ಆರೋಗ್ಯ

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಮಾಡುವ ಕಾರ್ಯಕ್ರಮ ಶನಿವಾರ ನಡೆಯಿತು.

ರಾಜ್ಯ ಸರಕಾರದ ಕಂದಾಯ ಇಲಾಖೆ ಅಪರ ಕಾರ್ಯದರ್ಶಿ ಮಹೇಂದ್ರ ಜೈನ್ ಚಾಲನೆ ನೀಡಿ ಮಾತನಾಡಿ, ಇದೊಂದು ಸುದಿನ. ಇಂದಿನಿಂದ ಭಾರತ ಕೋವಿಡ್ ಮುಕ್ತವಾಗಲಿ ಎಂದರು.

ಆಸ್ಪತ್ರೆ ಶುಶ್ರೂಷಾಧಿಕಾರಿ ಗಾಯತ್ರಿ ಅವರಿಗೆ ಮೊದಲ ಲಸಿಕೆ ನೀಡಲಾಯಿತು.

ಉತ್ತಮ ವ್ಯವಸ್ಥೆ…..
ಮೂರು ವಿಭಾಗಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದ್ದು ಮೊದಲ ಹಂತದಲ್ಲಿ ಕೋವಿಡ್-19 ಲಸಿಕೆ ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಹಾಗೂ ಕೋವಿಡ್-19 ಲಸಿಕೆ ಪಡೆದವರ ವೀಕ್ಷಣಾ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ 100 ಮಂದಿಗೆ ಲಸಿಕೆ ನೀಡಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಜಿಶಿಯನ್ ಸೇರಿ ಐವರು ಅಧಿಕಾರಿಗಳ ತುರ್ತು ಪರಿಸ್ಥಿತಿ ನಿರ್ವಹಣಾ ತಂಡ ಹಾಗೂ ಪೊಲೀಸರ ಸಹಿತ ನಾಲ್ವರು ವಾಕ್ಸಿನೇಶನ್, ಓರ್ವ ವಾಕ್ಸಿನೇಟರ್ ಆಫೀಸರ್ ತಂಡ ರಚಿಸಲಾಗಿದೆ. ಕುಂದಾಪುರ ತಾ| ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಹಾಗೂ ಪಿಜಿಶಿಯನ್ ಡಾ. ನಾಗೇಶ್ ಮಾರ್ಗದರ್ಶನದಲ್ಲಿ ಲಸಿಕೆ ನೀಡುವ ಕಾರ್ಯ ಸುವ್ಯವಸ್ಥಿತವಾಗಿ ನಡೆಯಲಿದೆ.

ಲಸಿಕಾಕರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ತಾ.ಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಜಿ.ಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ, ತಹಶಿಲ್ದಾರ್ ಆನಂದಪ್ಪ, ತಾ.ಪಂ ಇಓ ಕೇಶವ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.

ಭಯ ಬೇಡ: ಮೊದಲು ಲಸಿಕೆ ಹಾಕಿಸಿಕೊಂಡವರು..
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಶುಶ್ರೂಷಾಧಿಕಾರಿ ಗಾಯತ್ರಿ ಅವರು ಮೊದಲು ವಾಕ್ಸಿನ್ ಪಡೆದು ಅರ್ಧ ಗಂಟೆ ಕಾಲ ವೀಕ್ಷಣಾ ಕೊಠಡಿಯಲ್ಲಿದ್ದರು‌. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ಮೊದಲಿಗೆ ಭಯವಾಗಿತ್ತು. ಹಿರಿಯ ಅಧಿಕಾರಿಗಳು ಧೈರ್ಯ ತುಂಬಿದರು. ಆರಾಮಾಗಿದ್ದೇನೆ. ಯಾರು ಭಯ ಪಡೋದು ಬೇಡ ಎಂದರು.

ಶಾಸಕ ಹಾಲಾಡಿ ಭೇಟಿ..
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿದ್ರು. ಈ ಸಂದರ್ಭ ಲಸಿಕಾಕರಣದ ಬಗ್ಗೆ ಮಾಹಿತಿಯನ್ನು ಪಡೆದರು‌.

(ವರದಿ- ಯೋಗೀಶ್ ಕುಂಭಾಸಿ)

Comments are closed.