ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಸಿಎಂ ಅವರ ಪುತ್ರಿ ಪದ್ಮಾವತಿ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಪದ್ಮಾವತಿ ಅವರು ಸಿಎಂ ಬಿಎಸ್ವೈ ಜತೆ ಬೆಂಗಳುರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯಮಂತ್ರಿಯವರ ಪುತ್ರ ವಿಜಯೇಂದ್ರಗೆ ಕರೊನಾ ನೆಗೆಟಿವ್ ರಿಪೋರ್ಟ್ ಬಂದಿದ್ದು ಸದ್ಯ ಅವರು ಕ್ವಾರೆಂಟೈನ್ ನಲ್ಲಿದ್ದಾರೆ ಎನ್ನಲಾಗಿದೆ.

ಸಿಎಂ ಕಚೇರಿಯಲ್ಲಿ ಸಿಬ್ಬಂದಿಗೆ ಸಾಮೂಹಿಕ ಟೆಸ್ಟ್ ಮಾಡಿಸಲಾಗಿದೆ. ಮುಖ್ಯಮಂತ್ರಿಗಳ ಟ್ರಾವೆಲ್ ಹಿಸ್ಟರಿ ಪ್ರಕಾರ, ರಾಜ್ಯಪಾಲರ ಭೇಟಿ, ಕಸ್ತೂರಿರಂಗನ್ಗೆ ಸನ್ಮಾನ, ಸಚಿವರಾದ ಬೊಮ್ಮಾಯಿ, ಅಶ್ವಥ್ ನಾರಾಯಣ, ಸುಧಾಕರ್ ಹಾಗೂ ಸೋಮಣ್ಣ ಸೇರಿ ಹಲವು ಸಚಿವರ ಜೊತೆ ಸಭೆ ನಡೆಸಿರುವುದರಿಂದ ಎಲ್ಲರು ಇಂದು ಕರೊನಾ ಟೆಸ್ಟ್ ಒಳಗಾಗಲಿದ್ದಾರೆ ಎನ್ನುವ ಮಾಹಿತಿಯಿದೆ. ಇನ್ನು ಹೆಚ್.ಎಸ್.ಆರ್ ಲೇಔಟ್ನಲ್ಲಿ ನಡೆದ ಕಾರ್ಯಕ್ರಮಕ್ಕೂ ಸಿಎಂ ತೆರಳಿದ್ದರು. ಕಿಯೋನಿಕ್ಸ್ ವೇರ್ ಹೌಸಿಂಗ್ , ಇನ್ ಕ್ಯೂಬೇಷನ್ ಮತ್ತು ಸ್ಟಾರ್ಟಪ್ ಸಂಸ್ಥೆಗಳ ಸೌಲಭ್ಯಕ್ಕಾಗಿ ನಿರ್ಮಿಸಲಾದ ನೂತನ ಕಟ್ಟಡವನ್ನು ಅವರು ಉದ್ಘಾಟನೆ ಮಾಡಿದ್ದರು.
ಸದ್ಯ ಆಸ್ಪತ್ರೆಯಲ್ಲಿರುವ ಸಿಎಂ ಹಾಗೂ ಅವರ ಪುತ್ರಿಗೆ ಸಿಎಂ ನಿವಾಸದಿಂದಲೇ ಉಪಹಾರ ತರಿಸಲಾಗಿದೆ. ಸಿಎಂ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಯಾವುದೇ ಸಮಸ್ಯೆಯಿಲ್ಲ ಎಂದು ಮೂಲಗಳು ತಿಳಿಸಿದೆ.
Comments are closed.