ಮನೋರಂಜನೆ

ಶಿವಮೊಗ್ಗ ಜಿಲ್ಲೆಯ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ ‘ಕಿಚ್ಚ’ ಸುದೀಪ್‌

Pinterest LinkedIn Tumblr


ನಟ ‘ಕಿಚ್ಚ’ ಸುದೀಪ್ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗಾಗಲೇ ಈ ಟ್ರಸ್ಟ್‌ ಮೂಲಕ ಅನೇಕ ಜನಪರ ಕೆಲಸಗಳು ನಡೆದಿವೆ. ಕೆಲ ದಿನಗಳ ಹಿಂದಷ್ಟೇ ತುಮಕೂರಿನ ವೃದ್ದರೊಬ್ಬರ ಮನೆಗೆ ವಿದ್ಯುತ್‌ ವ್ಯವಸ್ಥೆಯನ್ನು ಈ ಟ್ರಸ್ಟ್ ಮಾಡಿಕೊಟ್ಟಿತ್ತು. ಅದಕ್ಕೂ ಹಿಂದೆ ಚಿತ್ರದುರ್ಗ ಜಿಲ್ಲೆಯ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿತ್ತು. ಇದೀಗ ಶಿವಮೊಗ್ಗ ಜಿಲ್ಲೆಯ 4 ಸರ್ಕಾರಿ ಶಾಲೆಗಳನ್ನು ಟ್ರಸ್ಟ್ ದತ್ತು ಪಡೆದುಕೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮ, ಹಾಳಸಸಿ ಗ್ರಾಮ, ಎಂ.ಎಲ್. ಹಳ್ಳಿ ಹಾಗೂ ಎಸ್. ಎನ್. ನಗರದ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್‌ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ. ಶಾಲೆಗಾಗಿ ನಾವು-ನೀವು ಯೋಜನೆಯಡಿ ಈ ಎಲ್ಲ ಶಾಲೆಗಳನ್ನು ದತ್ತು ಪಡೆಯಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ಶುದ್ಧ ಕುಡಿಯುವ ನೀರಿನ ಘಟಕ, ಆಟದ ಸಾಮಗ್ರಿಗಳು, ಸ್ಮಾರ್ಟ್‌ ಕ್ಲಾಸ್ ವ್ಯವಸ್ಥೆ, ಇಂಟರ್‌ನೆಟ್‌ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್, ಸೋಲಾರ್, ಕೊಠಡಿಗಳ ರಿಪೇರಿ, ಶಿಕ್ಷಕರಿಗೆ ಲಾಕರ್ ವ್ಯವಸ್ಥೆ, ಸುಸಜ್ಜಿತ ಅಡುಗೆ ಕೋಣೆ ಮುಂತಾದ ಅಗತ್ಯತೆಗಳನ್ನು ಪೂರೈಸಲು ಟ್ರಸ್ಟ್ ನಿರ್ಧರಿಸಿದೆ.

ಈ ಹಿಂದೆ ಟ್ರಸ್ಟ್ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಮೂರು ಹಾಗೂ ಹಿರಿಯೂರು ತಾಲ್ಲೂಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಾಗಿತ್ತು. ಈ ಗಡಿಭಾಗದ ತಾಲ್ಲೂಕಿನ, ಅದರಲ್ಲೂ ಬರಪೀಡಿತ ಪ್ರದೇಶದ ಈ ಶಾಲೆಗಳನ್ನು ದತ್ತು ಪಡೆದು, ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ ಟ್ರಸ್ಟ್ ಮುಂದಾಗಿದ್ದಕ್ಕೆ ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇನ್ನು, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ರಾಧಮ್ಮ ಮತ್ತು ನಾಗರಾಜು ಎಂಬುವರು ಮೂರು ವರ್ಷಗಳ ಹಿಂದೆ ಕಟ್ಟಿಸಿದ್ದ ಮನೆಗೆ ವಿದ್ಯುತ್‌ ಸಂಪರ್ಕ ಇರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಟ್ರಸ್ಟ್‌ನ ಸದಸ್ಯರು ಆ ಮನೆಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದರು. ಇದರಿಂದ ಸಂತೋಷಗೊಂಡ ಆ ಕುಟುಂಬದವರು ಸುದೀಪ್‌ಗೆ ಧನ್ಯವಾದಗಳನ್ನು ತಿಳಿಸಿದ್ದರು.

ಪ್ರಸ್ತುತ ಸುದೀಪ್ ಹೈದರಾಬಾದ್‌ನಲ್ಲಿದ್ದು, ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ನಾಳೆ (ಆ.10) ಈ ಚಿತ್ರದ ಮೊದಲ ಫಸ್ಟ್‌ ಲುಕ್ ರಿಲೀಸ್ ಆಗಲಿದೆ.

Comments are closed.