ಆರೋಗ್ಯ

ಹೃದಯಾಘಾತವಾದರೆ ಆ ಕ್ಷಣಕ್ಕೆ ಏನು ಮಾಡಬೇಕು?

Pinterest LinkedIn Tumblr


ಹೃದಯಾಘಾತವು ತೀವ್ರ ತರಹದ ತುರ್ತಚಿಕಿತ್ಸೆಯ ಪ್ರಸಂಗವಾಗಿದೆ. ಕ್ಷಣಾರ್ಧದ ಅಲಕ್ಷವೂ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು. ಆದರೂ ಬಹಳಷ್ಟು ಜನ ಹೃದಯಾಘಾತವಾಗಿದೆ ಎಂದು ಸ್ವಂತಕ್ಕೆ ಎಂದುಕೊಂಡರೂ ಗ್ಯಾಸ್ ಆಗಿದೆ ಎಂದು ಸಮಾಧಾನಪಟ್ಟುಕೊಂಡು ಎದೆನೋವನ್ನು ಅಲಕ್ಷಿಸುವರು. ಹಲವು ಬಾರಿ ಎದೆಯ ಮಧ್ಯಭಾಗದಲ್ಲಿ ನೋವು ಇಲ್ಲದೆ ಕುತ್ತಿಗೆ, ಎಡಗೈ (ಬಲಗೈ) ಹೊಟ್ಟೆಯ ಮೇಲ್ಭಾಗದಲ್ಲಿ ಮಾತ್ರ ಕಂಡುಬರುವುದು. ಹೃದಯಾಘಾತವಾದ ತಕ್ಷಣ ಅದರ ಹಾನಿಕಾರಕ ಪ್ರಭಾವವು ಹೃದಯದ ಸ್ನಾಯು ಎಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ದೊಡ್ಡ ಗಾತ್ರದ ರಕ್ತನಾಳಗಳು ಹೆಪ್ಪುಗಟ್ಟಿದ ರಕ್ತದಿಂದ ಪೂರ್ತಿ ಮುಚ್ಚಿದಾಗ ಹೃದಯದ ಹೆಚ್ಚು ಸ್ನಾಯುಗಳು ಹಾನಿಗೊಂಡು ‘ತುರಂತ ಹೃದಯಸ್ತಂಭನ’ (Cardiac Arrest) ಆಗುವ ಸಾಧ್ಯತೆ ಹೆಚ್ಚು.

ಲಘು ಹೃದಯಾಘಾತ ಆದರೆ ಎದೆನೋವು ಕೂಡ ಸಾಮಾನ್ಯವಾಗಿದ್ದು, ಜೀವದ ಅಪಾಯ ಕಡಿಮೆ. ಆದರೆ ಇಂಥ ಗೊತ್ತಾಗದ ಹೃದಯಾಘಾತವು ಕಾಲಾಂತರದಲ್ಲಿ ಹೃದಯದ ಸಾಮರ್ಥ್ಯವು ಕಡಿಮೆ ಆಗಿ ಏದುಸಿರು, ಕಾಲುಬಾವು, ಎದೆನೋವು ಕಂಡುಬರುವುದು. ನೂರು ಜನರಿಗೆ ಹೃದಯಾಘಾತವಾದಲ್ಲಿ 75 ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಇವರಲ್ಲಿ 50 ಜನ ಗುಣವಾಗಿ ಹೃದಯದ ಬೈಪಾಸ್ ಆಪರೇಷನ್ ಇಲ್ಲವೇ ಕೊರೊನರಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟಂಟ್ ಅಳವಡಿಸಿಕೊಂಡು ಮನೆಗೆ ತೆರಳುತ್ತಾರೆ.

ಸಾಮಾನ್ಯವಾಗಿ ಹೃದಯಾಘಾತವಾದವರು ಕನಿಷ್ಠ ಮೂರು ತಾಸಿನ ನಂತರ ಆಸ್ಪತ್ರೆಗೆ ದಾಖಲಾಗುತ್ತಾರೆ. ಬೇಗನೆ ದಾಖಲಾದಷ್ಟೂ ಬದುಕುವ ಸಾಧ್ಯತೆ ಹೆಚ್ಚು. ಈ ಮೇಲಿನ ಮೂರು ತಾಸಿಗೆ ‘ಬಂಗಾರದ ಸಮಯ’ (Golden Period) ಎಂದು ಕರೆಯುತ್ತಾರೆ. ಮನೆಯಲ್ಲಿ ಅಥವಾ ಎಲ್ಲಿಯೇ ಹೃದಯಾಘಾತವಾದ ಸಮಯದಲ್ಲಿ ಆ ವ್ಯಕ್ತಿಯನ್ನು ಕೂಡಿಸಬೇಕು. ಮಲಗಿಸಿದಲ್ಲಿ ತುಂಬ ಉತ್ತಮ. ಶರ್ಟಿನ ಅಥವಾ ಎದೆಯ ಮೇಲಿನ ವಸ್ತ್ರದ ಗುಂಡಿಗಳನ್ನು ಬಿಚ್ಚಬೇಕು. ವಸ್ತ್ರವನ್ನು ಸರಿಸಿ ಎದೆಯನ್ನು ಗಾಳಿಗೆ ಒಡ್ಡಬೇಕು. ಜನರು ನುಗ್ಗಿ ಗಡಿಬಿಡಿ ಮಾಡಿ ರೋಗಿಯ ಆತಂಕವನ್ನು ಹೆಚ್ಚಿಸಬಾರದು. ಮುಂಚಿನಿಂದಲೇ ಹೃದಯಬೇನೆ ಇದ್ದಲ್ಲಿ ನೈಟ್ರೋಗ್ಲಿಸರಿನ್ (nitroglycerin) ಎಂಬ ಗುಳಿಗೆ ಇದ್ದರೆ ಅದನ್ನು ನಾಲಿಗೆಯ ಮೇಲೆ ಇಡಬೇಕು. ಆಸ್ಪರಿನ್ (aspirin) ಗುಳಿಗೆ ದೊರೆತರೆ ಅದನ್ನು ಕಡಿದು ನುಂಗಲು ಹೇಳಬೇಕು. ಸಮಯ ವ್ಯರ್ಥ ಮಾಡದೆ ಕೂಡಲೇ ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಸಾಗಿಸಬೇಕು. ಆಂಬುಲೆನ್ಸ್ ಮೂಲಕ ಸಾಗಿಸಿದರೆ ಉತ್ತಮ. ಎಚ್ಚರ ತಪ್ಪಿದಲ್ಲಿ, ಮೈ-ಕೈ ತಣ್ಣಗಾಗುತ್ತಿದ್ದರೆ ಸಿಪಿಆರ್ (cardiopulmonary resuscitation) ಮಾಡಬೇಕು. ಇದನ್ನು ಇಂಟರ್​ನೆಟ್ ನೋಡಿ ಕೂಡ ಕಲಿಯಬಹುದು. ಅಂಗೈಯಿಂದ ಎದೆಯ ಸ್ವಲ್ಪ ಎಡಭಾಗವನ್ನು ಮಧ್ಯಮ ಒತ್ತಡದಿಂದ ಕೆಳಕ್ಕೆ ಸಮಯದ ಅಂತರವಿಟ್ಟು ಪ್ರತೀ ನಿಮಿಷಕ್ಕೆ 100ರಿಂದ 120ರಷ್ಟು ಸಾರಿ ಪ್ರೆಸ್ ಮಾಡಬಹುದು.

ಇಂಥ ಹೃದಯಸ್ತಂಭನ ಅವಸ್ಥೆಯಲ್ಲಿ ಧೈರ್ಯದಿಂದ ವೈಜ್ಞಾನಿಕವಾಗಿ ಮಾಡá-ವ ಈ ಸಣ್ಣ ನೆರವೂ ಜನರ ಜೀವ ಉಳಿಸಬಲ್ಲದು. ನೀರು ಕುಡಿಸಲು ಯತ್ನಿಸಬಾರದು. ಆಸ್ಪತ್ರೆಗೆ ಒಯ್ಯಲು ಅನುಮತಿಸದಿದ್ದಲ್ಲಿ ಸಮಯ ವ್ಯರ್ಥಮಾಡದೆ ಅವರ ಮನವೊಲಿಸಬೇಕು. ಒಂದುವೇಳೆ ತೀವ್ರ ಎದೆನೋವು ಪ್ರಮಾಣ ಕಡಿಮೆಯಾದರೂ ಆಸ್ಪತ್ರೆಗೆ ಸಾಗಿಸುವುದು ಉತ್ತಮ. ಆಂಬುಲೆನ್ಸ್​ನಲ್ಲಿ ಹೃದಯಸ್ತಂಭನವಾದಲ್ಲಿ ಡಿಫಿಬ್ರಿಲೇಟರ್ ಎಂಬ ಉಪಕರಣದಿಂದ ಎದೆಗೆ ಶಾಕ್ ಕೊಟ್ಟು ಹೃದಯಬಡಿತವನ್ನು ಪುನಃ ಪ್ರಾರಂಭಿಸುವ ಪ್ರಯತ್ನವನ್ನು ನುರಿತ ಸಿಬ್ಬಂದಿ ಮಾಡುತ್ತಾರೆ. ಒಮ್ಮೆ ಆಸ್ಪತ್ರೆಯ ತುರ್ತು ಘಟಕದಲ್ಲಿ ದಾಖಲಾದರೆ ನುರಿತ ಹೃದಯ ವೈದ್ಯರಿಂದ ತ್ವರಿತವಾಗಿ ಮುಂದಿನ ಚಿಕಿತ್ಸೆ ಆರಂಭಿಸಲಾಗುತ್ತದೆ.

Comments are closed.