ಕರ್ನಾಟಕ

ಲೈಂಗಿಕ ದೌರ್ಜನ್ಯ ಹಿನ್ನೆಲೆ :ಕೋವಿಡ್ ಕೇರ್ ಆರೈಕೆ ಕೇಂದ್ರಗಳಲ್ಲಿ ಮಹಿಳೆಯರ ಭದ್ರತೆಗಾಗಿ ಹೊಸ ಯೋಜನೆ

Pinterest LinkedIn Tumblr

ರಾಜ್ಯದ ಹಲವೆಡೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಘಟನೆಗಳು ವರದಿಯಾಗಿದ್ದು, ಅಂತಹ ಘಟನೆಗಳು ಮರುಕಳಿಸದಂತೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಸೂಚಿಸಿದರು.

ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಕೇರ್ ಆರೈಕೆ ಕೇಂದ್ರಗಳಲ್ಲಿ ಮಹಿಳೆಯರಿಗೆ ಭದ್ರತೆ ನೀಡಬೇಕಲ್ಲದೇ, ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದರು.

ಸಾಂತ್ವನ ಮತ್ತು ಸ್ವಾಧಾರ ಕೇಂದ್ರ ಸೇರಿದಂತೆ ಮಹಿಳಾ ಪುನರ್ವಸತಿ ಕೇಂದ್ರಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಶ್ರಯ ಯೋಜನೆಯಡಿ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಅವರಿಗೆ ಭದ್ರತೆ ಒದಗಿಸಿಕೊಡಬೇಕೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಹೆಚ್.ಹೆಚ್.ಕುಕನೂರ ಮಾತನಾಡಿ, ಹಿರಿಯ ಮಹಿಳಾ ನಾಗರಿಕರಿಗೆ ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆಯಡಿ 73,911 ಜನರಿಗೆ ಮಾಶಾಸನ ನೀಡಲಾಗುತ್ತಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರ ಮಾಡುವ 72 ಮಹಿಳೆಯರಿಗೆ ತಲಾ 10 ಸಾವಿರ ಸಹಾಯಧನ ನೀಡಿದೆ. ಜಿಲ್ಲೆಯಲ್ಲಿ ಒಟ್ಟು 4368 ದಮನಿತ ಮಹಿಳೆಯರಿದ್ದು, 2014 ರಿಂದ 2020ನೇ ಸಾಲಿನವರೆಗೆ ಚೇತನಾ ಯೋಜನೆಯಡಿ 84 ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. 822 ಲಿಂಗತ್ವ ಅಲ್ಪಸಂಖ್ಯಾತರು ಇದ್ದು, ಆರ್ಥಿಕ ಚಟುವಟಿಕೆ ಕೈಗೊಳ್ಳಲು 50 ಸಾವಿರ ಸಹಾಯಧನ ನೀಡಲಾಗುತ್ತಿದೆ ಎ೦ದರು.

Comments are closed.