ಆರೋಗ್ಯ

ಪ್ರಧಾನಿ ‘ಆತ್ಮನಿರ್ಭರ’ಕ್ಕೆ ಮೂವರು ವೈದ್ಯರ ಸ್ಪಂದನೆ | ‘ರಕ್ಷಾ ಪಂಚಕ್ ಕಿಟ್’ ತಯಾರಿಯಿಂದ 15 ಮಂದಿಗೆ ಉದ್ಯೋಗ!

Pinterest LinkedIn Tumblr

ಕುಂದಾಪುರ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೊಡ್ಡ ಕಂಪನಿಗಳು ಅಲ್ಲದೆ ಬೇರೆ ಬೇರೆ ಕಡೆ ಉದ್ಯೋಗದಲ್ಲಿರುವವರು ಉದ್ಯೋಗ ಕಳೆದುಕೊಳ್ಳುತ್ತಿದ್ದರೆ, ಅತ್ಯಂತ ಗ್ರಾಮೀಣ ಭಾಗದಲ್ಲಿ ಮೂವರು ವೈದ್ಯರು ಸೇರಿ ಉದ್ಯೋಗ ಸೃಷ್ಟಿಸಿದ್ದಲ್ಲದೆ ಹದಿನೈದಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ಮನಸ್ಸಿದ್ದರೆ ಮಾರ್ಗ ಎನ್ನೋದನ್ನು ನಿರೂಪಿಸಿದ್ದಲ್ಲದೇ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಮುನ್ನುಡಿ ಬರೆದಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿಯಿದು.

‘ಲೋಕಲ್ ವೋಕಲ್ ಆಗಬೇಕು, ಅದುವೇ ಗ್ಲೋಬಲ್ ಆಗಬೇಕು’ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಹತ್ವದ ಸಂದೇಶ. ಇದು ಅಲ್ಲಲ್ಲಿ ಆತ್ಮನಿರ್ಭರ ಭಾರತದ ನಮೋ ಪರಿಕಲ್ಪನೆಯ ಜೊತೆಗೆ ಕಾರ್ಯರೂಪಕ್ಕೆ ಬಂದಿದೆ. ಮಾರ್ಚಿನಿಂದ ಮಹಾಮಾರಿಯಂತೆ ಕಾಡತೊಡಗಿದ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆ ಹಲವು ರೋಗ ನಿರೋಧಶಕ್ತಿ ವರ್ಧಕಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅಂತಹ ಐದು ಆರೋಗ್ಯ ಪೂರಕಗಳ “ರಕ್ಷಾ ಪಂಚಕ ಕಿಟ್’ ಕುಂದಾಪುರ ತಾಲ್ಲೂಕಿನ ಆಲೂರು ಎಂಬ ಪುಟ್ಟ ಹಳ್ಳಿಯಲ್ಲಿ ಸಿದ್ಧವಾಗಿ ಗ್ರಾಹಕರ ಗಮನ ಸೆಳೆಯುತ್ತಿದೆ. ಅಲ್ಲಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಿರುವ ಡಾಕ್ಟರ್ ರಾಜೇಶ ಬಾಯರಿ, ಡಾಕ್ಟರ್ ಅನುಲೇಖಾ ಬಾಯರಿ ಹಾಗೂ ಮರವಂತೆ ಚೇತನಾ ಚಿಕಿತ್ಸಾಲಯ ವೈದ್ಯೆ ಡಾ.ರೂಪಶ್ರಿ ರೂಪಶ್ರೀ ಸೇರಿಕೊಂಡು ಇದನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಜನರ ಸ್ವಾಸ್ಥ್ಯದ ಕಲ್ಪನೆಯ ಜೊತೆ ಸ್ಥಳೀಯ ಸುಮಾರು 15 ಮಂದಿ ಯುವಕ ಯುವತಿಯರಿಗೆ ಉದ್ಯೋಗ ದೊರೆಯುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತಕ್ಕಾಗಿ ಕರೆ ಕೊಟ್ಟಿರುವುದು ಈ ಹೊಸ ಸಾಹಸಕ್ಕೆ ಪ್ರೇರಣೆ. ರಕ್ಷಾ ಪಂಚಕ್ ಕಿಟ್ ಸಿದ್ದ ಪಡಿಸುವ ಸಾಹಸಕ್ಕೆ ಕೈ ಹಾಕಿದ ನಂತರ ಕೆಲಸ ಕೊಡುವ ಶಕ್ತಿಯೂ ವೃದ್ಧಿಸಿದೆ. ಹಿಂದೆ ಇದ್ದ ಎಲ್ಲಾ ಕೆಲಸಗಾರರ ಉಳಿಸಿಕೊಳ್ಳುವ ಜೊತೆ ಇನ್ನಷ್ಟು ಕೆಲಸಗಾರರ ಸೇರಿಸಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಎಸ್ಸೆಸ್‌ಎಲ್ಸಿ, ಪಿಯುಸಿ ಮುಗಿಸಿ ಮನೆಯಲ್ಲಿದ್ದವರು ಕಿಟ್ ಸಿದ್ದ ಪಡಿಸುವ ವೃತ್ತಿಯಲ್ಲಿ ತೊಡಗಿದ್ದಾರೆ.

ಆಲೂರಿನಲ್ಲಿರುವ ಚಿತ್ರಕೂಟ ತಯಾರಿಸುತ್ತಿರುವ ಈ ಉತ್ಪನ್ನಗಳ ಗುಣವಿಶೇಷಗಳನ್ನು ರಕ್ಷಾ ಪಂಚಕ ಕಿಟ್ ಹೆಸರೇ ಸೂಚಿಸುವಂತೆ ಐದು ಆರೋಗ್ಯ ರಕ್ಷಕಗಳನ್ನು ಒಳಗೊಂಡಿದೆ. ಆಯುರ್ವೇದೀಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಇವುಗಳನ್ನು ಸಿದ್ಧಪಡಿಸಲಾಗುತ್ತಿದೆ. ಹಾಲಿನೊಂದಿಗೆ ನೇರವಾಗಿ ಸೇವಿಸುವ ‘ಸ್ವಾಸ್ಥ್ಯ ರಸಾಯನ’ ಪೌಷ್ಠಿಕಾಂಶ ಭರಿತ ಪೂರಕ ಆಹಾರ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ, ಚೈತನ್ಯ ನೀಡುತ್ತದೆ. ‘ರಕ್ಷಕ್ ಹರ್ಬಲ್ ಟೀ’ ಪೌಡರ್ ಉತ್ತಮ ಸ್ವಾಸ್ಥ್ಯ ಪೇಯ. ಈ ಆಹ್ಲಾದಕರ ಪಾನೀಯಕ್ಕೆ ರೋಗನಿರೋಧಕ ಶಕ್ತಿ, ಸ್ಮರಣ ಶಕ್ತಿ ಹೆಚ್ಚಿಸುವ ಗುಣದ ಜತೆಗೆ ಶೀತಜ್ವರ, ಚರ್ಮ ಮತ್ತು ವಾತ ಸಂಬಂಧಿ ಕಾಯಿಲೆ ದೂರ ಮಾಡುವ ಗುಣ ಇದೆ. ಸಕ್ಕರೆ ಕಾಯಿಲೆಯವರೂ ಬಳಸಬಹುದು. ಬಾಯಿ, ಗಂಟಲು ಸ್ವಚ್ಛಗೊಳಿಸಿ, ಅಂಟು ಕಫ ನಿವಾರಿಸಿ, ವೈರಾಣುಗಳಿಂದ ರಕ್ಷಿಸುವ ‘ಸ್ವರಸುಧಾ’ ನೀರು ಬೆರೆಸಿ ಬಾಯಿ ಮುಕ್ಕಳಸಿ ಗಂಟಲು ಶುಚಿಪಡಿಸಿಕೊಳ್ಳುವ ಪುಡಿ. ‘ನಾಸಾಮೃತ’ವನ್ನು ಮೂಗಿನ ಹೊಳ್ಳೆಗಳಿಗೆ ಬಿಟ್ಟುಕೊಳ್ಳುವುದರಿಂದ ವೈರಾಣು, ಧೂಳಿನೊಂದಿಗೆ ಬರುವ ಕ್ರಿಮಿಗಳು ಒಳಪ್ರವೇಶಿಸದಂತೆ ತಡೆಯುತ್ತದೆ. ‘ರಕ್ಷೆಘ್ನ ಧೂಪ’ದಿಂದ ಮನೆಯಲ್ಲಿ ಹೊಗೆ ಹಾಕುವ ಮೂಲಕ ಒಳಾಂಗಣವನ್ನು ಕ್ರಿಮಿಕೀಟ ಮುಕ್ತಗೊಳಿಸಬಹುದು. ಈ ಉತ್ಪನ್ನಗಳ ತಯಾರಿ ಮತ್ತು ಮಾರಾಟಕ್ಕೆ ನಿಗದಿತ ಸಂಸ್ಥೆಯಿಂದ ಅನುಮೋದನೆ ಪಡೆಯಲಾಗಿದೆ. ಸ್ಥಳೀಯ ಆಸಕ್ತರಿಗೆ, ಹಾಗೂ ಚಿತ್ರಕೂಟಕ್ಕೆ ಬರುವ ರೋಗಿಗಳಿಗೆ ಇವುಗಳನ್ನು ನೀಡಲಾಗಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

ಮುಂದಿನ ದಿನಗಳಲ್ಲಿ ರಕ್ಷಾ ಕಿಟ್ ಉತ್ಪಾದನೆ ಹೆಚ್ಚಿಸಿ, ದೊಡ್ಡಮಟ್ಟದಲ್ಲಿ ಆರಂಭಿಸುವ ಜೊತೆ ನೂರಾರು ಜನರಿಗೆ ಉದ್ಯೋಗ ನೀಡುವ ಯೋಜನೆ ಕೂಡಾ ಈ ಮೂವರು ವೈದ್ಯರ ತಲೆಯಲ್ಲಿದೆ. ಒಟ್ಟಾರೆ ಕರೋನಾ ಉದ್ಯೋಗ ಕಳೆಯಿತು ಎನ್ನುವ ಆರೋಪದ ನಡುವೆ ಉದ್ಯೋಗ ಸೃಷ್ಟಿಗೂ ವಿಫುಲ ಅವಕಾಶಗಳಿದೆ ಎನ್ನೋದನ್ನು ಇವರು ತೋರಿಸಿಕೊಟ್ಟಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

 

Comments are closed.