ಆರೋಗ್ಯ

ವಿಶಿಷ್ಟ ವೈದ್ಯಕೀಯ ಸೌಲಭ್ಯಗಳುಳ್ಳ ‘ಸಾಕೇತ’ ವೈದ್ಯಕೀಯ ಪ್ರಯೋಗಾಲಯ ಉದ್ಘಾಟನೆ..!

Pinterest LinkedIn Tumblr

ಕುಂದಾಪುರ: ಜನರು ಆರೋಗ್ಯ ರಕ್ಷಣೆ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ. ಗ್ರಾಮೀಣ ಭಾಗದ ಜನರು ಆರೋಗ್ಯ ತಪಾಸಣೆಗಾಗಿ ಪಟ್ಟಣ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣ ಪ್ರದೇಶದ ಜನರು ಆರೋಗ್ಯ ತಪಾಸಣೆಗಾಗಿ ಪಟ್ಟಣ ಪ್ರದೇಶಗಳಿಗೆ ಅಲೆದಾಡುವುದನ್ನು ತಪ್ಪಿಸಲು ತ್ರಾಸಿಯ ಹೃದಯ ಭಾಗದಲ್ಲಿ ವಿಶಿಷ್ಟ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ‘ಸಾಕೇತ’ ವೈದ್ಯಕೀಯ ಪ್ರಯೋಗಾಲಯ ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಮಣಿಪಾಲ ಕೆ‌ಎಂಸಿ ಆಸ್ಪತ್ರೆಯ ನೆಫ್ರೋಲಾಜಿ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ.ರವೀಂದ್ರ ಪ್ರಭು ಹೇಳಿದರು.

ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕೊಂಕಣಿ ಖಾರ್ವಿ ಭವನದಲ್ಲಿ ಗಂಗೊಳ್ಳಿಯ ನಿನಾದ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ’ಸಾಕೇತ’ ವೈದ್ಯಕೀಯ ಪ್ರಯೋಗಾಲಯ ಹಾಗೂ ತಪಾಸಣಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಹಾಂಗ್ಯೋ ಐಸ್‌ಕ್ರೀಮ್ ಪ್ರೈ.ಲಿ. ಆಡಳಿತ ನಿರ್ದೇಶಕ ಪ್ರದೀಪ ಜಿ.ಪೈ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಂದ ಉದ್ಘಾಟನೆಗೊಂಡ ಗಂಗಾಮೃತ ಯೋಜನೆಯಡಿ ಸಾಕೇತ ವೈದ್ಯಕೀಯ ಪ್ರಯೋಗಾಲಯ ಆರಂಭಿಸಿ ಗ್ರಾಮೀಣ ಪ್ರದೇಶದ ಜನರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟ ಮಟ್ಟದ ವೈದ್ಯಕೀಯ ಪ್ರಯೋಗಾಲಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮತ್ತು ಆಯಾ ಸಂದರ್ಭಕ್ಕೆ ತಕ್ಕಂತೆ ಜನಸಾಮಾನ್ಯರ ಬೇಡಿಕೆಗಳಿಗೆ ಹಾಗೂ ಅವಶ್ಯಕತೆಗಳಿಗೆ ಸ್ಪಂದಿಸಲು ಮುಂದಾಗಿರುವುದು ಅಭಿನಂದನೀಯ ಎಂದರು.

ಉಡುಪಿ ಶೆಣೈ ಮೆಡಿಕಲ್ ಸೆಂಟರ್‌ನ ಡಾ.ಸುಖಾನಂದ ಶೆಣೈ, ಗಂಗೊಳ್ಳಿ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ಜಿ.ವೇದವ್ಯಾಸ ಕೆ.ಆಚಾರ್ಯ, ಸಾಕೇತ ವಿಶೇಷ ಸಮಿತಿ ಸಂಚಾಲಕ ಡಾ.ಸಂದೀಪ ಕೆ.ಪೈ ಶುಭಾಶಂಸನೆಗೈದರು. ನಿನಾದ ಚಾರಿಟೇಬಲ್ ಟ್ರಸ್ಟ್‌ನ ವಿಶ್ವಸ್ಥರು, ಸಾಕೇತ ವಿಶೇಷ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಪ್ರಯೋಗಾಲಯ ಪ್ರಾರಂಭಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.

ನಿನಾದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಮುಕುಂದ ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಸಾಕೇತ ವಿಶೇಷ ಸಮಿತಿ ಕಾರ್ಯದರ್ಶಿ ಡಾ.ದಿನೇಶ ಎಂ.ನಾಯಕ್ ವಂದಿಸಿದರು.

 

Comments are closed.