ಆರೋಗ್ಯ

ಬ್ರಹ್ಮಾವರ ಬಳಿ ಕಾಡೂರಿನಲ್ಲಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಲೋಕಾರ್ಪಣೆ

Pinterest LinkedIn Tumblr

ಉಡುಪಿ: ಘನತ್ಯಾಜ್ಯ ಘಟಕಗಳನ್ನು ಬ್ರ್ಯಾಂಡಿಂಗ್ ಮಾಡುವ ಕಾರ್ಯ ಉತ್ತಮವಾಗಿದ್ದು, ಉಡುಪಿ ಜಿಲ್ಲೆ ಈ ದಿಸೆಯಲ್ಲಿ ಮಾದರಿಯ ಹೆಜ್ಜೆಗಳನ್ನಿಟ್ಟಿದೆ ಎಂದು ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಹೇಳಿದ್ದಾರೆ.

ಬ್ರಹ್ಮಾವರ ಸಮೀಪದ ಕಾಡೂರು ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಂಡಿಂಗ್ ಲೋಕಾರ್ಪಣೆ ಮತ್ತು ಸ್ವಚ್ಛೋತ್ಸವ – ನಿತ್ಯೋತ್ಸವ ಮಾಸಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯ ಕುರಿತು ನಾಗರಿಕರು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕು ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಂದಾಡಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮನ್ವಯವಿದ್ದರೆ ಸ್ವಚ್ಚತೆಯೂ ಸೇರಿದಂತೆ ಸಮಗ್ರ ಸಾಧನೆ ಮಾಡಬಹುದು ಎಂಬುದಕ್ಕೆ ಕಾಡೂರು ಗ್ರಾಮ ಪಂಚಾಯತ್ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು. ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಆದಾಯ ಗಳಿಸುವ ಜಿಲ್ಲಾಡಳಿತದ ನಿರಂತರ ಪ್ರಯತ್ನ ಈಗ ಫಲ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯತ್ ಸದಸ್ಯ ಭುಜಂಗ ಶೆಟ್ಟಿ ಕಾಡೂರು ಮಾತನಾಡಿ, ತ್ಯಾಜ್ಯ ನಿರ್ವಹಣೆ ಕುರಿತು ವೈಯಕ್ತಿಕ ಹಂತದಿಂದ ಜಾಗೃತಿ ಮಾಡಿದರೆ ಕಾರ್ಯ ಸುಲಭ ಎಂದು ತಿಳಿಸಿದರು. ಕಾಡೂರು- ನಡೂರು ಗ್ರಾಮಗಳ ಪ್ರಯತ್ನ ಎಲ್ಲಾ ಗ್ರಾಮಗಳಲ್ಲಿ ಅನುಷ್ಠಾನವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು, ಬ್ರಹ್ಮಾವರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಹೆಚ್.ವಿ.ಇಬ್ರಾಹಿಂಪೂರ, ಕಾಡೂರು ಗ್ರಾ.ಪಂ ಆಡಳಿತಾಧಿಕಾರಿ ಮಂಜುನಾಥ ಅಡಿಗ, ಸ್ವಚ್ಚ ಭಾರತ್ ವಿಷನ್‌ನ ಜಿಲ್ಲಾ ಸಮಾಲೋಚಕ ಸುಧೀರ್ ಹಾಗೂ ಪ್ರದೀಪ್, ಗ್ರಾ.ಪಂ ಮಾಜಿ ಸದಸ್ಯರಾದ ಸತ್ಯನಾರಾಯಣ ಶೆಟ್ಟಿ, ನಾಗರತ್ನ, ಹೆಗ್ಗುಂಜೆ ಗ್ರಾ.ಪಂ ಪಿಡಿಓ ಅನಿಲ್ ಕುಮಾರ್, ಶ್ರೀವಾಣಿ ಪ್ರೌಢಶಾಲೆ ಮುಖ್ಯ ಗುರು ವಿಶ್ವನಾಥ ಶೆಟ್ಟಿ, ಸ್ವಚ್ಚತಾ ಕಾರ್ಯಕರ್ತರು, ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಹೇಶ್ ಕೆ ಸ್ವಾಗತಿಸಿ, ನಿರೂಪಿಸಿದರು.

Comments are closed.