ಕರಾವಳಿ

ಕುಂದಾಪುರದಲ್ಲಿ `ಪೌಷ್ಠಿಕ ಸಂಭ್ರಮ’ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್

Pinterest LinkedIn Tumblr

ಕುಂದಾಪುರ: ನಮಗೆ ಬೇಕಾದ ಪೌಷ್ಠಿಕ ಆಹಾರ ಮಾರುಕಟ್ಟೆಯಲ್ಲಿ ಹುಡುಕಬೇಕಾಗಿಲ್ಲ.. ನಮ್ಮ ಮನೆ ಸುತ್ತಮುತ್ತ.. ತೋಟದಲ್ಲಿ, ಬೇಲಿ ಮೇಲೆ ಸಾಕಷ್ಟು ಪೌಷ್ಠಿಕಾಂಶ ಆಹಾರ, ಸೊಪ್ಪು ಸೊದೆಯಿದ್ದು, ಅವುಗಳ ಸರಿಯಾಗಿ ಬಳಸಿಕೊಳ್ಳಬೇಕು. ಬೇಲಿಕೋಲಿನ ಮೇಲಿರುವ ಪರಿಸರದ ಆಹಾರ ಪದಾರ್ಥ ಅಡುಗೆ ಮನೆ ಸೇರಿದರೆ ಸಾಕು ಅಪೌಷ್ಠಿಕತೆ ಪರಿಹಾರ ಆಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಬಣ್ಣಿಸಿದರು.

ಉಡುಪಿ ಜಿಲ್ಲಾ ಪಂಚಾಯಿತಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕಾ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಭಂಡಾರ್‌ಕಾರ್‍ಸ್ ಕಾಲೇಜ್ ಕೊಯಾಕುಟ್ಟಿ ಹಾಲ್‌ನಲ್ಲಿ ಪೋಷಣೆ ಪಾಕ್ಷಿಕ ಅಂಗವಾಗಿ ಗುರುವಾರ ನಡೆದ ಪೌಷ್ಠಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಅಲ್ಲಿ‌ಇಲ್ಲಿ ಪೌಷ್ಠಿಕ ಆಹಾರ ಹುಡುಕುವ ಮೂಲಕ ಹಣ ಪೋಲು ಮಾಡದೆ, ನಮ್ಮ ಮನೆ ಅಂಗಳದಲ್ಲಿರುವ ಪೌಷ್ಠಿಕ ಆಹಾರ ಬಳಸುವ ಮೂಲಕ ಅಪೌಷ್ಠಿಕತೆಯ ಸಮಸ್ಯೆಯಿಂದ ಹೊರಬರಬೇಕು ಎಂದು ಸಲಹೆ ಮಾಡಿದರು. ತಂದೆ ತಾಯಿ ಮಕ್ಕಳ ಸರಿಯಾಗಿ ಸಲಹದಿದ್ದರೆ ವಯಸ್ಸಾದ ಮೇಲೆ ಮಕ್ಕಳು ಪೋಷಕರ ಪೋಷಣೆ ಮಾಡುವುದಿಲ್ಲ ಎಂದ ಅವರು, ಮಕ್ಕಳ ಅಪೌಷ್ಠಿಕತೆಗೆ ತಂದೆ ತಾಯಿ ಕೂಡಾ ಜವಾಬ್ದಾರರಾಗುತ್ತಾರೆ. ಮಕ್ಕಳ ಅಪೌಷ್ಠಿಕತೆ ಅಲ್ಲದೆ ದೈಹಿಕ, ಮಾನಸಿಕವಾಗಿ ಸದೃಢವಾಗಿ ಬೆಳೆಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.

ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ಶೆಟ್ಟಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮಾತನಾಡಿದರು.

ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಸೀಲ್ದಾರ್ ಆನಂದಪ್ಪ ನಾಯ್ಕ್, ಭಂಡಾರ್‌ಕಾರ್‍ಸ್ ಕಾಲೇಜ್ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್, ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್.ಜಯಕರ ಶೆಟ್ಟಿ, ಸಹನಾ ಸಿಲ್ಕ್ ಹೌಸ್ ಸುರೇಂದ್ರ ಶೆಟ್ಟಿ ಇದ್ದರು. ಡಾ.ಸುದರ್ಶನ ಉಡುಪ, ಡಾ.ಪ್ರವೀಳಾ ನಾಯಕ್, ಡಾ. ಮಹಿಮಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಗೋಲ್ಡನ್ ಮದರ್ ಅದೃಷ್ಠ ಕೂಪನ್ ಜಿಲ್ಲಾಧಿಕಾರಿ ಜಿ.ಜಗದೀಶ್ ಡ್ರಾ ಮಾಡಿದರು. ಎಗ್ರೇಡ್ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯಕ್ ನೀಡಿದ ೧ ಗ್ರಾಮ ಚಿನ್ನದ ನಾಣ್ಯ ಅದೃಷ್ಠವಂತ ಗೋಲ್ಡನ್ ತಾಯಿಗೆ ನೀಡಲಾಯಿತು. ಸಹನಾ ಶಿಲ್ಕ್ ನೀಡಿದ ಸ್ಯಾರಿ ೭೦ ತಾಯಿಂದಿರಿಗೆ ವಿತರಣೆ ಮಾಡಲಾಯಿತು. ಶಿಶು ಅಭಿವೃದ್ಧಿ ಇಲಾಖೆ ಆಯೋಜಿಸಿದ ಪೌಷ್ಠಿಕಾಂಶ ಹಣ್ಣು-ತರಕಾರಿ, ಬೇಳೆಕಾಳು, ಗೆಡ್ಡೆಗೆಣಸು, ಸೊಪ್ಪುಗಳ ಪ್ರದರ್ಶನ ನಡೆಯಿತು.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಲತಾ ನಿರೂಪಿಸಿದರು. ಸಿಡಿಪಿ‌ಒ ಶ್ವೇತಾ ವಂದಿಸಿದರು.

ವಿದ್ಯಾವಂತರ ಜಿಲ್ಲೆ ಉಡುಪಿಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪೌಷ್ಠಿಕ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದ್ದರೂ 400ಕ್ಕೂ ಮಿಕ್ಕ ಮಕ್ಕಳು ಅಪೌಷ್ಠಿಕತೆ ಕಂಡುಬಂದಿರುವುದು ಜಿಲ್ಲೆಗೆ ಕಪ್ಪುಚುಕ್ಕೆ. ಚಿಕ್ಕಮಕ್ಕಳ ಅಪೌಷ್ಠಿಕತೆ ನೀಗಿಸಿಕೊಂಡು ಸಲಹಿದರೆ ಮುಂದೆ ಮಕ್ಕಳ ಬೆಳವಣಿಗೆ ಸದೃಢವಾಗಲಿದೆ. ನಮ್ಮ ಸುತ್ತಮುತ್ತ ಇರುವ ಪೌಷ್ಠಿಕ ಆಹಾರ ತಂದೆ,ತಾಯಿ ಮಕ್ಕಳ ಹೊಟ್ಟೆ ಸೇರಿದರೆ ಅಪೌಷ್ಠಿಕತೆ ಕೊರತೆ ಬಾಧಿಸದು. ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಗಳ ಪಾತ್ರ ಪ್ರಾಮುಖ್ಯವಾಗಿದ್ದು, ಆರೋಗ್ಯವಂತ ಮಕ್ಕಳ ಕೊಡುಗೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ.
– ಡಾ.ನವೀನ್ ಭಟ್ ವೈ, ಸಿ‌ಇ‌ಒ, ಜಿಲ್ಲಾ ಪಂಚಾಯಿತಿ ಉಡುಪಿ

Comments are closed.