ಕರಾವಳಿ

ಮಂಗಳೂರಿನ ಡಾ. ಕೇದಿಗೆ ಅರವಿಂದ ರಾವ್ ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆಯ 20ನೇ ರಾಷ್ಟ್ರೀಯ ಅಧ್ಯಕ್ಷ ರಾಗಿ ಆಯ್ಕೆ 

Pinterest LinkedIn Tumblr

ಮಂಗಳೂರು : ಕೇರಳದ ಶೋರ್ನೂರ್ ನಲ್ಲಿ ಇತ್ತೀಚೆಗೆ ನಡೆದ ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆಯ 20ನೇ ರಾಷ್ಟ್ರೀಯ ಅಧಿವೇಶನ ʼರಾಜಸೂಯಂ, ನಲ್ಲಿ ಮಂಗಳೂರಿನ ಡಾ. ಕೇದಿಗೆ ಅರವಿಂದ ರಾವ್ ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆಯ 20ನೇ ರಾಷ್ಟ್ರೀಯ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆಲವು ಉತ್ಸಾಹಿ, ಸಮಾನ ಮನಸ್ಕ ಹಿರಿಯ ಜೇಸೀ ಗೆಳೆಯರ ಒಗ್ಗೂಡುವಿಕೆಯಿಂದ 22 ವರ್ಷಗಳ ಹಿಂದೆ 1998 ರಲ್ಲಿ ಕೇರಳದ ಕಲ್ಲಿಕೋಟೆ ಯಿಂದ ಪ್ರಾರಂಭವಾದ ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆ ಹಿಂದೆ ಜೇಸೀ (ಜೇಸಿಐ) ಸಂಸ್ಥೆಯ ಸದಸ್ಯರಾಗಿ 40ರ ವಯಸ್ಸಿನ ತದನಂತರದಲ್ಲಿ ತಮ್ಮ ಅನುಭವಗಳನ್ನು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಉತ್ಸಾಹಿತ ರಾಗಿರುವವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವ ಈ ಸಂಸ್ಥೆ ಈಗಾಗಲೇ ಕೇರಳ, ಕರ್ನಾಟಕ, ತಮಿಳ್ನಾಡು, ಒರಿಸ್ಸಾ ಮತ್ತು ಯುಎಇ ಸೇರಿದಂತೆ 110ಕ್ಕೂ ಮಿಕ್ಕಿ ಘಟಕ ಗಳು ಮತ್ತು 2500 ಕ್ಕೂ ಹೆಚ್ಚಿನ ಸಕ್ರೀಯ ಸದಸ್ಯರನ್ನು ಹೊಂದಿದೆ.

2015-160 ಸಾಲಿನಲ್ಲಿ ಪ್ರಾರಂಭವಾದ ಭಾರತೀಯ ಸೀನಿಯರ್ ಛೇಂಬರ್ ಮಂಗಳೂರು ಲೀಜನ್ (ಘಟಕ)ನ ಸ್ಥಾಪಕ ಅಧ್ಯಕ್ಷರಾಗಿ ಸಂಸ್ಥೆಯಲ್ಲಿ ತೊಡಗಿಸಿಕೊಂಡ ಡಾ. ಕೇದಿಗೆ ಅರವಿಂದ ರಾವ್ ಅವರು ಈ ಆರು ವರ್ಷಗಳಲ್ಲಿ ಹಿರಿಯ ಜೇಸೀ ಗೆಳೆಯರ ಸಹಕಾರದಿಂದ ಕರ್ನಾಟಕದಲ್ಲಿ 21 ಕ್ಕೂ ಹೆಚ್ಚಿನ ಘಟಕಗಳನ್ನು ಸ್ಥಾಪಿಸಲು ಕಾರಣೀಭೂತ ರಾಗಿರುವರು.

2016-17 ರಿಂದ ಇಂದಿನವರೆಗೆ ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆಯ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯಲ್ಲಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಯಿಸಿ ತಮ್ಮ ನಾಯಕತ್ವದ ಗುಣಗಳನ್ನು ಸಾಬೀತು ಪಡಿಸಿರುವ ಡಾ. ಕೇದಿಗೆ ಅರವಿಂದ ರಾವ್ ತಮ್ಮ ಸ್ನೇಹಪರತೆಯಿಂದ ಎಲ್ಲರ ಮನಗೆದ್ದು ಈ ಬಾರಿಯ ರಾಷ್ಟ್ರೀಯ ಅಧಿವೇಶನದಲ್ಲಿ ನಡೆದ ಚುನಾವಣೆಯಲ್ಲಿ ಕೇರಳ ರಾಜ್ಯದ ಹೊರಗಿನ ಮೊದಲಿನ ಮತ್ತು ಪ್ರಪ್ರಥಮವಾಗಿ ಕರ್ನಾಟಕದಿಂದ ಚುನಾಯಿತರಾದ ರಾಷ್ಟ್ರೀಯ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಿಂದೆ ಜೇಸಿಐ ಮಂಗಳೂರು ಅಧ್ಯಕ್ಷ ರಾಗಿ, ಜೇಸಿಐ ಭಾರತದ ಪ್ರತಿಷ್ಠಿತ ವಲಯ ಹದಿನೈದರ ವಲಯಾಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ರಾಗಿ, ಲಯನ್ಸ್ ಜಿಲ್ಲೆ 317ಡಿ ಇದರ ಸಂಪುಟ ಕಾರ್ಯದರ್ಶಿ ಯಾಗಿ ಹಾಗೂ ಹತ್ತು ಹಲವು ಸಾಮಾಜಿಕ ಸಂಘಟನೆಗಳಳಲ್ಲಿ ಸಕ್ರೀಯ ರಾಗಿರುವ ಡಾ. ಕೇದಿಗೆ ಅರವಿಂದ ರಾವ್ ಮಂಗಳೂರಿನ ಪ್ರತಿಷ್ಠಿತ ನೋವಾ ಮೆಡಿಟೆಕ್ ಡಯಾಗ್ನೋಸ್ಟಿಕ್ ಸಂಸ್ಥೆಯು ಆಡಳಿತ ನಿರ್ದೇಶಕ, ಕಮಲ್ ಜೀತ್ ಲ್ಯಾಬೊರೇಟರಿ ಸಪ್ಲಾಯೀಸ್ ಸಂಸ್ಥೆಯ ಮಹಾ ನಿರ್ದೇಶಕ ಮತ್ತು ಬಯೋಕೆಮಿಸ್ಟ್ರೀ ಸಲಹಾಗಾರರೂ ಹೌದು.

ಇವರ ಬಾಳ ಸಂಗಾತಿ, ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆಯ ಪ್ರಥಮ ಮಹಿಳೆ ಶ್ರೀಮತಿ ಗಾಯತ್ರಿ ಅರವಿಂದ ರಾವ್ ರವರೂ ಜೇಸೀ, ಲಯನ್ಸ್ ಸಂಸ್ಥೆಗಳ ಮೂಲಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯ ರಾಗಿದ್ದಾರೆ ಅಲ್ಲದೆ ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಯ 2021-22 ಸಾಲಿನ ನಿಯೋಜಿತ ಅಧ್ಯಕ್ಷ ರಾಗಿದ್ದಾರೆ.

“ಒಗ್ಗಟ್ಟು ಯಶಸ್ಸಿನ ಗುಟ್ಟು” ಎಂಬ ಘೋಷ ವಾಕ್ಯದೊಂದಿಗೆ, ‘ನಮ್ಮ ಭೂಮಿಯನ್ನು ಉಳಿಸಿ’ ಎಂಬ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ, ಬಸ್ಸು ನಿಲ್ದಾಣ, ಆಟೋ ರಿಕ್ಷಾ ನಿಲ್ದಾಣ ಗಳಲ್ಲಿ ʼಶುದ್ಧ ಕುಡಿಯುವ ನೀರುʼ ಪೂರೈಕೆಯ ಅತಿಹೆಚ್ಚು ಘಟಕಗಳನ್ನು ಸ್ಥಾಪಿಸುವ ಸಮಾಜ ಮುಖಿ ರಾಷ್ಟ್ರೀಯ ಯೋಜನೆಯೊಂದಿಗೆ, ಭಾರತದ ಎಲ್ಲಾ ರಾಜ್ಯಗಳಲ್ಲಿ ಮತ್ತು ಏಷಿಯಾ ಖಂಡದ ಹಲವು ದೇಶಗಳಲ್ಲಿ ಭಾರತೀಯ ಸೀನಿಯರ್ ಛೇಂಬರ್ ಸಂಸ್ಥೆಯ ಸ್ಥಾಪನೆಯ ಕನಸು ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಎಲ್ಲರೂ ಸಹಕರಿಸಿ ಕೈಜೋಡಿಸುವಂತೆ ನೂತನ ರಾಜ್ಯಾಧ್ಯಕ್ಷರಾಗಿ ಚುನಾಯಿತರಾಗಿ ಇದೇ ಏಪ್ರಿಲ್ 1 ರಿಂದ ಅಧಿಕಾರ ಸ್ವೀಕರಿಸುತ್ತಿರುವ ಡಾ. ಕೇದಿಗೆ ಅರವಿಂದ ರಾವ್ ಇವರು ಕರೆ ನೀಡಿದ್ದಾರೆ.

Comments are closed.