ರಾಷ್ಟ್ರೀಯ

ಲಸಿಕೆ ಬಂದಿದೆ ಎಂದು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರಬೇಡಿ: ಮೋದಿ ಮನವಿ

Pinterest LinkedIn Tumblr

ನವದೆಹಲಿ: ಲಸಿಕೆ ಬಂದಿರುವುದನ್ನು ತಪ್ಪಾಗಿ ತಿಳಿದು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರಬೇಡಿ ಎಂದು ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಮನವಿ ಮಾಡಿಕೊಂಡಿದ್ದಾರೆ.

ದೇಶವ್ಯಾಪಿ ಕೊರೋನಾ ಲಸಿಕೆ ಅಭಿಯಾನಕ್ಕೆ ಆನ್’ಲೈನ್ ಮೂಲಕ ಚಾಲನೆ ನೀಡಿದ ಬಳಿಕ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಮೋದಿಯವರು, ಲಸಿಕೆ ಬಂದಿರುವುದನ್ನು ತಪ್ಪಾಗಿ ತಿಳಿದು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರಬೇಡಿ ಮೊದಲ ಡೋಸ್ ನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಂತರ ಎರಡನೇ ಡೋಸ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ.

ಸಾಮಾನ್ಯವಾಗಿ ಒಂದು ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶೀ ನಿರ್ಮಿತ ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ.

ಲಸಿಕೆಯನ್ನು ಎರಡು ಡೋಸ್ ಪಡೆಯುವುದು ಅತೀ ಮುಖ್ಯವೆಂದು ದೇಶದ ಜನತೆಗೆ ಹೇಳಲು ಬಯಸುತ್ತೇನೆ. ಈಗಾಗಲೇ ತಜ್ಞರೂ ಕೂಡ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಎರಡೂ ಲಸಿಕೆಗಳನ್ನು ಪಡೆಯುವುದಕ್ಕೆ ಒಂದು ತಿಂಗಳ ಅಂತರವಿರಬೇಕೆಂದು ಹೇಳಿದ್ದಾರೆ.

ಲಸಿಕೆ ಬಂತೆಂದು ತಪ್ಪಾಗಿ ತಿಳಿದು, ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಇರಬೇಡಿ. ಲಸಿಕೆ ಪಡೆದ ಬಳಿಕವೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿರುತ್ತದೆ.

ಇಷ್ಟು ದೊಡ್ಡ ಮಟ್ಟದ ಲಸಿಕೆ ಅಭಿಯಾನ ಇತಿಹಾಸದಲ್ಲಿಯೇ ಎಂದೂ ಆಗಿರಲಿಲ್ಲ. 3 ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ 100 ಕ್ಕೂ ಹೆಚ್ಚು ದೇಶಗಳಿವೆ. ಭಾರತವು ಮೊದಲ ಹಂತದಲ್ಲಿ ಮಾತ್ರ 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಂದು ನಾವು ಕಳೆದು ಹೊದ ವರ್ಷವನ್ನು ಹಿಂತಿರುಗಿ ನೋಡಿದಾಗ, ಒಬ್ಬ ವ್ಯಕ್ತಿಯಾಗಿ, ಕುಟುಂಬವಾಗಿ ಮತ್ತು ರಾಷ್ಟ್ರವಾಗಿ ಬಹಳಷ್ಟು ಕಲಿತಿದ್ದೇವೆಂದೆನಿಸುತ್ತಿದೆ.

ಈ ಸಾಂಕ್ರಾಮಿಕ ರೋಗವು ಜನರನ್ನು ತಮ್ಮ ಕುಟುಂಬಗಳಿಂದ ದೂರವಿರಿಸಿತು. ತಾಯಂದಿರು ತಮ್ಮ ಮಕ್ಕಳಿಗಾಗಿ ಅಳುವಂತಾಗಿತ್ತು. ದೂರವಿರಬೇಕಾಯಿತು. ಆಸ್ಪತ್ರೆಗಳಲ್ಲಿ ದಾಖಲಾದ ವೃದ್ಧರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಕೊರೋನಾದಿಂದ ಸಾವನ್ನಪ್ಪಿದವರಿಗೆ ಅಂತ್ಯ ಸಂಸ್ಕಾರಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೊರೋನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದವರು ಎದುರಿಸಿದ ಸಂಕಷ್ಟಗಳನ್ನು ನೆನೆದು ಭಾವುಕರಾದರು.

ಕೊರೋನಾ ವಿರುದ್ಧ ಹೋರಾಟದ ಅನೇತ ಹಂತಗಳಲ್ಲಿ ನಾವು ಇಡೀ ವಿಶ್ವಕ್ಕೆ ಉದಾಹರಣೆಯಾಗಿ ನಿಂತಿದ್ದೇವೆ. ಕೊರೋನಾ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ತಮ್ಮ ದೇಶದ ಪ್ರಜೆಗಳನ್ನು ಚೀನಾದಿಂದ ವಾಪಸ್ಸು ಕರೆಸಿಕೊಳ್ಳಲು ಇತರೆ ದೇಶಗಳು ಚಿಂತಿಸುತ್ತಿದ್ದಾಗ ನಾವು ವಂದೇ ಭಾರತ್ ಮಿಷನ್ ಅಡಿಯಲ್ಲಿ ನಮ್ಮ ಪ್ರಜೆಗಳನ್ನು ಮಾತ್ರವೇ ಇಲ್ಲದೆ, ಇತರೆ ದೇಶದ ಪ್ರಜೆಗಳನ್ನು ಕರೆತಂದೆವು ಎಂದು ಹೇಳಿದ್ದಾರೆ.

ದೇಶದಲ್ಲಿ ಸಾಕಷ್ಟು ಕಷ್ಟಗಳು ಎದುರಾಗಿದ್ದರೂ ಇವುಗಳ ಹೊರತಾಗಿಯೂ, ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ಔಷಧಿ ಮತ್ತು ವೈದ್ಯಕೀಯ ನೆರವನ್ನು ನೀಡಿದ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ. ಪ್ಯಾರೆಸಿಟಮಾಲ್ ಆಗಿರಲಿ, ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಪರೀಕ್ಷಾ ಸಾಧನವಾಗಲಿ, ಇತರ ದೇಶಗಳ ಜನರನ್ನು ರಕ್ಷಣೆಗೆ ಭಾರತ ಎಲ್ಲ ಪ್ರಯತ್ನಗಳನ್ನು ಮಾಡಿದೆ.

ಇಂದು ನಾವು ನಮ್ಮದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದೀಗ ಇಡೀ ವಿಶ್ವ ಭಾರತವನ್ನು ಭರವಸೆಯಿಂದ ನೋಡುತ್ತಿದೆ. ನಮ್ಮ ದೇಶದ ಲಸಿಕೆ ಅಭಿಯಾನ ಮುಂದುವರಿಯುತ್ತಿದ್ದಂತೆ, ವಿಶ್ವದ ಇತರ ದೇಶಗಳು ಇದರ ಲಾಭ ಪಡೆಯುತ್ತವೆ. ಭಾರತದ ಲಸಿಕೆ ಮತ್ತು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಮಾನವ ಹಿತಾಸಕ್ತಿಗಾಗಿ ಬಳಸಬೇಕು, ಇದು ನಮ್ಮ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.

Comments are closed.