ಕುಂದಾಪುರ: ‘ಏನ್ರೀ ಮಾಸ್ಕ್ ಹಾಕೋಕೆ ಆಗಲ್ವಾ…ನಿಮ್ಮಂತವರಿದ್ರೆ ಕೊರೋನಾ ಕಂಟ್ರೋಲ್ ಆಗೋದು ಹೇಗೆ? ನಿಮ್ಮಿಂದ ಬೇರೆಯವರಿಗೂ ಸೋಂಕು ಹಬ್ಬಿಸುತ್ತೀರಾ?- ಹೀಗೆ ಚಾಲಕ ಸಹಿತ ಪ್ರಯಾಣಿಕರಿಗೂ ಮಾಸ್ಕ್ ಇಲ್ಲದೇ ಹೋಗುತ್ತಿದ್ದ ಆಟೋ ಚಾಲಕನಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತರಾಟೆಗೆ ತೆಗೆದುಕೊಂಡರು.
ಗುರುವಾರದಂದು ಕುಂದಾಪುರದಲ್ಲಿ ನಡೆದ ಇಲಾಖೆಯ ಕಾರ್ಯಕ್ರಮಕ್ಕೆಆಗಮಿಸಿದ ಬಳಿಕ ಅವರು ಕುಂದಾಪುರದ ಮಿನಿ ವಿಧಾನಸೌಧದಲ್ಲಿ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಬಳಿಕ ನಗರದಲ್ಲಿ ಅಧಿಕಾರಿಗಳೊಂದಿಗೆ ದಿಡೀರ್ ಕಾರ್ಯಾಚರಣೆಗೆ ಮುಂದಾದರು.
ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಸಮೀಪದ ಅಟೋ ನಿಲ್ದಾಣದ ಬಳಿ ತಮ್ಮ ಸರಕಾರಿ ಕಾರಿನಿಂದ ಇಳಿದ ಡಿಸಿ ಪ್ರಥಮವಾಗಿ ಮಾಸ್ಕ್ ಧರಿಸದೇ ತೆರಳುತ್ತಿದ್ದ ಆಟೋ ಚಾಲಕನನ್ನು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದರು. ಬಳಿಕ ನಡೆದೇ ಸಾಗಿದ ಅವರು ಹೋಟೇಲ್, ಗ್ರಹೋಪಯೋಗಿ ವಸ್ತುಗಳ ಮಳಿಗೆ, ಚಿನ್ನದ ಅಂಗಡಿ, ವಾಣಿಜ್ಯ ಮಳಿಗೆ, ಐಸ್ ಕ್ರೀಂ ಪಾರ್ಲರ್ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ಧಾರಣೆ ಕುರಿತು ಜಾಗ್ರತೆ ಮೂಡಿಸಿದರು. ಈ ಸಮಯದಲ್ಲಿ ಪಾದಾಚಾರಿಗಳು, ರಿಕ್ಷಾ ಚಾಲಕರು, ವಿದ್ಯಾರ್ಥಿಗಳ ಬಳಿ ಮಾತನಾಡಿದ ಡಿಸಿ ಮಾಸ್ಕ್ ಧರಿಸದವರಿಗೆ ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸಿದವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ತಹಶಿಲ್ದಾರ್ ಆನಂದಪ್ಪ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪಿಎಸ್ಐ ಸದಾಶಿವ ಗವರೋಜಿ, ಕುಂದಾಪುರ ತಾಲೂಕು ಆಸ್ಪತ್ರೆ ಪಿಜಿಶಿಯನ್ ಡಾ. ನಾಗೇಶ್, ಇಲಾಕಾಧಿಕಾರಿಗಳು ಇದ್ದರು.
ಡಿಸಿ ಬರುವಾಗ ಮಾಸ್ಕ್…ಆಮೇಲೆ..?
ಜಿಲ್ಲಾಧಿಕಾರಿಗಳು ಮಾಸ್ಕ್ ಧಾರಣೆ ಅರಿವು ಮೂಡಿಸಲು ಆಗಮಿಸಿ ಎಚ್ಚರಿಸುತ್ತಿರುವ ಬಗ್ಗೆ ಕೆಲವೇ ಕ್ಷಣದಲ್ಲೇ ಕುಂದಾಪುರ ನಗರದಲ್ಲಿ ಸುದ್ದಿ ಮಿಂಚಿನಂತೆ ಹಬ್ಬಿತ್ತು. ಎಲ್ಲೆಡೆ ಜನರು ಮಾಸ್ಕ್ ಧರಿಸಿ ಬರುತ್ತಿದ್ದುದು ಒಂದಡೆಯಾದರೆ ಮತ್ತೊಂದಷ್ಟು ಮಂದಿ ದೂರದಲ್ಲಿ ನಿಂತು ಡಿಸಿ ಕಾರ್ಯಾಚರಣೆ ನೋಡುತ್ತಿದ್ದರು. ಗಂಟೆಗಳ ಕಾಲ ಡಿಸಿ ವಿವಿದೆಡೆ ತೆರಳಿ ಮಾಸ್ಕ್ ಜಾಗ್ರತಿ ಮೂಡಿಸಿ ತೆರಳುತ್ತಿದ್ದಂತೆಯೇ ಸಾರ್ವಜನಿಕವಾಗಿ ಮಾಸ್ಕ್ ಧರಿಸುವಿಕೆಯಲ್ಲಿ ಜನರು ತಮ್ಮ ಹಳೆ ಚಾಳಿಯನ್ನು ಮತ್ತೆ ಒಂದಷ್ಟು ಜನರು ಮುಂದುವರೆಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)