮಸ್ಯೆ ನಿವಾರಿಸುವಂತೆ ಆರೋಗ್ಯ ಸಚಿವರಲ್ಲಿ ಶಾಸಕ ರಘುಪತಿ ಭಟ್ ಮನವಿ ಮಾಡಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯಬೇಕಾದರೆ ಕಡ್ಡಾಯವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಉಲ್ಲೇಖಿತ ಪತ್ರ ತರಬೇಕು ಎಂಬ ನೀತಿಯನ್ನು ರಾಜ್ಯದಲ್ಲಿ ಅಳವಡಿಸಿರುವುದರಿಂದ ತುರ್ತು ಚಿಕಿತ್ಸೆ ಹಾಗೂ ತೀವ್ರ ತರಹದ ಖಾಯಿಲೆಯ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಈ ನೀತಿಯನ್ನು ಬದಲಾಯಿಸಿ ತುರ್ತು ಚಿಕಿತ್ಸೆ ಹಾಗೂ ತೀವ್ರ ತರಹದ ಖಾಯಿಲೆಯ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ನೇರವಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸುವಂತೆ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರದ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳಾದ ನವೀನ್ ಭಟ್ ವೈ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎನ್ ವಿಷ್ಣುವರ್ಧನ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.